Advertisement

YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?

04:41 PM Dec 25, 2024 | Team Udayavani |

ಇನ್ನೇನು ಕೆಲವೇ ದಿನಗಳಲ್ಲಿ 2024 ಮುಕ್ತಾಯಗೊಂಡು, ಹೊಸ ವರ್ಷಕ್ಕೆ ಕಾಲಿಡಲಿದ್ದೇವೆ. ಈ ವರ್ಷ ಕೆಲವು ಗಣ್ಯ ವ್ಯಕ್ತಿಗಳಿಗೆ ಗುರಿ ಸಾಧಿಸಿದ ಸಾರ್ಥಕ ವರ್ಷವಾಗಿ ಪರಿಣಮಿಸಿದೆ. ಕಳೆದ 12 ತಿಂಗಳ ಹಿನ್ನೋಟ ಪರಿಶೀಲಿಸಿದರೆ ಅದು ತಿಳಿಯುತ್ತದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡಾ ಒಬ್ಬರಾಗಿದ್ದಾರೆ. 2024ರಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಕುಗ್ಗಿಲ್ಲ ಎನ್ನುವುದಕ್ಕೆ 2024ರಲ್ಲಿ ನಡೆದ ಲೋಕಸಭಾ ಚುನಾವಣೆಯೂ ಸಾಕ್ಷಿಯಾಗಿದೆ. ಈ ಹಿನ್ನೆಲೆಯಲ್ಲಿ 2024ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕೆಲವೊಂದು ಮಹತ್ವದ ಸಾಧನೆಯ ವಿವರವನ್ನು ಪರಿಶೀಲಿಸೋಣ…

Advertisement

*ಲೋಕಸಭಾ ಚುನಾವಣೆ:

2024ರಲ್ಲಿ ನಡೆದ ಜಿದ್ದಾಜಿದ್ದಿನ ಸಾರ್ವತ್ರಿಕ ಚುನಾವಣೆಯಲ್ಲಿ ಎನ್‌ ಡಿಎ ಮೈತ್ರಿಕೂಟ ಅಧಿಕಾರದ ಗದ್ದುಗೆ ಏರುವ ಮೂಲಕ ನರೇಂದ್ರ ಮೋದಿ ಅವರು ಜೂನ್‌ 9ರಂದು ರಾಷ್ಟ್ರಪತಿ ಭವನದಲ್ಲಿ ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಹೊಸ ಅಧ್ಯಾಯವೊಂದಕ್ಕೆ ಮುನ್ನುಡಿ ಬರೆದಿದ್ದರು. ಪಂಡಿತ್‌ ಜವಾಹರಲಾಲ್‌ ನೆಹರು ನಂತರ ಸತತವಾಗಿ ಮೂರನೇ ಬಾರಿ ಪ್ರಧಾನಿ ಹುದ್ದೆಗೆ ಏರಿದ ಎರಡನೇ ವ್ಯಕ್ತಿ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ಚುನಾವಣೆಯಲ್ಲಿ 240 ಸ್ಥಾನಗಳಲ್ಲಿ ಜಯಗಳಿಸಿತ್ತು. ಬಿಜೆಪಿ ನೇತೃತ್ವದ ಎನ್‌ ಡಿಎ ಮೈತ್ರಿಕೂಟ 293 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು.

*ರಷ್ಯಾ-ಉಕ್ರೈನ್‌ ಯುದ್ಧ:

ರಷ್ಯಾ ಮತ್ತು ಉಕ್ರೈನ್‌ ನಡುವೆ ಯುದ್ಧ ನಡೆಯುತ್ತಿದ್ದಾಗಲೇ ಉಭಯ ದೇಶಗಳ ಮುಖ್ಯಸ್ಥರನ್ನು ಭೇಟಿಯಾದ ಕೆಲವೇ ಗಣ್ಯರಲ್ಲಿ ಪ್ರಧಾನಿ ಮೋದಿ ಅವರು ಕೂಡಾ ಒಬ್ಬರಾಗಿದ್ದಾರೆ. ಯುದ್ಧದ ನಡುವೆ ಪ್ರಧಾನಿ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಹಾಗೂ ಉಕ್ರೈನ್‌ ಅಧ್ಯಕ್ಷ ವ್ಲಾಡಿಮಿರ್‌ ಜೆಲೆನ್ಸ್ಕಿ ಭೇಟಿಯಾಗಿ ರಾಜತಾಂತ್ರಿಕ ಮಾತುಕತೆ ಮೂಲಕ ಯುದ್ಧವನ್ನು ಕೊನೆಗೊಳಿಸುವಂತೆ ಮನವಿ ಮಾಡಿಕೊಂಡಿದ್ದರು.

Advertisement

*ಅಯೋಧ್ಯೆ ರಾಮಮಂದಿರ ಉದ್ಘಾಟನೆ:

ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟಿಸುವ ಮೂಲಕ ಶುಭ ಸೂಚನೆಯೊಂದಿಗೆ 2024 ಅನ್ನು ಬರಮಾಡಿಕೊಂಡಿದ್ದರು. ನೂರಾರು ವರ್ಷಗಳ ವಿವಾದ ಜನವರಿ 22ರಂದು ರಾಮಮಂದಿರ ಉದ್ಘಾಟನೆಯೊಂದಿಗೆ ಅಂತ್ಯಕಂಡಿತ್ತು. ಪವಿತ್ರ ನಗರಿ ಅಯೋಧ್ಯೆಯಲ್ಲಿ ರಾಮಲಲ್ಲಾನ ಮೂರ್ತಿಯನ್ನು ಪ್ರತಿಷ್ಠಾಪಿಸುವ ಮೂಲಕ ಕೋಟ್ಯಂತರ ಹಿಂದೂಗಳ ರಾಮಮಂದಿರ ನಿರ್ಮಾಣ ಕನಸು ನನಸಾಗಿತ್ತು.

ಹರ್ಯಾಣ ಚುನಾವಣೆ:

ಹರ್ಯಾಣ ಚುನಾವಣೆ ಮೊದಲು ಮತ್ತು ನಂತರ ಚುನಾವಣ ವಿಶ್ಲೇಷಕರು ಹಾಗೂ ಸಮೀಕ್ಷೆಗಳು ಆಡಳಿತಾರೂಢ ಭಾರತೀಯ ಜನತಾ ಪಕ್ಷ ಅಧಿಕಾರ ಕಳೆದುಕೊಳ್ಳಲಿದೆ ಎಂದೇ ಭವಿಷ್ಯ ನುಡಿದಿದ್ದವು. ಆದರೆ ಚುನಾವಣೆಗೂ ಮುನ್ನವೇ ಬಿಜೆಪಿ ಹೈಕಮಾಂಡ್‌ ಸಿಎಂ ಮನೋಹರ್‌ ಲಾಲ್‌ ಖಟ್ಟರ್‌ ಅವರನ್ನು ಕೆಳಗಿಳಿಸಿ, ನಯಾಬ್‌ ಸೈನಿ ಅವರನ್ನು ನೂತನ ಸಿಎಂ ಆಗಿ ಮಾಡಿತ್ತು. ಇದರೊಂದಿಗೆ ಬಿಜೆಪಿಯೊಳಗೆ ಎಲ್ಲವೂ ಸರಿ ಇಲ್ಲ ಎಂಬ ಸಂದೇಶ ರವಾನಿಸಿದಂತಾಗಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಚರಿಷ್ಮಾ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿತ್ತು. ಚುನಾವಣ ಫಲಿತಾಂಶದಲ್ಲಿ ಬಿಜೆಪಿ ಭರ್ಜರಿ 48 ಸ್ಥಾನ ಪಡೆಯುವ ಮೂಲಕ ಹರ್ಯಾಣದಲ್ಲಿ ಸತತ ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಏರಿತ್ತು.

*ಒಂದು ದೇಶ, ಒಂದು ಚುನಾವಣೆ:

2024ರ ವರ್ಷಾಂತ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್‌ 17ರಂದು ಲೋಕಸಭೆಯಲ್ಲಿ ಒಂದು ದೇಶ, ಒಂದು ಚುನಾವಣೆ ಮಸೂದೆಯನ್ನು ಮಂಡಿಸುವ ಮೂಲಕ ಮತ್ತೊಮ್ಮೆ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಈ ಮಹತ್ವದ ಮಸೂದೆ ಪರಿಶೀಲನೆಗಾಗಿ ಜೆಪಿಸಿಗೆ ಒಪ್ಪಿಸಲಾಗಿದೆ. ಇದರೊಂದಿಗೆ ದೇಶದಲ್ಲಿ ಆಡಳಿತ ಸುಧಾರಣೆ ಕೈಗೊಳ್ಳಬೇಕೆಂಬ ತಮ್ಮ ಉದ್ದೇಶವನ್ನು ನರೇಂದ್ರ ಮೋದಿ ಅವರು ಮುಂದುವರಿಸಿದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next