ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಶಾಲೆಗಳು ಆರಂಭವಾಗಿ 15 ದಿನಗಳು ಕಳೆಯುತ್ತಿವೆ. ಮಕ್ಕಳು ಉತ್ಸಾಹದಿಂದ ಸರ್ಕಾರಿ ಶಾಲೆಗಳಲ್ಲಿ ದಾಖಲಾಗುತ್ತಿದ್ದಾರೆ. ಆದರೆ ಶಾಲೆಗೆ ಬರುವ ಮಕ್ಕಳು ಮಾತ್ರ ಅಭದ್ರತೆಯಲ್ಲಿ ಪಾಠ ಪ್ರವಚನ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸುರಕ್ಷತೆ ಮರೀಚಿಕೆ: ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಬರೋಬ್ಬರಿ 437ಕ್ಕೂ ಹೆಚ್ಚು ಕೊಠಡಿಗಳು ಶಿಥಿಲಗೊಂಡು ದುರಸ್ತಿಗಾಗಿ ಎದುರು ನೋಡುವಂತಾಗಿದ್ದು, ಇದರ ಪರಿಣಾಮ ಶಾಲೆಗಳಲ್ಲಿ ಮಕ್ಕಳ ಪಾಲಿಗೆ ಸುರಕ್ಷತೆ ಎನ್ನುವುದು ಮರೀಚಿಕೆಯಾಗಿದೆ.
ಗೋಡೆ, ಚಾವಣಿ ಕುಸಿಯುವ ಭೀತಿ: ಜಿಲ್ಲೆಯಲ್ಲಿ ಹಲವು ವರ್ಷಗಳಿಂದಲೂ ಸರ್ಕಾರಿ ಶಾಲೆಗಳಿಗೆ ಹೊಸ ಕಟ್ಟಡಗಳ ನಿರ್ಮಾಣ ನಿರೀಕ್ಷಿತ ಮಟ್ಟದಲ್ಲಿ ಆಗದ ಕಾರಣ ಹಳೆಯ ಓಬಿ ರಾ ಯನ ಕಾಲದಲ್ಲಿ ನಿರ್ಮಿಸಿರುವ ದಶಕಗಳು ಪೂರೈಸಿರುವ ಹಳೆ ಕಟ್ಟಡಗಳಲ್ಲಿಯೇ ಅನಿವಾರ್ಯವಾಗಿ ಮಕ್ಕಳಿಗೆ ತರಗತಿ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಸದ್ಯ ಮಳೆಗಾಲ ಶುರುವಾಗಿರುವ ಪರಿಣಾಮ ದುರಸ್ತಿಗೊಳ್ಳದ ಕೊಠಡಿಗಳು ಮಳೆಗೆ ಸೋರುವುದರ ಜೊತೆಗೆ ಕೆಲವೊಂದು ಕೊಠಡಿಗಳ ಗೋಡೆಗಳು ಬಿರುಕು ಬಿಟ್ಟು ಚಾವಣಿ ಕುಸಿದು ಬೀಳುವ ಭೀತಿ ಶಾಲಾ ಮಕ್ಕಳು, ಪೋಷಕರು ಹಾಗೂ ಶಿಕ್ಷಕರದ್ದಾಗಿದೆ.
ಸರ್ಕಾರಿ ಶಾಲೆಗಳು 1,449 ಶಾಲೆಗಳು: ಜಿಲ್ಲೆಯಲ್ಲಿ 1,680 ಪ್ರಾಥಮಿಕ ಶಾಲೆಗಳಿದ್ದು, ಆ ಪೈಕಿ ಸರ್ಕಾರಿ ಶಾಲೆಗಳು 1,449 ಇದ್ದರೆ ಅನುದಾನಿತ ಶಾಲೆಗಳು 47 ಕಾರ್ಯನಿರ್ವಹಿಸುತ್ತಿವೆ. ಉಳಿದಂತೆ 177 ಅನುದಾನರಹಿತ ಶಾಲೆಗಳು ಶಾಲೆಗಳು ಇವೆ. ಇನ್ನೂ ವಸತಿ ಶಾಲೆಗಳು 6 ಮತ್ತು ಇತರೆ 1 ಶಾಲೆ ಇದ್ದು ಜಿಲ್ಲೆಯಲ್ಲಿ 349 ಪ್ರೌಢಶಾಲೆಗಳಿದ್ದು, ಇದರಲ್ಲಿ 111 ಸರ್ಕಾರಿ ಶಾಲೆಗಳು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಅನುದಾನಿತ ಶಾಲೆಗಳು 46 ಇವೆ. ಅನುದಾನರಹಿತ ಶಾಲೆಗಳು 164, ವಸತಿ ಶಾಲೆಗಳು 26 ಮತ್ತು 2 ಕೇಂದ್ರೀಯ ಪ್ರೌಢಶಾಲೆಗಳು ಜಿಲ್ಲೆಯಲ್ಲಿವೆ.
ಶಿಥಿಲ ಕೊಠಡಿಗಳ ತೆರವಿಗೆ ಪಟ್ಟಿ ಸಿದ್ಧ!: ಜಿಲ್ಲೆಯ ಸರ್ಕಾರಿ ಕಿರಿಯ, ಹಿರಿಯ ಹಾಗೂ ಪ್ರೌಢ ಶಾಲೆಗಳಲ್ಲಿ ಬಳಕೆಗೆ ಯೋಗ್ಯವಲ್ಲದ ಬರೋಬ್ಬರಿ 288 ಕೊಠಡಿಗಳನ್ನು ತೆರವು ಗೊಳಿಸಲು ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಪಟ್ಟಿಸಿದ್ಧಪಡಿಸಿದ್ದಾರೆ. ಈ ಕೊಠಡಿಗಳು ದುರಸ್ತಿ ಮಾಡಿದರೂ ಬಳಕೆಗೆ ಬಾರದಷ್ಟು ತೀವ್ರವಾಗಿ ಶಿಥಿಲಗೊಂಡಿರುವುದರಿಂದ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ 288 ಕೊಠಡಿಗಳನ್ನು ತೆರವುಗೊಳಿಸಿ ಹೊಸ ಕೊಠಡಿಗಳ ನಿರ್ಮಾಣಕ್ಕೆ ಯೋಜನೆ ರೂಪಿಸುತ್ತಿದೆ.
ಶಾಲೆಗಳಲ್ಲಿನ ಕಳಪೆ ಕಾಮಗಾರಿಗೆ ಇಲ್ಲ ಬ್ರೇಕ್ : ಸಾಮಾನ್ಯವಾಗಿ ಜಿಲ್ಲೆಯಲ್ಲಿನ ಸರ್ಕಾರಿ ಶಾಲೆಗಳಲ್ಲಿ ವಾರ್ಷಿಕವಾಗಿ ನಡೆಯುವ ದುರಸ್ತಿ ಕಾಮಗಾರಿಗಳು ಅತ್ಯಂತ ಕಳಪೆ ಗುಣಮಟ್ಟದಿಂದ ಕೂಡಿರುವ ಪರಿಣಾಮ ಪದೇ ಪದೆ ಕೊಠಡಿಗಳು ಶಿಥಿಲಗೊಳ್ಳುತ್ತಿರುವುದು ಎದ್ದು ಕಾಣುತ್ತಿದೆ. ಇತ್ತೀಚೆಗೆ ಚೇಳೂರು ತಾಲೂಕಿನ ಯರಗುಡಿ ಗ್ರಾಮದ ಸರ್ಕಾರಿ ಶಾಲೆಯ ಚಾವಣಿಯ ಸಿಮೆಂಟ್ ಕಳಚಿ ಬಿದ್ದು ಇಬ್ಬರು ಮಕ್ಕಳ ತಲೆಗೆ ಪೆಟ್ಟು ಬಿದ್ದಿತ್ತು. ಅಲ್ಲದೇ ಚಿಂತಾಮಣಿಯ ಕೆಲವು ಸರ್ಕಾರಿ ಶಾಲೆಗಳಲ್ಲಿ ಚಾವಣಿ ಕಿತ್ತು ಬಂದಿದೆ. ಹೀಗೆ ಬಹುತೇಕ ಶಾಲೆಗಳಲ್ಲಿ ಕಳಪೆ ಕಾಮಗಾರಿ ಪರಿಣಾಮ ಶಾಲಾ ಕೊಠಡಿಗಳು ನಿರ್ಮಾಣಗೊಂಡ ವರ್ಷದಲ್ಲಿಯೇ ಕಳಪೆ ಕಾಮಗಾರಿಗೆ ದುರಸ್ತಿಗೆ ಎದುರಾಗುತ್ತಿರುವುದು ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದೆ.
– ಕಾಗತಿ ನಾಗರಾಜಪ್ಪ