Advertisement

434 ರೂ. ಆದಾಯ ತೆರಿಗೆ ಪಾವತಿ ಮಾಡಿದ್ದ ನೀರವ್‌

08:15 AM Feb 19, 2018 | |

ಹೊಸದಿಲ್ಲಿ: ಪಿಎನ್‌ಬಿ ಹಗರಣದ ಆರೋಪಿಗಳಾದ ನೀರವ್‌ ಮೋದಿ ಹಾಗೂ ಮೆಹಲ್‌ ಚೋಕ್ಸಿ ಭಾರತದ 32 ಬ್ಯಾಂಕ್‌ಗಳಿಂದ ಒಟ್ಟು 13,066 ಕೋಟಿ ರೂ. ಸಾಲ ಪಡೆದಿದ್ದಾರೆ ಎಂಬುದು ಆದಾಯ ತೆರಿಗೆ ಇಲಾಖೆಯ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

Advertisement

ನೀರವ್‌ ಮೋದಿಗೆ ಸಂಬಂಧಿಸಿದ ಕಂಪನಿಗಳು 7817 ಕೋಟಿ ರೂ. ಮತ್ತು ಮೆಹುಲ್‌ ಚೋಕ್ಸಿಗೆ ಸೇರಿದ ಕಂಪನಿಗಳು 7500 ಕೋಟಿ ರೂ. ಸಾಲ ಪಡೆದಿರುವುದು ತಿಳಿದುಬಂದಿದೆ. ಆದರೆ ಒಂದಷ್ಟು ಮೊತ್ತವನ್ನು ಮರುಪಾವತಿ ಮಾಡಿದ್ದಾರೆ. ಬಹುತೇಕ ನೀರವ್‌ ನೇತೃತ್ವದ ಸಂಸ್ಥೆಗಳು ಲಾಭವನ್ನೇ ತೋರಿಸಿಲ್ಲ. ಹೀಗಾಗಿ ಆದಾಯ ತೆರಿಗೆ ರೂಪದಲ್ಲಿ 2014-15ರಲ್ಲಿ ಕೇವಲ 434 ರೂ., 2015-16ರಲ್ಲಿ 620ರೂ. ಮತ್ತು 2016-17ರಲ್ಲಿ 930 ರೂ.ಗಳನ್ನು ಪಾವತಿ ಮಾಡಲಾಗಿದೆ! ಕಳೆದ ವರ್ಷ ಎಲ್ಲ ಹೂಡಿಕೆದಾರರೂ ನೀರವ್‌ ಸಮೂಹದಿಂದ ಹಿಂದೆ ಸರಿದಿದ್ದು, ತಮ್ಮ ಹಣವನ್ನು ವಾಪಸ್‌ ಪಡೆದಿದ್ದಾರೆ. ಹೀಗಾಗಿ ನೀರವ್‌ ವಹಿವಾಟು ನಡೆಸುವುದಕ್ಕಾಗಿ ಸಾಲದ ಮೊರೆ ಹೋಗಿದ್ದಾರೆ ಎನ್ನಲಾಗಿದೆ.

ಮೊದಲು ಎಚ್ಚರಿಸಿದ್ದೇ ವಿದೇಶಿ ಶಾಖೆಗಳು: ಆರಂಭದಲ್ಲಿ ಪಿಎನ್‌ಬಿ ಮುಂಬಯಿ ಶಾಖೆಯಿಂದಲೇ ಹೊಸ ಸಾಲಕ್ಕೆ ಅರ್ಜಿ ಸಲ್ಲಿಸುವಾಗ ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿತ್ತಾದರೂ, ಈ ಬಗ್ಗೆ ಅನುಮಾನ ವ್ಯಕ್ತಪಡಿಸಿ ನೋಟಿಸ್‌ ನೀಡಿದ್ದು ವಿದೇಶಿ ಬ್ಯಾಂಕ್‌ ಶಾಖೆಗಳು ಎಂಬುದು ಇದೀಗ ಬೆಳಕಿಗೆ ಬಂದಿದೆ. ಅಲಹಾಬಾದ್‌ ಮತ್ತು ಆ್ಯಕ್ಸಿಸ್‌ ಬ್ಯಾಂಕ್‌ ಫಾರೆಕ್ಸ್‌ ಶಾಖೆಗಳಿಗೆ ಪಿಎನ್‌ಬಿಯಿಂದ ಲೆಟರ್‌ ಆಫ್ ಅಂಡರ್‌ಸ್ಟಾಂಡಿಂಗ್‌ ಹೊರಡಿಸಲಾಗಿತ್ತು. ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಶಾಖೆಗಳು ಪಿಎನ್‌ಬಿ ಸಂಪರ್ಕಿಸಿವೆ. ಆಗ ಪಿಎನ್‌ಬಿ ದಾಖಲೆ ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಪಿಎನ್‌ಬಿಗೆ ಕ್ರಿಸಿಲ್‌ ರೇಟಿಂಗ್‌ ಮೇಲೆ ಗಮನ: ಹಗರಣದಿಂದಾಗಿ ಪಿಎನ್‌ಬಿ ರೇಟಿಂಗ್‌ ಅನ್ನು ಪಿಎನ್‌ಬಿ ವಿಚಕ್ಷಣೆಯಲ್ಲಿರಿಸಿದೆ. ಬೆಳವಣಿಗೆಗಳಿಗೆ ಅನುಗುಣವಾಗಿ ನಿರ್ಧರಿಸಲಾಗುತ್ತದೆ ಎಂದು ಕ್ರಿಸಿಲ್‌ ಹೇಳಿದ್ದಾರೆ. ವಹಿವಾಟುಗಳ ಬಗ್ಗೆ ಸ್ಪಷ್ಟ ವಿವರ ನೀಡುವಂತೆ ನಾವು ಪಿಎನ್‌ಬಿ ಅಧಿಕಾರಿಗಳನ್ನು ಕೇಳಿದ್ದೇವೆ ಎಂದು ಕ್ರಿಸಿಲ್‌ ಹೇಳಿದೆ.

2 ಬಾರಿ ಪಿಎನ್‌ಬಿ ಗೆದ್ದಿತ್ತು ವಿಚಕ್ಷಣಾ ಪ್ರಶಸ್ತಿ!
ಬ್ಯಾಂಕ್‌ನ ಅಧಿಕಾರಿಗಳನ್ನೇ ಬಳಸಿಕೊಂಡು ನೀರವ್‌ ಮೋದಿ ಅಕ್ರಮವಾಗಿ ಸಾಲ ಪಡೆಯುವು ದನ್ನು ಕಂಡುಕೊಳ್ಳಲಾಗದ ಪಿಎನ್‌ಬಿ, ಇನ್ನೊಂದೆಡೆ ಅತ್ಯುತ್ತಮ ವಿಚಕ್ಷಣಾ ಪ್ರಶಸ್ತಿಯನ್ನು ಪಡೆದಿದ್ದು ವಿಪರ್ಯಾಸ. 2015 ಹಾಗೂ 2016-17ರಲ್ಲಿ ಪಿಎನ್‌ಬಿಗೆ ಈ ಪುರಸ್ಕಾರ ಲಭ್ಯವಾಗಿದೆ.

Advertisement

ಮೋಸಗಾರರಿಗೆ ವಜ್ರವೇ ಪ್ರೀತಿ
ಮಹಿಳೆಯರಿಗೆ ಪ್ರೀತಿಯಾಗಿದ್ದ ವಜ್ರ ಈಗ ಮೋಸಗಾರಿರಗೂ ಪ್ರೀತಿ. ವಜ್ಯ ವ್ಯಾಪಾರಿಗಳ ಮೇಲೆ ಈಗ ಸಂಶಯದ ಹುತ್ತ ಬೆಳೆದಿದೆ. ಪಿಎನ್‌ಬಿಯಲ್ಲಿನ ನೀರವ್‌ ಮೋದಿ ಹಗರಣದ ನಂತರ ಇದೀಗ ಎಲ್ಲ ವಜ್ರ ವ್ಯಾಪಾರಿಗಳ ಮೇಲೆ ಅನುಮಾನ ಮೂಡಿದೆ. ಗೀತಾಂಜಲಿ ಜ್ಯುವೆಲ್ಲರ್ಸ್‌ ಮಾಲೀಕ ಮೆಹುಲ್‌ ಚೋಕ್ಸಿ ಹಲವು ವಜ್ರ ವ್ಯಾಪಾರಿಗಳು ಮತ್ತು ಷೇರು ವಹಿವಾಟುದಾರರ ಜೊತೆಗೆ ಸಂಪರ್ಕ ಹೊಂದಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ ವಜ್ರ ವ್ಯಾಪಾರಕ್ಕೆ ಸಂಬಂಧಿಸಿದ ಎಲ್ಲ ಗ್ರಾಹಕರ ಖಾತೆಗಳನ್ನು ಬ್ಯಾಂಕ್‌ಗಳು ಮೇಲ್ವಿಚಾರಣೆ ನಡೆಸಲು ಆರಂಭಿಸಿವೆ. ಹಿಂದಿನಿಂದಲೂ ವಜ್ರ ವ್ಯಾಪಾರಿಗಳು ಹಣಕಾಸು ಅವ್ಯವಹಾರದಲ್ಲಿ ತೊಡಗಿರುವುದು ಹಾಗೂ ಕಪ್ಪುಹಣ ವಹಿವಾಟಿನಲ್ಲಿ ತೊಡಗಿರುವುದು ಪತ್ತೆಯಾಗಿದ್ದರಿಂದ ಈ ವಿಶೇಷ ಎಚ್ಚರಿಕೆ ವಹಿಸಲಾಗುತ್ತಿದೆ.

ನೀರವ್‌ ಬಳಿ ಪಾಸ್‌ವರ್ಡ್‌
ಪ್ರಕರಣದಲ್ಲಿ ಬಂಧಿತ ಅಧಿಕಾರಿಗಳ ವಿಚಾರಣೆಯ ವೇಳೆ ಮಹತ್ವದ ಅಂಶ ಬಯಲಾಗಿದ್ದು, ನೀರವ್‌ ಮೋದಿ ಬಳಿ ಪಿಎನ್‌ಬಿ ಕಂಪ್ಯೂಟರ್‌ ಪಾಸ್‌ವರ್ಡ್‌ ಕೂಡ ಇತ್ತು. ಆತನಿಗೆ ಅಧಿಕಾರಿಗಳೇ ಪಾಸ್‌ವರ್ಡ್‌ ನೀಡಿದ್ದರು ಎನ್ನಲಾಗಿದೆ. ನೀರವ್‌ ಮೋದಿ ಇದನ್ನು ತನ್ನ ಕಂಪನಿಯ ಅಧಿಕಾರಿಗಳಿಗೆ ನೀಡಿದ್ದ. ಅವರು ಮನೆಯಲ್ಲೇ ಕುಳಿತು ಸ್ವಿಫ್ಟ್ ಬ್ಯಾಂಕಿಂಗ್‌ ವ್ಯವಸ್ಥೆಗೆ ಲಾಗಿನ್‌ ಆಗಬಹುದಿತ್ತು. ಇದೇ ವೇಳೆ, ಭಾನುವಾರ ಕೋಲ್ಕತಾದಲ್ಲಿ ವಿವಿಧ ಮಾಲ್‌ಗ‌ಳಲ್ಲಿರುವ ಗೀತಾಂಜಲಿ ಜೆಮ್ಸ್‌ ಮಳಿಗೆಗಳ ಮೇಲೆ ದಾಳಿ ನಡೆಸಿದ ಜಾರಿ ನಿರ್ದೇಶನಾಲಯ ಅಧಿಕಾರಿಗಳು, ಅಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next