Advertisement

ಪಿಯು ಕಾಲೇಜು ಆರಂಭಕ್ಕೆ 425 ಅರ್ಜಿ ಸಲ್ಲಿಕೆ

11:25 PM May 11, 2019 | Lakshmi GovindaRaj |

ಬೆಂಗಳೂರು: ರಾಜ್ಯದಲ್ಲಿ ಹೊಸ ಪಿಯು ಕಾಲೇಜು ಆರಂಭಿಸುವ ಸಂಬಂಧ ಪದವಿ ಪೂರ್ವ ಶಿಕ್ಷಣ ಇಲಾಖೆಗೆ 425 ಅರ್ಜಿಗಳು ಬಂದಿವೆ. 2019-20ನೇ ಸಾಲಿನಿಂದ ಹೊಸ ಪಿಯು ಕಾಲೇಜು ಸ್ಥಾಪಿಸಲು ಪಿಯು ಇಲಾಖೆ ಅರ್ಜಿ ಆಹ್ವಾನಿಸಿತ್ತು.

Advertisement

ಅದರಂತೆ ವಿವಿಧ ಜಿಲ್ಲೆಗಳಿಂದ ಸುಮಾರು 425 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಬಾಗಲಕೋಟೆಯಿಂದ 17, ಬೆಳಗಾವಿಯಿಂದ 11, ಬಳ್ಳಾರಿಯಿಂದ 11, ಬೆಂಗಳೂರು ದಕ್ಷಿಣದಿಂದ 53, ಬೆಂಗಳೂರು ಉತ್ತರದಿಂದ 38 ಹಾಗೂ ಬೆಂಗಳೂರು ಗ್ರಾಮಾಂತರದಿಂದ 14, ಬೀದರ್‌ನಿಂದ 21,

ಮೈಸೂರಿನಿಂದ 28, ಕಲಬುರಗಿಯಿಂದ 37, ಹಾಸನದಿಂದ 17, ಕೊಪ್ಪಳದಿಂದ 18, ಯಾದಗಿರಿಯಿಂದ 19, ವಿಜಯಪುರದಿಂದ 12, ರಾಯಚೂರಿನಿಂದ 19 ಸೇರಿದಂತೆ ಒಟ್ಟು 425 ಅರ್ಜಿಗಳು ಬಂದಿವೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಸಿ.ಶಿಖಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾಹಿತಿ ಕೋರಿದ ಶಿಕ್ಷಣ ಇಲಾಖೆ: ಶೂನ್ಯ ದಾಖಲಾತಿ ಹಾಗೂ ಕೆಲವು ಸಂಯೋಜನೆಗಳ ಶೂನ್ಯ ದಾಖಲಾತಿಯ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರ ಮಾಹಿತಿಯನ್ನು ಒದಗಿಸುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಸೂಚಿಸಿದೆ. 2018-19ನೇ ಸಾಲಿನಲ್ಲಿ ರಾಜ್ಯದ ಕೆಲವು ಸರ್ಕಾರಿ ಪಿಯು ಕಾಲೇಜಿನಲ್ಲಿ ಶೂನ್ಯ ದಾಖಲಾತಿಯಾಗಿದ್ದು, ಇನ್ನು ಕೆಲವು ಕಾಲೇಜಿನಲ್ಲಿ ಸಂಯೋಜನೆಗೆ ಶೂನ್ಯ ದಾಖಲಾಗಿರುತ್ತದೆ.

ಸಂಯೋಜನೆಯಲ್ಲಿ ಒಂದು ಅಥವಾ ಎರಡು ಹುದ್ದೆಗಳು ಮಾತ್ರ ಇದ್ದು, ಆ ಹುದ್ದೆಯಲ್ಲಿ ಉಪನ್ಯಾಸಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾರ್ಯಭಾರವಿಲ್ಲದ್ದರಿಂದ ಬೇರೆ ಕಾಲೇಜಿಗೆ ಅವರನ್ನು ನಿಯೋಜಿಸಿ ವೇತನ ಪಡೆಯುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಇಂತಹ ಉಪನ್ಯಾಸಕರಿಗೆ ಕೌನ್ಸೆಲಿಂಗ್‌ ಮೂಲಕ ಸ್ಥಳ ನಿಯುಕ್ತಿ ಮಾಡುವುದು ಅನಿವಾರ್ಯವಾಗಿದೆ.

Advertisement

ಈ ಹಿನ್ನೆಲೆಯಲ್ಲಿ ಜಿಲ್ಲಾ ಉಪನಿರ್ದೇಶಕರಿಂದ ಮಾಹಿತಿ ಕೋರಲಾಗಿತ್ತು. ಆದರೆ, ಕೆಲವು ಜಿಲ್ಲಾ ಉಪನಿರ್ದೇಶಕರು ಶೂನ್ಯ ದಾಖಲಾತಿಯ ಶಾಲೆಗಳ ಮಾಹಿತಿಯನ್ನು ಮಾತ್ರ ನೀಡಿದ್ದು, ಸಂಯೋಜನೆಯಲ್ಲಿ ಶೂನ್ಯ ದಾಖಲಾತಿ ಆಗಿರುವ ಬಗ್ಗೆ ಮಾಹಿತಿ ನೀಡಿಲ್ಲ. ಸೂಕ್ತ ಮಾಹಿತಿಯನ್ನು ನಿರ್ದಿಷ್ಟ ಸಮಯದೊಳಗೆ ನೀಡುವಂತೆ ಜಿಲ್ಲಾ ಉಪನಿರ್ದೇಶಕರಿಗೆ ಇಲಾಖೆ ಎಚ್ಚರಿಕೆ ನೀಡಿದೆ.

ಖಾಸಗಿ ಶಾಲೆಗಳ ನೋಂದಣಿಗೆ ಪರಿಷ್ಕೃತ ವೇಳಾಪಟ್ಟಿ ಪ್ರಕಟ: ರಾಜ್ಯದಲ್ಲಿ ಖಾಸಗಿ ಅನುದಾನರಹಿತ ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳನ್ನು ಹೊಸದಾಗಿ ಆರಂಭಿಸಲು ಸಲ್ಲಿಸಿದ್ದ ಅರ್ಜಿಗಳ ನೋಂದಣಿ ಪ್ರಕ್ರಿಯೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಮರು ಚಾಲನೆ ನೀಡಿದೆ.

ಲೋಕಸಭಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಹೊಸ ಖಾಸಗಿ ಶಾಲೆಗಳ ನೋಂದಣಿ ಪ್ರಕ್ರಿಯೆ ಅರ್ಧಕ್ಕೆ ಸ್ಥಗಿತಗೊಂಡಿತ್ತು. ಮಾದರಿ ನೀತಿ ಸಂಹಿತೆ ಸಡಿಲಿಸಿದ್ದರಿಂದ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಲಾಗಿದೆ. 1ರಿಂದ 8ನೇ ತರಗತಿಯ ಹೊಸ ಖಾಸಗಿ ಶಾಲೆಗೆ ಬಂದಿರುವ ಪ್ರಸ್ತಾವನೆಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಆನ್‌ಲೈನ್‌ ಮೂಲಕ ಜಿಲ್ಲಾ ಉಪನಿರ್ದೇಶಕರಿಗೆ ಸಲ್ಲಿಸಲು ಮೇ 16 ಕೊನೆಯ ದಿನವಾಗಿದೆ. ಜಿಲ್ಲಾ ಉಪನಿರ್ದೇಶಕರು ಅರ್ಜಿ ಪರಿಶೀಲಿಸಿ ಮಂಜೂರಾತಿ ಅಥವಾ ತಿರಸ್ಕರಿಸುವ ಆದೇಶವನ್ನು ಮೇ 28ರೊಳಗೆ ನೀಡಬೇಕು.

ಪ್ರೌಢಶಾಲೆ ಹಾಗೂ ಪೂರ್ವ ಪ್ರಾಥಮಿಕ ಶಾಲೆಗಳಿಗೆ ಮತ್ತು ಒಂದರಿಂದ 10ನೇ ತರಗತಿವರೆಗೆ ಖಾಸಗಿ ಶಾಲೆ ತೆರೆಯಲು ಬಂದಿರುವ ಎಲ್ಲ ಪ್ರಸ್ತಾವನೆಗಳನ್ನು ಪರಿಶೀಲಿಸಿ, ಅನುಮೋದನೆ ಅಥವಾ ತಿರಸ್ಕರಿಸುವ ಬಗ್ಗೆ ಇಲಾಖೆ ದಿನಾಂಕ ನಿಗದಿಪಡಿಸಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಉಪನಿರ್ದೇಶಕರು ಈ ಬಗ್ಗೆ ಕ್ರಮ ತೆಗೆದುಕೊಳ್ಳಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ವೆಬ್‌ಸೈಟ್‌ Schooleducation.kar.nic.in ಅನ್ನು ನೋಡಬಹುದು.

Advertisement

Udayavani is now on Telegram. Click here to join our channel and stay updated with the latest news.

Next