ಜೈಶ್-ಇ-ಮಹಮ್ಮದ್ ನಡೆಸುತ್ತಿದ್ದ ಬಾಲಾಕೋಟ್ ಉಗ್ರ ತರಬೇತಿ ಶಿಬಿರಗಳ ಮೇಲೆ ಮಂಗಳವಾರ ನಸುಕಿನ ಜಾವ ಭಾರತೀಯ ವಾಯುಪಡೆ ನಡೆಸಿದ ಏರ್ ಸ್ಟ್ರೈಕ್ ಗೆ 42 ತರಬೇತು ಹೊಂದಿದ ಆತ್ಮಾಹುತಿ ದಾಳಿಕೋರರೂ (ಫಿದಾಯಿನ್) ಸಹ ಹತರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮೃತಪಟ್ಟ ಈ ಫಿದಾಯಿನ್ ಗಳು ತಮ್ಮ ತರಬೇತಿಯನ್ನು ಮುಗಿಸಿ ಇನ್ನೇನು ಭಾರತದೊಳಕ್ಕೆ ನುಗ್ಗಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಿದ್ಧರಾಗಿದ್ದರು ಎಂದೂ ಸಹ ತಿಳಿದುಬಂದಿದೆ.
ಬಾಲಾಕೋಟ್ ನಲ್ಲಿ ಕಾರ್ಯಾಚರಿಸುತ್ತಿದ್ದ ಮರ್ಕಾಝ್ ಸಯ್ಯದ್ ಅಹಮ್ಮದ್ ಶಹೀದ್ ಉಗ್ರ ತರಬೇತು ಕೇಂದ್ರದಲ್ಲಿ ಜೈಶ್ ಮುಖ್ಯಸ್ಥ ಮೌಲಾನಾ ಮಸೂದ್ ಅಜ್ಹರ್ ನ ಭಾವ ಮೈದುನ ಮಹಮ್ಮದ್ ಸಲೀಂ ಅಲಿಯಾಸ್ ಉಸ್ತಾದ್ ಘೋರಿ ನೇತೃತ್ವದಲ್ಲಿ ಇಲ್ಲಿ ಉನ್ನತ ರೀತಿಯ ಉಗ್ರ ತರಬೇತಿ ನಡೆಯುತ್ತಿತ್ತು. ಈ ಉಗ್ರಶಿಬಿರಗಳ ಮೇಲೆ ಮಂಗಳವಾರ ನಸುಕಿನ ಜಾವ 3.45ರ ಸಮಯದಲ್ಲಿ ಘಾತಕವಾಗಿ ಎರಗಿದ ಭಾರತೀಯ ವಾಯುಸೇನೆಯ ಮಿರಾಜ್ – 2000 ಫೈಟರ್ ಜೆಟ್ ಗಳು ಇವುಗಳನ್ನು ಧ್ವಂಸ ಮಾಡಿದೆ.
IAF ನಿನ್ನೆ ಧ್ವಂಸಗೊಳಿಸಿದ ಉಗ್ರ ಶಿಬಿರಗಳಲ್ಲಿ ತರಬೇತು ಪಡೆಯುತ್ತಿದ್ದ 42 ಫಿದಾಯಿನ್ ಗಳ ವಿವರ ಮಾಧ್ಯಮಗಳಿಗೆ ದೊರಕಿದ್ದು ಇವರಲ್ಲಿ 14 ಆತ್ಮಾಹುತಿ ಉಗ್ರರು ರಾವಲ್ಪಿಂಡಿ ಮತ್ತು ಅಟೋಕ್ ಪ್ರಾಂತ್ಯಕ್ಕೆ ಸೇರಿದವರಾಗಿದ್ದಾರೆ. ಜೈಶ್ ಮುಖ್ಯಸ್ಥ ಮಸೂದ್ ಅಜ್ಹರ್ ರಾವಲ್ಪಿಂಡಿ ಜಿಲ್ಲೆಗೆ ಸೇರಿದವನಾಗಿದ್ದಾನೆ. ಸದ್ಯಕ್ಕೆ ಈತನನ್ನು ಪಾಕಿಸ್ಥಾನವು ರಾವಲ್ಪಿಂಡಿಯಲ್ಲಿರುವ ಮಿಲಿಟರಿ ಆಸ್ಪತ್ರೆಯಲ್ಲಿ ಬಚ್ಚಿಡಲಾಗಿದೆ ಎಂಬ ಮಾಹಿತಿಯಿದೆ.
ಇದನ್ನೂ ಓದಿ: ‘ನನ್ನ ಉಗ್ರ ಶಿಬಿರಗಳನ್ನು IAF ಉಡೀಸ್ ಮಾಡಿದ್ದು ನಿಜ’: ಮಸೂದ್ ಅಜ್ಹರ್: https://bit.ly/2H4TQM7