ಹೊಸದಿಲ್ಲಿ : ಈ ತನಕ 42 ಲಕ್ಷ ಹಿರಿಯ ನಾಗರಿಕರು ಕಳೆದ 9 ತಿಂಗಳಲ್ಲಿ ರೈಲ್ವೆ ರಿಯಾಯಿತಿಗಳನ್ನು ತಾವಾಗಿಯೇ ಬಿಟ್ಟುಕೊಟ್ಟಿದ್ದಾರೆ ಮತ್ತು 1.25 ಕೋಟಿ ಕುಟುಂಬಗಳು ಗ್ಯಾಸ್ ಸಹಾಯಧನವನ್ನು ಬಿಟ್ಟುಕೊಟ್ಟಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು ಏಮ್ಸ್ ನಲ್ಲಿ ವೃದ್ಧರ ರಾಷ್ಟ್ರೀಯ ಕೇಂದ್ರಕ್ಕೆ ಶಿಲಾನ್ಯಾಸ ಗೈದು ಬಳಿಕ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಸೂಪರ್ ಸ್ಪೆಶಾಲಿಟಿ ಮತ್ತು ಎಮರ್ಜೆನ್ಸಿ ಬ್ಲಾಕ್ ಉದ್ಘಾಟಿಸಿ ಮಾನಾಡಿದರು.
ದೇಶದಲ್ಲಿ ಪ್ರಾಮಾಣಿಕತೆಯ ವಾತಾವರಣವನ್ನು ಉತ್ತೇಜಿಸಲಾಗುತ್ತಿದೆ; ಹೆಚ್ಚು ಹೆಚ್ಚು ಜನರು ರಾಷ್ಟ್ರ ನಿರ್ಮಾಣ ಚಟುವಟಿಗಳಿಗೆ ತಮ್ಮ ಅಮೂಲ್ಯ ಕಾಣಿಕೆ ನೀಡುತ್ತಿದ್ದಾರೆ. ಲಕ್ಷಾಂತರ ಜನರು ಅನೇಕ ಬಗೆಯ ಸಹಾಯಧನಗಳನ್ನು , ರಿಯಾಯಿತಿಗಳನ್ನು ಬಿಟ್ಟುಕೊಡುತ್ತಿದ್ದಾರೆ ಎಂದು ಮೋದಿ ಹೇಳಿದರು.
ರೈಲ್ವೇ ಸಂದರ್ಭದಲ್ಲಿ ನಾನು ಯಾವುದೇ ಪ್ರಕಟನೆ ಮಾಡಿಲ್ಲ. ರೈಲ್ವೆಯವರೇ ಜನರಿಗೆ ತಮ್ಮ ರಿಯಾಯಿತಿಗಳನ್ನು ಬಿಟ್ಟುಕೊಡುವಂತೆ ಕೇಳಿಕೊಂಡಿದ್ದರು. ಹಿರಿಯ ನಾಗರಿಕರು ಕೂಡ ಅದಕ್ಕೆ ಸ್ಪಂದಿಸಿದರು.ಸುಮಾರು 42 ಲಕ್ಷ ಹಿರಿಯ ನಾಗರಿಕ ರೈಲು ಪ್ರಯಾಣಿಕರು ತಮಗೆ ಸಿಗುತ್ತಿರುವ ರಿಯಾಯಿತಿಗಳನ್ನು ಬಿಟ್ಟುಕೊಟ್ಟರು’ ಎಂದು ಮೋದಿ ಹೇಳಿದರು.
ಇದೆ ರೀತಿ ನಾನು ದೇಶದ ವೈದ್ಯರನ್ನು ವಿನಂತಿಸಿದ್ದೇನೆ. ತಿಂಗಳಿಗೆ ಒಂದು ಸಲವಾದರೂ ಬಡ ಗರ್ಭಿಣಿ ಮಹಿಳೆಯರಿಗೆ ಉಚಿತ ಸೇವೆ ನೀಡಿರೆಂದು ಕೇಳಿಕೊಂಡಿದ್ದೇನೆ. ಇದಕ್ಕೆ ಸ್ಪಂದಿಸಿರುವ ಖಾಸಗಿ ವಲಯದ ವೈದ್ಯರು ದೊಡ್ಡ ಸಂಖ್ಯೆಯಲ್ಲಿ ಸ್ಪಂದಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.
ದೇಶದ ಜನರಿಗೆ ಕಡಿಮೆ ಖರ್ಚಿನಲ್ಲಿ, ಕೈಗಟಕುವ ದರಗಳಲ್ಲಿ ವೈದ್ಯಕೀಯ ಸೇವೆ, ಔಷಧ ಲಭ್ಯತೆಗಳನ್ನು ಕಲ್ಪಿಸುವುದು ತನ್ನ ಸರಕಾರದ ದೃಷ್ಟಾರತೆಯಾಗಿದೆ ಎಂದು ಮೋದಿ ಹೇಳಿದರು.
2025ರೊಳಗೆ ಟಿಬಿಯನ್ನು ಸಂಪೂರ್ಣವಾಗಿ ನಿರ್ಮೂಲನ ಮಾಡುವ ಗುರಿಯನ್ನು ಐದು ವರ್ಷ ಮುನ್ನವೇ ಸಾಧಿಸುವ ಭಾರತದ ಬದ್ಧತೆಯನ್ನು ಮೋದಿ ಪುನರುಚ್ಚರಿಸಿದರು. ಈ ಸವಾಲನ್ನು ದೇಶದ ಆರೋಗ್ಯ ಕ್ಷೇತ್ರ ಯಶಸ್ವಿಯಾಗಿ ನಿಭಾಯಿಸುವುದೆಂಬ ವಿಶ್ವಾಸ ತನಗಿದೆ ಎಂದು ಮೋದಿ ಹೇಳಿದರು.