ಕೇಂದ್ರ ಸರಕಾರದ ಸೌರಗೃಹ ಯೋಜನೆಯಡಿ ನಿಮ್ಮ ಮನೆಯ ಮೇಲೆ ಸೌರ ಫಲಕವನ್ನು ಅಳವಡಿಸಿ ವಿದ್ಯುತ್ ಪಡೆದುಕೊಳ್ಳಲು ಸರಕಾರದಿಂದ ಶೇ.40 ಸಬ್ಸಿಡಿ ದೊರೆಯಲಿದೆ. ಅಲ್ಲದೇ ಈ ಯೋಜನೆಯನ್ನು ಬಳಸಿಕೊಂಡು ಸ್ಥಳೀಯ ಕಂಪೆನಿಗಳಿಗೂ ವಿದ್ಯುತ್ ಮಾರಾಟ ಮಾಡಬಹುದು. ಇದಕ್ಕೆ ಬ್ಯಾಂಕ್ ಸಹ ಸಾಲ ಸೌಲಭ್ಯ ಒದಗಿಸಲಿದೆ. ಯೋಜನೆಯಿಂದಾಗಿ ಕರೆಂಟ್ ಕಣ್ಣಾಮುಚ್ಚಾಲೆ ತಾಪತ್ರಯವೂ ಇಲ್ಲ, ಬಿಲ್ ಕಟ್ಟದಿದ್ದರೆ ಲೈನ್‌ಮೆನ್ ವಿದ್ಯುತ್ ಸ್ಥಗಿತಗೊಳಿಸುವ ಸಂದರ್ಭವೂ ಬರುವುದಿಲ್ಲ.
ಏನಿದು ಯೋಜನೆ?
ಇದೊಂದು ಕೇಂದ್ರದ ಯೋಜನೆಯಾಗಿದೆ. 1 ಕಿಲೋ ವ್ಯಾಟ್‌ನಿಂದ 500 ಕಿಲೋ ವ್ಯಾಟ್ ವರೆಗೂ ವಿದ್ಯುತ್ ಉತ್ಪಾದನೆ ಮಾಡಬಹುದಾಗಿದೆ. ಇದಕ್ಕೆ ಶೇ.40ರಷ್ಟು ಸಬ್ಸಿಡಿ ಸಿಗಲಿದೆ. ನಿಮ್ಮ ಮನೆಗಳ ಮೇಲ್ಛಾವಣಿ ಮೇಲೆ ಸೌರಫಲಕಗಳನ್ನು ಅಳವಡಿಸಿದರೆ ಸುಮಾರು 25 ವರ್ಷಗಳವರೆಗೆ ಶೇ.30-50 ವಿದ್ಯುತ್ ವೆಚ್ಚ ಉಳಿಸಬಹುದಾಗಿದೆ. ಇದಕ್ಕೆ ಹೆಚ್ಚಿನ ಸ್ಥಳಾವಕಾಶವೂ ಬೇಕಿಲ್ಲ, ಜಾಗಕ್ಕೆ ತಕ್ಕಂತೆ ಸೌರ ಫಲಕಗಳನ್ನು ಅಳವಡಿಸಬಹುದಾಗಿದೆ.
ಅರ್ಜಿ ಸಲ್ಲಿಕೆ ಹೇಗೆ?
ಮೊದಲು ಪ್ರಾದೇಶಿಕ ವಿದ್ಯುತ್ ಪ್ರಸರಣ ಕಂಪೆನಿಗಳನ್ನು ಸಂಪರ್ಕಿಸುವ ಮೂಲಕ ಅರ್ಜಿ ಸಲ್ಲಿಸಬಹುದು. ಬಳಿಕ ಅಧಿಕಾರಿಗಳು ಆಗಮಿಸಿ ಸ್ಥಳ ಪರಿಶೀಲನೆ ನಡೆಸುತ್ತಾರೆ. ಆಯ್ಕೆಯಾದ ಗ್ರಾಹಕರು ಮುಂಗಡವಾಗಿ ಶೇ.60ರಷ್ಟು ಹಣವನ್ನು ಪಾವತಿಸಿ ಕಾಮಗಾರಿ ಆರಂಭಿಸಬಹುದಾಗಿದೆ. ಬಳಿಕ, 5 ವರ್ಷಗಳ ವರೆಗೆ ಉಚಿತವಾಗಿ ಘಟಕವನ್ನು ನಿರ್ವಹಣೆ ಮಾಡಲಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ಸಂಬಂಧಿಸಿದ ಡಿಸ್ಕಾಂ(ಪ್ರಾದೇಶಿಕ ವಿದ್ಯುತ್ ಪ್ರಸರಣ ಕಂಪನಿ)ಅನ್ನು ಸಂಪರ್ಕಿಸಬಹುದು. ಅಥವಾ ಟೋಲ್ ಫ್ರೀ ನಂ.1800-180-3333ಕ್ಕೆ ಮಾಹಿತಿ ನೀಡಬಹುದು. ಅಥವಾ ಕಂಪೆನಿ ವೆಬ್‌ಸೈಟ್ //portal.mpcz.in ಭೇಟಿ ನೀಡಿ. ಅಥವಾ ಟೋಲ್‌ಫ್ರೀ ನಂ.1912ಕ್ಕೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ.
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಹೇಗೆ?
ಗ್ರಾಹಕರು https://solarrooftop.gov.in/ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅನಂತರ ಕೇಂದ್ರ ಸರಕಾರದ ಸೌರಗೃಹದ ವೆಬ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ಅಪ್ಲೈ ಫಾರ್ ಸೋಲಾರ್ ರೂಫಿಂಗ್ ಮೇಲೆ ಕ್ಲಿಕ್ ಮಾಡಬೇಕು. ಅನಂತರ ನಿಮ್ಮ ರಾಜ್ಯದ ಮೇಲೆ ಕ್ಲಿಕ್ ಮಾಡಬೇಕು. ಗೈಡ್‌ಲೈನ್ಸ್ ಓದಿದ ಬಳಿಕ, ಎಷ್ಟು ಕಿಲೋ ವ್ಯಾಟ್‌ವರೆಗೆ ಎಷ್ಟು ಖರ್ಚಾಗುತ್ತದೆ. ಇದರಲ್ಲಿ ಸಬ್ಸಿಡಿ ಹಣ ಎಷ್ಟು? ನೋಂದಣಿ ಶುಲ್ಕ ಸೇರಿದಂತೆ ಎಲ್ಲ ಮಾಹಿತಿ ಓದಿ ಕ್ಲಿಕ್ ಮಾಡಿದರೆ, ಅಲ್ಲಿ ಅರ್ಜಿ ಓಪನ್ ಆಗುತ್ತದೆ. ಅನಂತರ ನಿಮ್ಮ ಕನ್‌ಸ್ಯೂಮರ್ ಐಡಿ ನಮೂದಿಸಿ ಫೆಚ್ ಮೇಲೆ ಕ್ಲಿಕ್ ಮಾಡಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಬೇಕಾಗುತ್ತದೆ.
ಸಹಾಯಧನ ಸೇರಿ ಎಷ್ಟು ವೆಚ್ಚವಾಗುತ್ತದೆ?
1 ಕಿಲೋ ವ್ಯಾಟ್‌ನಿಂದ 3 ಕಿಲೋ ವ್ಯಾಟ್‌ವರೆಗೆ: ಪ್ರತೀ ಕಿಲೋ ವ್ಯಾಟ್‌ಗೆ 3,700 ಸಾವಿರ ರೂ.
3 ಕಿಲೋ ವ್ಯಾಟ್‌ನಿಂದ 10 ಕಿಲೋ ವ್ಯಾಟ್‌ವರೆಗೆ: ಪ್ರತೀ ಕಿಲೋ ವ್ಯಾಟ್‌ಗೆ 39,800ರೂ.
10 ಕಿಲೋ ವ್ಯಾಟ್‌ನಿಂದ 100 ಕಿಲೋ ವ್ಯಾಟ್‌ವರೆಗೆ: ಪ್ರತಿ ಕಿಲೋ ವ್ಯಾಟ್‌ಗೆ 36,500 ರೂ.
100 ಕಿಲೋ ವ್ಯಾಟ್‌ನಿಂದ 500 ಕಿಲೋ ವ್ಯಾಟ್‌ವರೆಗೆ: ಪ್ರತಿ ಕಿಲೋ ವ್ಯಾಟ್‌ಗೆ 34,900ರೂ.
ನಿರ್ವಹಣೆ ಹೇಗೆ?
ಒಮ್ಮೆ ಅಳವಡಿಸಿದ ಸೋಲಾರ್ ಪ್ಯಾನಲ್‌ಗಳು ಸುಮಾರು 25 ವರ್ಷಗಳವರೆಗೂ ಬಾಳಿಕೆ ಬರುತ್ತದೆ. ಪ್ಯಾನಲ್ ಅಳವಡಿಸಿದ ಬಳಿಕ, 5 ವರ್ಷವೂ ಉಚಿತವಾಗಿ ನಿರ್ವಹಣೆ ಮಾಡಲಾಗುತ್ತದೆ. ಅನಂತರ 10 ವರ್ಷಕ್ಕೆ ಒಂದು ಬಾರಿ ಬ್ಯಾಟರಿ ಬದಲಾಯಿಸಬಹುದು. ಇದರ ಬೆಲೆ ಸುಮಾರು 20 ಸಾವಿರ ರೂ. ಆಗುತ್ತದೆ.
ಹರೀಶ್ ಎಚ್. ಆರ್. ಹಾಡೋನಹಳ್ಳಿ