Advertisement
ಶಿಲಾನ್ಯಾಸ ನಡೆದ ದಿನದಂದೇ ಆರಂಭಗೊಂಡಿದ್ದ ಸೇತುವೆ ರಚನೆ ಕಾಮಗಾರಿಯು ಇಲಾಖಾ ನಿಯಮದಂತೆ 6 ತಿಂಗಳಲ್ಲಿ ಅಂದರೆ ಎಪ್ರಿಲ್ ತಿಂಗಳೊಳಗೆ ಪೂರ್ಣಗೊಳ್ಳಬೇಕಿತ್ತು. ಆದರೆ ಸ್ಥಳೀಯರ ಒತ್ತಡ ಮತ್ತು ಶಾಸಕರ ನಿರ್ದೇಶನದಂತೆ ಉಂಡಾರು ದೇಗುಲದ ಜೀರ್ಣೋದ್ಧಾರ – ಬ್ರಹ್ಮಕಲಶೋತ್ಸವದ ಪ್ರಯುಕ್ತ ಸಂಪರ್ಕಕ್ಕೆ ಅನುಗುಣವಾಗಿ ತರಾತುರಿಯಾಗಿ ಅರೆ ಬರೆ ಸೇತುವೆ ರಚನೆ ಕಾಮಗಾರಿಯನ್ನು ಪೂರ್ಣಗೊಳಿಸಿ, ಸಾರ್ವಜನಿಕ ಅನುಕೂಲಕ್ಕೆ ಬಿಟ್ಟುಕೊಟ್ಟಿದ್ದರು.
ಉಂಡಾರು ಸೇತುವೆ ನಿರ್ಮಾಣದ ಕಾಮಗಾರಿ ಆರಂಭಗೊಂಡು 14 ತಿಂಗಳು ಕಳೆದರೂ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಸೇತುವೆ ರಚನೆಯಾಗಿದ್ದರೂ ಅದರ ಬದಿಯ ದಂಡೆ ನಿರ್ಮಾಣವಾಗಿಲ್ಲ. ಪಕ್ಕದ ಸ್ಲ್ಯಾಬ್‌ಗಳಿಗೆ ಭದ್ರತಾ ಗೋಡೆ, ಸೇತುವೆ ಪ್ರವೇಶಿಸುವ ಎರಡೂ ಬದಿಯ ರಸ್ತೆಗಳ ನಡುವೆ ಸಮರ್ಪಕ ರೀತಿಯಲ್ಲಿ ಡಾಮರು, ಕಾಂಕ್ರೀಟ್ ಆಗಲಿ, ನೂತನ ಸೇತುವೆ ಮತ್ತು ಅದಕ್ಕೆ ತಾಗಿಕೊಂಡಿರುವ ರಸ್ತೆ ನಡುವಿನ ಕಾಮಗಾರಿ ಪೂರ್ಣಗೊಂಡಿಲ್ಲ. ಸೇತುವೆಗೆ ತಾಗಿಕೊಂಡಂತೆ ದೈವದ ಗುಡಿಯೊಂದು ಇದ್ದು, ಗುತ್ತಿಗೆದಾರರು ಅದನ್ನೇ ಕಾರಣವಾಗಿಟ್ಟುಕೊಂಡು ಕಾಮಗಾರಿ ಪೂರ್ಣಗೊಳಿಸಲು ನೆಪ ಹುಡುಕುತ್ತಿದ್ದಾರೆ. ಆರಂಭದಲ್ಲಿ ದೈವದ ಕಲ್ಲು ಬೇರೆಡೆಗೆ ಸ್ಥಳಾಂತರಿಸಿಕೊಡುವುದಾಗಿ ಗುತ್ತಿಗೆದಾರರೇ ಭರವಸೆ ನೀಡಿದ್ದು, ಅದರಂತೆ ದೈವದ ಗುಡಿ ಸ್ಥಳಾಂತರಿಸಲು ಮನೆಯವರೂ ಒಪ್ಪಿಗೆ ನೀಡಿದ್ದಾರೆ. ಆದರೆ ಅದಕ್ಕೂ ಗುತ್ತಿಗೆದಾರರು ಸಮರ್ಪಕವಾಗಿ ಸ್ಪಂದನೆ ನೀಡಿಲ್ಲ ಎನ್ನುವುದು ಸ್ಥಳೀಯರ ಆರೋಪ.
Related Articles
ಕಾಮಗಾರಿ ಪೂರ್ಣಗೊಳಿಸದೇ ಇರುವ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಗ್ರಾಮಸ್ಥರಿಂದ ದೂರುಗಳು ಬಂದಿವೆ. ಗುತ್ತಿಗೆದಾರರ ನಿರ್ಲಕ್ಷ್ಯದಿಂದಲೇ ಈ ರೀತಿ ಆಗಿದೆ ಎನ್ನುವುದರ ಬಗ್ಗೆ ಮನವರಿಕೆಯಾಗಿದೆ. ಈ ಬಗ್ಗೆ ಗುತ್ತಿಗೆದಾರ ಮಹಮ್ಮದ್ ಆಲಿ ಹೆಜಮಾಡಿ ಅವರಿಗೆ ನೊಟೀಸ್ ಜಾರಿ ಮಾಡಲಾಗಿದೆ. ಮತ್ತು ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿಕೊಡುವಂತೆ ಸೂಚನೆ ನೀಡಲಾಗಿದೆ. ಡಿ. 25ರಿಂದ ಕೆಲಸ ಮುಂದುವರಿಸಿ, ಪೂರ್ಣಗೊಳಿಸಿಕೊಡುವುದಾಗಿ ಗುತ್ತಿಗೆದಾರ ಭರವಸೆ ನೀಡಿದ್ದಾರೆ. ಇಲ್ಲದಿದ್ದಲ್ಲಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು.
– ಕೆ.ಎಸ್. ಚಂದ್ರಶೇಖರ್, ಎಕ್ಸಿಕ್ಯೂಟಿವ್ ಎಂಜಿನಿಯರ್, ಲೋಕೋಪಯೋಗಿ ಇಲಾಖೆ
Advertisement