Advertisement

ಶೇ.40 ವಿದೇಶಿಗರ ಬಳಿ ಇಲ್ಲ ವರದಿ

11:59 AM Jan 02, 2021 | Team Udayavani |

ಬೆಂಗಳೂರು: “ನಾವು ಅನುಭವದಿಂದ ಪಾಠ ಕಲಿಯಲಿಲ್ಲ’. ಏಕೆಂದರೆ, ವಿದೇಶದಿಂದ ರಾಜ್ಯದ ವಿಮಾನ ನಿಲ್ದಾಣಗಳಿಗೆ ಬಂದು ಇಳಿಯುತ್ತಿರುವ ಪ್ರಯಾಣಿಕರ ಪೈಕಿ ಶೇ.40 ಮಂದಿ ಬಳಿ ಕೋವಿಡ್ ಸೋಂಕು ಪರೀಕ್ಷೆ ವರದಿ ಇಲ್ಲ. ಅವರಿಗಾಗಿ ಸ್ಥಳದಲ್ಲಿಯೇ ಪರೀಕ್ಷೆಗೆ ವ್ಯವಸ್ಥೆ ಮಾಡಿದರೂ, ಪ್ರಯಾಣಿಕರು ಪರೀಕ್ಷೆಗೆಂದು ಮಾದರಿ ನೀಡಿ ರಾಜ್ಯಾದ್ಯಂತ ಹಂಚಿಹೋಗುತ್ತಿದ್ದಾರೆ!

Advertisement

ಇದು ರೂಪಾಂತರ ಸೇರಿ ಕೋವಿಡ್ ಹರಡುವಿಕೆಗೆ ಹಾದಿಯಾಗಿದ್ದು, ಎಲ್ಲಾ ವಿದೇಶಿ ಪ್ರಯಾಣಿಕರಿಗೂ ಕಡ್ಡಾಯ ಸಾಂಸ್ಥಿಕ/ಹೋಂ ಕ್ವಾರಂಟೈನ್‌ ಕಡ್ಡಾಯ ಕೂಗು ಕೇಳಿಬಂದಿದೆ. ವಿದೇಶಿ ಮೂಲದ ಕೊರೊನಾ ವೈರಸ್‌ಗೆ ವಿಮಾನ ನಿಲ್ದಾಣಗಳೇ ಹೆಬ್ಟಾಗಿಲು. ಸೋಂಕು ಆರಂಭದ ಫೆಬ್ರವರಿ, ಮಾರ್ಚ್‌ನಲ್ಲಿ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದ ವಿದೇಶಿ ಪ್ರಯಾಣಿಕರಿಗೆ ಥರ್ಮಲ್‌ ಸ್ಕ್ರೀನಿಂಗ್‌ ಮಾತ್ರ ಮಾಡಲಾಗುತ್ತಿತ್ತು. ಹೀಗಾಗಿ, ಸೋಂಕಿನ ಲಕ್ಷಣ ಇಲ್ಲದೇ ಕೋವಿಡ್ ವೈರಸ್‌ ಹೊತ್ತು ತಂದಿದ್ದ ನೂರಾರು ಪ್ರಯಾಣಿಕರು ರಾಜ್ಯ ಸೇರಿದರು. ಇದರಿಂದಾಗಿ ನಂತರದ ದಿನಗಳಲ್ಲಿ ರಾಜ್ಯದಲ್ಲಿ ಸೋಂಕಿನ ಮಹಾನ್ಪೋಟವೇ ಆಯಿತು.

ಪ್ರಸ್ತುತವೂ ರೂಪಾಂತರ ಕೋವಿಡ್ ಭೀತಿ ತಡೆಗಟ್ಟಲು ಡಿ.23 ರಿಂದ ಎಲ್ಲಾ ವಿದೇಶ ಪ್ರಯಾಣಿಕರಿಗೂ ಸೋಂಕು ಪರೀಕ್ಷೆ ವರದಿ ಕಡ್ಡಾಯ ಮಾಡಲಾಗಿದೆ. ಆದರೂ, ನಿತ್ಯ ವಿಮಾನ ನಿಲ್ದಾಣಕ್ಕೆ ವಿದೇಶದಿಂದ ಬಂದಿಳಿಯುವವರ ಪೈಕಿ ಶೇ.40 ರಷ್ಟು ಪ್ರಯಾಣಿಕರು ಕೊರೊನಾ ವರದಿ ಇಲ್ಲದೆ ಆಗಮಿಸುತ್ತಿದ್ದಾರೆ. ಇವರಿಗೆ ಥರ್ಮಲ್‌ ಸ್ಕ್ರೀನಿಂಗ್‌ ಮಾಡಿ, ವಿಮಾನ ನಿಲ್ದಾಣದಲ್ಲಿ ಖಾಸಗಿ, ಆರೋಗ್ಯ ಇಲಾಖೆಯಿಂದ ಲಭ್ಯವಿರುವ ಸೋಂಕು ಪರೀಕ್ಷೆಗೆ ಒಳಗಾಗುವಂತೆ ಸೂಚಿಸಲಾಗುತ್ತದೆ. ಅಲ್ಲಿ ಪರೀಕ್ಷೆಗೆಂದು ಗಂಟಲು ದ್ರವ ಮಾದರಿ ಪಡೆದು ಫ‌ಲಿತಾಂಶ ಬಂದ ಕೂಡಲೇ ತಿಳಿಸಲಾಗುತ್ತದೆ ಎಂದು ಹೇಳಿ ನಿಲ್ದಾಣದಿಂದ ಹೊರಗೆ ಕಳುಹಿಸಲಾಗುತ್ತಿದೆ. ಸೋಂಕು ಇದ್ದವರೂ ನಿರಾತಂಕವಾಗಿ ಯಾವುದೇ ಕಡಿವಾಣ ಇಲ್ಲದೆ ಮುಕ್ತವಾಗಿ ರಾಜ್ಯದೊಳಗೆ ಪ್ರವೇಶಿಸುತ್ತಿದ್ದಾರೆ. ವಿಮಾನ ನಿಲ್ದಾಣದಲ್ಲಿ ಕಠಿಣ ಕ್ರಮಗಳಿಗೆ ಮುಂದಾಗದೇ ರಾಜ್ಯ ಸರ್ಕಾರ ಹಿಂದಿನ ತಪ್ಪನ್ನೇ ಮತ್ತೆಮಾಡುತ್ತಿದೆ. ನೆಗೆಟಿವ್‌ ವರದಿ ಬಂದ ನಂತರವಷ್ಟೇ ಮನೆಗೆ ಕಳುಹಿಸಬೇಕು. ಇಲ್ಲದಿದ್ದರೆ ಸೋಂಕಿನ ಹರಡುವಿಕೆಗೆ ದಾರಿಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.

2,000ಕ್ಕೂ ಅಧಿಕ ಪ್ರಯಾಣಿಕರ ಬಳಿ ವರದಿ ಇಲ್ಲ: ವಿದೇಶಿ ಪ್ರಯಾಣಿಕರಿಗೆ ಕೊರೊನಾ ವರದಿ ಕಡ್ಡಾಯಗೊಳಿಸಿದ ಡಿ.23 ರಿಂದ ಡಿ.31 ರವರೆಗೂ ಬೆಂಗಳೂರು, ಮಂಗಳೂರು ವಿಮಾನ ನಿಲ್ದಾಣಗಳಿಗೆ 5,512 ಪ್ರಯಾಣಿರು ಆಗಮಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ತಪಾಸಣೆ ನಡೆಸುತ್ತಿರುವ ಆರೋಗ್ಯ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ ಶೇ.35 ರಿಂದ 40 ಪ್ರಯಾಣಿಕರು ವರದಿ ತರುತ್ತಿಲ್ಲ. ಈ ಪ್ರಕಾರ ಅಂದಾಜು 2,000ಕ್ಕೂ ಅಧಿಕ ಮಂದಿ ವರದಿ ಇಲ್ಲದೆ ಆಗಮಿಸಿದ್ದು, ನಿಲ್ದಾಣದಲ್ಲಿಯೇ ಪರೀಕ್ಷೆಗೆ ಒಳಗಾಗಿದ್ದಾರೆ. ಇವರಲ್ಲಿ ಎಷ್ಟು ಮಂದಿಗೆ ಸೋಂಕು ದೃಢಪಟ್ಟಿದೆ ಎಂಬ ಮಾಹಿತಿಯನ್ನು ಇಲಾಖೆ ನೀಡುತ್ತಿಲ್ಲ.

772ಕ್ಕೂ ಹೆಚ್ಚು ಪ್ರಯಾಣಿಕರು ಉಚಿತ ತಪಾಸಣೆ ಆಯ್ಕೆ:

Advertisement

ಕೋವಿಡ್ ವರದಿ ಇಲ್ಲದೆ ಆಗಮಿಸುತ್ತಿರುವವರ ಪೈಕಿ 772 ವಿದೇಶಿ ಪ್ರಯಾಣಿಕರು ಆರೋಗ್ಯ ಇಲಾಖೆ ವಿಮಾನ ನಿಲ್ದಾಣದಲ್ಲಿಟ್ಟಿರುವ ಉಚಿತ ಪರೀಕ್ಷಾ ಶಿಬಿರದಲ್ಲಿ ಪರೀಕ್ಷೆಗೊಳಗಾಗಿದ್ದಾರೆ. ಬಾಕಿ ಪ್ರಯಾಣಿಕರು ನಿಲ್ದಾಣ ಪ್ರಾಧಿಕಾರ ವ್ಯವಸ್ಥೆ ಮಾಡಿರುವ ಖಾಸಗಿ ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಗಾಗುತ್ತಿದ್ದಾರೆ ಎಂದು ಬೆಂ.ಗ್ರಾಮಾಂತರ ಜಿಲ್ಲೆ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ಪ್ರವಾಸ ಮೋಜು ಮಸ್ತಿಯಲ್ಲಿ: ವಿಮಾನ ನಿಲ್ದಾಣದಲ್ಲಿ ಪರೀಕ್ಷೆಗೆಂದು ಗಂಟಲು ದ್ರವ ನೀಡುವ ಪ್ರಯಾಣಿಕರಿಗೆ ವರದಿ ಬರುವವರೆಗೂ ಹೋಂ ಕ್ವಾರಂಟೈನ್‌ ಇರುವಂತೆ ತಿಳಿಸಲಾಗುತ್ತದೆ. ಆದರೆ, ಈ ಪ್ರಯಾಣಿಕರು ತಮ್ಮ ಊರುಗಳಿಗೆ, ಪ್ರವಾಸ ಸ್ಥಳಗಳಿಗೆ ಮುಕ್ತವಾಗಿ ಓಡಾಡುತ್ತಿದ್ದರೆ. ಇನ್ನೊಂದೆಡೆ ಈ ಪ್ರಯಾಣಿಕರ ಸೋಂಕು ಪರೀಕ್ಷಾ ವರದಿಯೂ ತಡವಾಗುತ್ತಿದೆ ಎಂಬ ಆರೋಪ ಕೇಳಿಬಂದಿವೆ.

ಕ್ವಾರಂಟೈನ್‌ ಆಗುತ್ತಿಲ್ಲ :

ಈ ಹಿಂದೆ ವಿದೇಶದಿಂದ ಬಂದ ಪ್ರಯಾಣಿಕರು ಸೋಂಕು ವರದಿ ಇದ್ದರೂ ಕಡ್ಡಾಯ 14 ದಿನಗಳ ಹೋಂ ಕ್ವಾರಂಟೈನ್‌ ಇರಬೇಕಿತ್ತು. ಸದ್ಯ ವಿದೇಶದಿಂದ ಬರುವವರಿಂದಲೇ ರೂಪಾಂತರ ಆತಂಕವಿದ್ದರೂ ಕ್ವಾರಂಟೈನ್‌ ನಿಯಮ ಜಾರಿಗೊಳಿಸಿಲ್ಲ. ನೆಗೆಟಿವ್‌ ವರದಿ ಇದ್ದರೂ, ತಡವಾಗಿ ಸೋಂಕು ಕಾಣಿಸಿಕೊಳ್ಳುವವರಿಂದ ಅಥವಾ ವಿಮಾನದಲ್ಲಿ ಸೋಂಕಿತರೊಂದಿಗೆ ಪ್ರಯಾಣ ಮಾಡಿರುವವರಿಂದ ರಾಜ್ಯದಲ್ಲಿ ಸೋಂಕು ಹರಡುವ ಸಾಧ್ಯತೆಗಳಿವೆ. ಹೀಗಾಗಿ, ಎಲ್ಲಾ ವಿದೇಶಿ ಪ್ರಯಾಣಿಕರಿಗೆ ಕಡ್ಡಾಯ ಏಳು ದಿನವಾದರೂ ಹೋಂ ಕ್ವಾರಂಟೈನ್‌ ಸೂಚಿಸಬೇಕು ಎಂಬ ಅಭಿಪ್ರಾಯ ಕೇಳಿಬಂದಿದೆ.

ನಿತ್ಯ ಬರುವ ವಿದೇಶಿ ಪ್ರಯಾಣಿಕರ ಪೈಕಿ ಶೇ.35ರಿಂದ 40 ಮಂದಿ ಕೋವಿಡ್ ವರದಿ ಇಲ್ಲದೆ ಆಗಮಿಸುತ್ತಿದ್ದಾರೆ. ಕಾರಣ ಕೇಳಿದರೆ ಪ್ರವಾಸ ನಿಗದಿ ಆಗಿರಲಿಲ್ಲ, ಸೂಕ್ತ ಪ್ರಯೋಗಾಲಯ ಲಭ್ಯವಿರಲಿಲ್ಲ, ಇಲ್ಲಿಯೇ ಪರೀಕ್ಷೆಗೊಳಗಾಗೋಣ ಎಂದು ಹೇಳುತ್ತಾರೆ. ನಿಲ್ದಾಣದಲ್ಲಿ ಸೋಂಕು ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ. ಹೆಸರು ಹೇಳಲಿಚ್ಛಿಸದ ಆರೋಗ್ಯ ಇಲಾಖೆ ಅಧಿಕಾರಿ

 

-ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next