Advertisement

ಹಾಟ್‌ನಲ್ಲಿ 40 ಕೋಟಿ ಜನ; ಉ.ಪ್ರ.ದಲ್ಲಿದೆ ಹೆಚ್ಚಿನ ಸಂಖ್ಯೆ

01:28 AM May 03, 2020 | Sriram |

ಹೊಸದಿಲ್ಲಿ: ದೇಶದ 130 ಜಿಲ್ಲೆಗಳನ್ನು ಕೋವಿಡ್-19 ಹಾಟ್‌ಸ್ಪಾಟ್‌ಗಳನ್ನಾಗಿ ವಿಂಗಡಿಸಿ ಕೇಂದ್ರ ಸರ್ಕಾರ ಶುಕ್ರವಾರ ಪ್ರಕಟಿಸಿದೆ. ಆತಂಕಕಾರಿ ಅಂಶ‌ವೆಂದರೆ ಈ ಜಿಲ್ಲೆಗಳಲ್ಲಿಯೇ ದೇಶದ ಮೂರನೇ ಒಂದರಷ್ಟು ಮಂದಿ ಅಂದರೆ 40 ಕೋಟಿ ಮಂದಿ ಇದ್ದಾರೆ.

Advertisement

130 ಕೆಂಪು ವಲಯಗಳಲ್ಲಿ 8.3 ಕೋಟಿ ಮನೆಗಳಿವೆ. 2,500 ಪಟ್ಟಣಗಳಿವೆ. 1,20,000 ಹಳ್ಳಿಗಳಿವೆ. ಇದು ಭಾರತದ ಒಟ್ಟು ಭೂಭಾಗದ ಐದನೇ ಒಂದು ಭಾಗ ಎಂದು 2011ರ ಜನಗಣತಿ ವರದಿ ಹೇಳುತ್ತದೆ. ಏ. 15ರಂದು ಬಿಡುಗಡೆಯಾಗಿದ್ದ ಕೇಂದ್ರದ ಪಟ್ಟಿಯಲ್ಲಿ 170 ಜಿಲ್ಲೆಗಳನ್ನು ಕೆಂಪು ವಲಯ ಅಥವಾ ಹಾಟ್‌ಸ್ಪಾಟ್‌ಗಳೆಂದು ಹೆಸರಿಸಲಾಗಿತ್ತು. ಅವುಗಳಲ್ಲಿ 92 ಜಿಲ್ಲೆಗಳನ್ನು ಕೈಬಿಟ್ಟು 52 ಹೊಸ ಜಿಲ್ಲೆಗಳನ್ನು ಈ ವಲಯಕ್ಕೆ ಸೇರಿಸಲಾಗಿದೆ. ಅಲ್ಲಿಗೆ 130 ಜಿಲ್ಲೆಗಳು ಹಾಟ್‌ಸ್ಪಾಟ್‌ ಎಂದೆನಿಸಿವೆ. ಬೆಂಗಳೂರು ಸೇರಿದಂತೆ ಏಳು ಮಹಾನಗರಗಳು ಹಾಗೂ 22 ರಾಜ್ಯಗಳ ಪ್ರಮುಖ ಜಿಲ್ಲೆಗಳೂ ಈ ಹಾಟ್‌ಸ್ಪಾಟ್‌ ಪಟ್ಟಿಯಲ್ಲಿವೆ.

ಉ.ಪ್ರ.ದಲ್ಲಿ ಹೆಚ್ಚು: ದೇಶದಲ್ಲಿ ಅತಿ ಹೆಚ್ಚು ಕೆಂಪು ವಲಯ ಜಿಲ್ಲೆಗಳನ್ನು ಹೊಂದಿರುವುದು ಉತ್ತರ ಪ್ರದೇಶ. ಆ ರಾಜ್ಯದ ಒಟ್ಟು 75 ಜಿಲ್ಲೆಗಳಲ್ಲಿ 19 ಜಿಲ್ಲೆಗಳನ್ನು ಹಾಟ್‌ಸ್ಪಾಟ್‌ಗಳೆಂದು ಗುರುತಿಸಲಾಗಿದೆ. ಆನಂತರದ ಸ್ಥಾನ ಮಹಾರಾಷ್ಟ್ರಕ್ಕೆ ಸಲ್ಲುತ್ತದೆ. ಅಲ್ಲಿ ಒಟ್ಟು 36 ಜಿಲ್ಲೆಗಳಿದ್ದು ಅವುಗಳಲ್ಲಿ 14 ಜಿಲ್ಲೆಗಳನ್ನು ಹಾಟ್‌ಸ್ಪಾಟ್‌ಗಳೆಂದು ಪರಿಗಣಿಸಲಾಗಿದೆ. ತೃತೀಯ ಸ್ಥಾನದಲ್ಲಿ ತಮಿಳುನಾಡು ಇದೆ. ಅಲ್ಲಿರುವ ಒಟ್ಟು 37 ಜಿಲ್ಲೆಗಳಲ್ಲಿ 12 ಜಿಲ್ಲೆಗಳನ್ನು ಹಾಟ್‌ಸ್ಪಾಟ್‌ಗಳೆಂದು ಗುರುತಿಸಲಾಗಿದೆ.

ಮುಂಬೈ ಪರಿಸ್ಥಿತಿ ಕಳವಳಕಾರಿ: ಮುಂಬೈ ಜಿಲ್ಲೆ ದೇಶದಲ್ಲಿಯೇ ಅತಿ ಹೆಚ್ಚು ಬಾಧೆಗೊಳಗಾದ ಜಿಲ್ಲೆಯಾಗಿದೆ. ಇಡೀ ಮಹಾರಾಷ್ಟ್ರದಲ್ಲಿ ದಾಖಲಾಗಿರುವ ಕೋವಿಡ್-19 ಸೋಂಕಿತರಲ್ಲಿ ಶೇ. 71.13ರಷ್ಟು ಪ್ರಕರಣಗಳು ಮುಂಬೈನಲ್ಲೇ ದಾಖಲಾಗಿವೆ.ದೇಶದ ಒಟ್ಟು ಪ್ರಕರಣಗಳಲ್ಲಿ ಐದನೇ ಒಂದು ಭಾಗ ಮುಂಬೈನಲ್ಲೇ ಇವೆ. ಅದಕ್ಕೆ ಪೂರಕವಾಗಿ ರಾಜ್ಯದಲ್ಲಿ ಶನಿವಾರ 790 ಪ್ರಕರಣ ಪತ್ತೆಯಾಗಿದೆ. ಏ.18ರಿಂದ 30ರ ಅವಧಿಯಲ್ಲಿ ಅಲ್ಲಿನ ಪ್ರಕರಣಗಳ ಸಂಖ್ಯೆ ಮೂರು ಪಟ್ಟು (3.39 ಪಟ್ಟು) ಹೆಚ್ಚಾಗಿರುವುದು ಕಳವಳಕಾರಿ ವಿಚಾರ.

ಒಂದೇ ದಿನ 2,411
ಮಂದಿಗೆ ಸೋಂಕು
ಕಳವಳಕಾರಿ ಸಂಗತಿಯೆಂಬಂತೆ ದೇಶಾದ್ಯಂತ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಕೇವಲ 24 ಗಂಟೆಗಳ ಅವಧಿಯಲ್ಲಿ ಬರೋಬ್ಬರಿ 2,411 ಮಂದಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಒಂದೇ ದಿನದಲ್ಲಿ ಇಷ್ಟೊಂದು ಪ್ರಕರಣಗಳು ಬೆಳಕಿಗೆ ಬಂದಿರುವುದು ಇದೇ ಮೊದಲು. ಈ ಕುರಿತು ಮಾಹಿತಿ ನೀಡಿದ ಆರೋಗ್ಯ ಸಚಿವಾಲಯ, ಈವರೆಗೆ 10 ಸಾವಿರಕ್ಕೂ ಅಧಿಕ ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ ಎಂದಿದೆ. ದೇಶದಲ್ಲೇ ಅತಿ ಹೆಚ್ಚು ಸೋಂಕಿತರು ಮಹಾರಾಷ್ಟ್ರದಲ್ಲಿದ್ದು, 2 ಹಾಗೂ 3ನೇ ಸ್ಥಾನವನ್ನು ಕ್ರಮವಾಗಿ ಗುಜರಾತ್‌ ಮತ್ತು ದೆಹಲಿ ಪಡೆದಿದೆ.

Advertisement

ಇಬ್ಬಂದಿಯಲ್ಲಿ ಇಂದೋರ್‌
ಮಧ್ಯಪ್ರದೇಶದಲ್ಲಿ ಈವರೆಗೆ ಸಂಭವಿಸಿರುವ ಕೋವಿಡ್-19 ಸಾವುಗಳಲ್ಲಿ ಶೇ. 50ಕ್ಕಿಂತ ಹೆಚ್ಚು ಸಾವುಗಳು ಸಂಭವಿಸಿರುವುದು ಇಂದೋರ್‌ನಲ್ಲೇ. ಆದರೆ, ದೇಶದ ಇತರ ಅತಿ ಹೆಚ್ಚು ಕೋವಿಡ್-19 ಬಾಧಿತ ಜಿಲ್ಲೆಗಳಿಗೆ ಹೋಲಿಸಿದರೆ ಇಂದೋರ್‌ನಲ್ಲಿ ಸೋಂಕು ಹರಡುವಿಕೆಯ ಪ್ರಮಾಣ ಕಡಿಮೆಯೇ. ಅದೊಂದೇ ಇಲ್ಲಿರುವ ಸಮಾಧಾನಕರ ಸಂಗತಿ. ಚೆನ್ನೈ, ಸೂರತ್‌ನಲ್ಲಿ ಸೋಂಕಿತರ ಸಂಖ್ಯೆ  12 ದಿನಗಳಲ್ಲೇ 4 ಪಟ್ಟು ಹೆಚ್ಚಾಗಿದೆ.

ಅಹ್ಮದಾಬಾದ್‌ನಲ್ಲಿ ಆತಂಕ
ಮುಂಬೈನ ನಂತರ ಅತ್ಯಂತ ಆತಂಕ ಹುಟ್ಟಿಸುವ ಜಿಲ್ಲೆಯೆಂದರೆ ಅಹಮದಾಬಾದ್‌. ಗುಜರಾತ್‌ನಲ್ಲಿ ಈವರೆಗೆ ದಾಖಲಾಗಿರುವ ಸೋಂಕಿತರು ಹಾಗೂ ಸೋಂಕಿನಿಂದ ಅಸುನೀಗಿದವರ‌ ಈ ನಗರದಲ್ಲಿಯೇ ಹೆಚ್ಚಾಗಿದೆ. ಸೋಂಕಿತರ ಪ್ರಮಾಣ, 12 ದಿನಗಳಲ್ಲಿ 5.13 ಪಟ್ಟು ಹೆಚ್ಚಾಗಿದೆ. ಸಾವಿನ ಪ್ರಮಾಣ, ಇಡೀ ರಾಷ್ಟ್ರದಲ್ಲಿರುವ ಸರಾಸರಿಗಿಂತ ಹೆಚ್ಚಾಗಿಯೇ ಇದೆ. ಇಡೀ ರಾಷ್ಟ್ರದಲ್ಲಿ ಸಾವಿನ ಪ್ರಮಾಣ ಶೇ. 3.2ರಷ್ಟಿದ್ದರೆ, ನಗರದಲ್ಲಿ ಶೇ. 4.92ರಷ್ಟಿದೆ.

ಕೆಂಪಾದವೋ ಎಲ್ಲ ಕೆಂಪಾದವೋ!
ಕೇಂದ್ರ ಗೃಹ ಇಲಾಖೆ, ಶುಕ್ರವಾರ ಬಿಡುಗಡೆ ಮಾಡಿರುವ ಪಟ್ಟಿಯ ಪ್ರಕಾರ, ದೆಹಲಿಯ ಎಲ್ಲಾ 11 ಜಿಲ್ಲೆಗಳೂ ಕೆಂಪು ವಲಯದಲ್ಲಿವೆ. ಇಡೀ ರಾಜ್ಯದಲ್ಲಿ ಈವರೆಗೆ 3,439 ಪ್ರಕರಣಗಳು ದಾಖಲಾಗಿವೆ. ಅದರಲ್ಲೂ ನವದೆಹಲಿಯು ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿರುವ ಜಿಲ್ಲೆಯಾಗಿದೆ. ಮರಣ ಪ್ರಮಾಣವು ಶೇ. 1.63ರಷ್ಟಿದ್ದರೂ, ಕೋವಿಡ್-19 ಗಾಢವಾದ ಛಾಯೆ ಅಲ್ಲಿನ ನಾಗರಿಕರನ್ನು ಮತ್ತಷ್ಟು ಆತಂಕಕ್ಕೀಡು ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next