Advertisement

40 % ಕಮಿಷನ್‌ ಆರೋಪ ಕಾಂಗ್ರೆಸ್ ಷಡ್ಯಂತ್ರ : ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್

07:52 PM Apr 15, 2022 | Team Udayavani |

ಹುಬ್ಬಳ್ಳಿ: ಗುತ್ತಿಗೆದಾರರು ಮಾಡಿದ ಶೇ. 40 ಕಮಿಷನ್‌ ಆರೋಪದ ಹಿಂದೆ ಯಾರಿದ್ದಾರೆ ಎಂಬುದು ಗೊತ್ತಿದೆ. ಇದೆಲ್ಲ ಕಾಂಗ್ರೆಸ್ ಷಡ್ಯಂತ್ರ.‌ ತನಿಖೆಯ ನಂತರ ಎಲ್ಲವೂ ಹೊರಬರಲಿದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿಕೆ ನೀಡಿದ್ದಾರೆ.

Advertisement

ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಹಾಗೂ ಅದರ ನೇತಾರರು ಷಡ್ಯಂತ್ರ ನಡೆಸುತ್ತಿದ್ದಾರೆ. ಜನರಲ್ಲಿ ಗೊಂದಲ ಸೃಷ್ಟಿಸಿ, ಅದರಲ್ಲಿಯೇ ಬದುಕುತ್ತಿದ್ದಾರೆ. ಶೇ. 40ರಷ್ಟು ಕಮಿಷನ್ ಅನ್ನುವುದೇ ಗೊಂದಲದ ವಿಷಯ. ಆರೋಪ ಸತ್ಯವಲ್ಲ. ಗುತ್ತಿಗೆದಾರರ ಆರೋಪದ ಹಿಂದೆಯೂ ಕಾಂಗ್ರೆಸ್ ಕೈವಾಡವಿದೆ. ಪ್ರಕರಣದ ಕುರಿತು ತನಿಖೆ ನಡೆಯುತ್ತಿದ್ದು, ಸತ್ಯ ಬಹಿರಂಗವಾಗಲಿದೆ. ರಾಜ್ಯದ ಜನತೆಗೂ ಸತ್ಯ ಏನೆಂದು ತಿಳಿದಿದೆ ಎಂದರು.

ಅನೇಕ ವರ್ಷಗಳಿಂದ ಕಾಂಗ್ರೆಸ್ ಗೊಂದಲ ಸೃಷ್ಟಿಸುತ್ತಲೇ ಬಂದಿದೆ. ಹಿಂದಿನ ದಾಖಲೆಗಳನ್ನು ತೆಗೆದು ನೋಡಿದರೆ ಅದು ಗೊತ್ತಾಗುತ್ತದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ‌ ಮಂದಿರಕ್ಕೆ ಭೇಟಿ ನೀಡುತ್ತಾರೆ. ಉಳಿದ ವೇಳೆ ಹೋಗುವುದಿಲ್ಲ. ಕೋವಿಡ್ ವ್ಯಾಕ್ಸಿನ್ ಬಂದಾಗ ರಾಹುಲ್ ಗಾಂಧಿ ಮೋದಿ ವ್ಯಾಕ್ಸಿನ್ ಎಂದು ವ್ಯಂಗ್ಯವಾಡಿದರು. ನಂತರ, ಸೋನಿಯಾ ಗಾಂಧಿ, ರಾಹುಲ್ ಅದೇ ವ್ಯಾಕ್ಸಿನ್ ಪಡೆಯುತ್ತಾರೆ ಎಂದರು.

ಕಾಶ್ಮೀರಕ್ಕೆ ನಿಡಲಾಗಿದ್ದ 370 ಕಲಂ ರದ್ದು ಮಾಡಿದಾಗ ಕಾಂಗ್ರೆಸ್ ಗದ್ದಲ ಎಬ್ಬಿಸಿತ್ತು. ಕೋರ್ಟ್ ನಲ್ಲಿ ರಾಮಮಂದಿರ ವಿಷಯ ಬಂದಾಗ, ಆಗಲೂ ಗೊಂದಲ ಸೃಷ್ಟಿಸಿ ತೀರ್ಪು ನೀಡದಂತೆ ನ್ಯಾಯಾಧೀಶರಿಗೆ ಹೇಳಿದ್ದರು. ಈ ಎಲ್ಲವನ್ನು ನೋಡಿದಾಗ ಕಾಂಗ್ರೆಸ್ ಗೊಂದಲದಲ್ಲಿ ಸಿಲುಕಿದೆ ಎಂದು ಭಾಸವಾಗುತ್ತದೆ. ಸಚಿವ ಈಶ್ವರಪ್ಪ ವಿಷಯದಲ್ಲೂ ಷಡ್ಯಂತ್ರ ನಡೆಸಿದ್ದಾರೆ. ಷಡ್ಯಂತ್ರಗಳನ್ನು ನಡೆಸುವ ಮೂಲಕ ಜನರ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಮುಂಬರುವ ದಿನದಲ್ಲಿ ಅವರು ಇನ್ನಷ್ಟು ಷಡ್ಯಂತ್ರ ರೂಪಿಸಲಿದ್ದಾರೆ. ಕೆಪಿಸಿಸಿ ಅಧ್ಯಕ್ಷರು ಈ ಹಿಂದೆ ವಿಡಿಯೋ ರೂಪಿಸಿದ್ದರು. ಅದು ಎಲ್ಲರಿಗೂ ಗೊತ್ತಿದೆ ಎಂದರು.

ಎಷ್ಟೇ ವಿರೋಧಿಸಿದರೂ ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ‌ ಬರಲಿದೆ. ಕಾಂಗ್ರೆಸ್ ಜನರ ನಡುವೆ ಹೋಗುವುದಿಲ್ಲ. ಯಾವ ಅಭಿವೃದ್ಧಿ ಕೆಲಸಕ್ಕೂ ಕೈ ಜೋಡಿಸುವುದಿಲ್ಲ. ಅವರ ಎಲ್ಲ ಮುಖಂಡರು ಸಹ ಷಡ್ಯಂತ್ರ ನಡೆಸುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ ಎಂದು ಆರೋಪಿಸಿದರು.

Advertisement

ಕರ್ನಾಟಕ ಸೇರಿ ಮುಂಬರುವ ಎಲ್ಲ ರಾಜ್ಯದ ಚುನಾವಣೆಯಲ್ಲಿ ಬಿಜೆಪಿ ಗೆಲ್ಲವು ಸಾಧಿಸಲಿದೆ. ಕರ್ನಾಟಕದಲ್ಲಿ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ. ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಲಿದೆ ಎಂದರು.

ಹೊಸಪೇಟೆಯಲ್ಲಿ ನಡೆಯಲಿರುವ ಕಾರ್ಯಕಾರಿಣಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಆಗಮಿಸಲಿದ್ದಾರೆ. ಅವರ ಸ್ವಾಗತಕ್ಕೆ ಕಾರ್ಯಕರ್ತರು ದೊಡ್ಡ ಪ್ರಮಾಣದಲ್ಲಿ ಸಿದ್ಧತೆ ನಡೆಸಿದ್ದಾರೆ. ಕಾರ್ಯಕಾರಿಣಿ ಪಕ್ಷದ ಕಾರ್ಯಕರ್ತರಿಗೆ ಉತ್ತೇಜನ ನೀಡಲಿದೆ. ಕಾಂಗ್ರೆಸ್ ಕೆಳಮಟ್ಟದಲ್ಲಿದ್ದು ಬಿಜೆಪಿ ಮೇಲೇಳುತ್ತಿದೆ ಎಂದರು.

ಪಿಎಫ್ಐ ಸಂಘಟನೆ ನಿಷೇಧ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರವಿದ್ದಾಗ ಪಿಎಫ್ಐ ಪಥಸಂಚಲನ ನಡೆಯುತ್ತಿದ್ದವು. ಆ ಸಂದರ್ಭ 23 ಹಿಂದೂಗಳ ಹತ್ಯೆಯಾಗಿದೆ. ಬಿಜೆಪಿ ಸರ್ಕಾರ ಬಂದಾಗ ಸಂಘಟನೆ ನಿಯಂತ್ರಿಸಿದ್ದೇವೆ. ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನದಲ್ಲಿ ಪಿಎಫ್ಐ ಸಕ್ರಿಯವಾಗಿದೆ. ಕೆಲವೆಡೆ ಗಲಭೆ ಸಹ ನಡೆಯುತ್ತಿವೆ. ಇದಕ್ಕೆ ಕಾಂಗ್ರೆಸ್ ಬೆಂಬಲವಿರುವುದು ವ್ಯಕ್ತವಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next