Advertisement

ಎಲ್‌ಕೆಜಿ ಸೇರಲು 4 ವರ್ಷ ಆಗಿರಲೇಬೇಕು! ಸರಕಾರದ ನಿಯಮಕ್ಕೆ ಬೆಚ್ಚಿಬಿದ್ದ ಪಾಲಕ, ಪೋಷಕರು

11:47 PM Jun 01, 2023 | Team Udayavani |

ಉಡುಪಿ: ಒಂದನೇ ತರಗತಿ ಸೇರುವ ಮಗುವಿಗೆ ಜೂನ್‌ 1ಕ್ಕೆ ಆರು ವರ್ಷ ತುಂಬಿರಲೇ ಬೇಕೆಂಬ ನಿಯಮ 2025-26ನೇ ಸಾಲಿನಿಂದ ರಾಜ್ಯದಲ್ಲಿ ಜಾರಿಗೆ ಬರಲಿದೆ. ಈ ಹಿನ್ನೆಲೆ ಯಲ್ಲಿ ಈ ವರ್ಷದಿಂದಲೇ ಎಲ್‌ಕೆಜಿ ಸೇರಲು ನಾಲ್ಕು ವರ್ಷ ಆಗಿರಲೇ ಬೇಕು ಎಂಬ ನಿಯಮ ಅನ್ವಯಿಸಿರುವುದು ಪಾಲಕ, ಪೋಷಕರನ್ನು ಕಂಗೆಡಿಸಿದೆ.

Advertisement

ಸಮಗ್ರ ಶಿಕ್ಷಣ ಕರ್ನಾಟಕದಿಂದ ಹೊರಡಿಸಿರುವ ಆದೇಶದನ್ವಯ 2023-24ನೇ ಸಾಲಿಗೆ ಎಲ್‌ಕೆಜಿಗೆ ದಾಖಲಾಗುವ ಮಗುವಿಗೆ ಜೂನ್‌ 1ಕ್ಕೆ 4 ವರ್ಷ ತುಂಬಿರಬೇಕು. ಅದರಂತೆ ಆ ಮಗು ಎಲ್‌ಕೆಜಿ, ಯುಕೆಜಿ ಮುಗಿಸಿ ಒಂದನೇ ತರಗತಿ ಸೇರುವಾಗ 6 ವರ್ಷ ತುಂಬಿರುತ್ತದೆ. ಈ ವರ್ಷ ಎಲ್‌ಕೆಜಿಗೆ ಸೇರುವ ಮಗುವಿಗೆ ಜೂನ್‌ 1ಕ್ಕೆ 3 ವರ್ಷ 11 ತಿಂಗಳಾದರೂ ದಾಖಲಿಸಿಕೊಳ್ಳುವುದಿಲ್ಲ. ಆಗ ಆ ಮಗು 4.11 ವರ್ಷಕ್ಕೆ ಎಲ್‌ಕೆಜಿಗೆ ಸೇರಬೇಕು. ಅಂದರೆ ಒಂದು ವರ್ಷ ಪೂರ್ತಿ ವ್ಯರ್ಥವಾಗಲಿದೆ.

ಶಾಲಾ ಶಿಕ್ಷಣ ಇಲಾಖೆ ಈ ನಿಯಮವು ಪಾಲಕ, ಪೋಷಕರ ಆಕ್ರೋಶಕ್ಕೀಡಾಗಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳೂ ಪಾಲಕ, ಪೋಷಕರ ಪ್ರಶ್ನೆಗೆ ಉತ್ತರಿಸದೇ ಮೌನ ತಳೆದಿದ್ದಾರೆ.
ಇದು ಈ ಹಿಂದಿನ ಬಿಜೆಪಿ ಸರಕಾರ ರೂಪಿಸಿದ ನಿಯಮ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯ ಹಿನ್ನೆಲೆಯಲ್ಲಿ ಒಂದನೇ ತರಗತಿ ಸೇರುವ ಮಗುವಿಗೆ ಆರು ವರ್ಷ ತುಂಬಿರಬೇಕು ಎಂಬುದು ನಿಯಮದ ತಾತ್ಪರ್ಯ. ಅದೇ ಸಂದರ್ಭದಲ್ಲಿ 5 ವರ್ಷ 11 ತಿಂಗಳು, 5 ವರ್ಷ 10 ತಿಂಗಳು ತುಂಬಿದ ಮಕ್ಕಳು ಏನು ಮಾಡಬೇಕೆಂಬುದರ ಬಗ್ಗೆ ಸ್ಪಷ್ಟತೆ ನೀಡಿಲ್ಲ.

ಶಿಕ್ಷಕರ ಗೋಳು
ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ ಈಗಾಗಲೇ ಸರಕಾರದ ವತಿಯಿಂದಲೇ ಎಲ್‌ಕೆಜಿ, ಯುಕೆಜಿ ನಡೆಯುತ್ತಿದೆ. ಇನ್ನು ಕೆಲವು ಸರಕಾರಿ ಶಾಲೆಗಳಲ್ಲಿ ಎಸ್‌ಡಿಎಂಸಿ ಹಾಗೂ ಹಳೇ ವಿದ್ಯಾರ್ಥಿಗಳು ಹಾಗೂ ದಾನಿಗಳ ನೆರವಿನಿಂದ ನಡೆಸಲಾಗುತ್ತಿದೆ. ಇದಕ್ಕೆ ಸರಕಾರದ ಅನುದಾನ ಅಥವಾ ಯಾವುದೇ ಸವಲತ್ತು ಇಲ್ಲ. ಆದರೆ ಹೊಸ ನಿಯಮದಿಂದ 3 ವರ್ಷ 10 ತಿಂಗಳು, 3 ವರ್ಷ 11 ತಿಂಗಳು ಆಗಿರುವ ಮಕ್ಕಳನ್ನು ದಾಖಲಿಸಿಕೊಳ್ಳಲಾಗದೇ ಇಕ್ಕಟ್ಟಿಗೆ ಸಿಲುಕಿಕೊಂಡಂತಾಗಿದೆ.

ಹಿಂದಿನಂತಿದ್ದರೆ ಚೆಂದ
ಈ ಹಿಂದೆ 5 ವರ್ಷ 9 ತಿಂಗಳು ಆಗಿರುವ ಮಕ್ಕಳನ್ನು ಒಂದನೇ ತರಗತಿಗೆ ದಾಖಲು ಮಾಡಿಕೊಳ್ಳಲಾಗುತ್ತಿತ್ತು. ಆದರೆ ಈಗಿನ ಜೂನ್‌ 1ಕ್ಕೆ ಪೂರ್ಣ 6 ವರ್ಷ ಆಗಿರಬೇಕು ಎಂಬ ನಿಯಮ ಸೂಕ್ತವಾಗಿಲ್ಲ. ಸರಕಾರ ಇಂತಹ ನಿಯಮಗಳನ್ನು ಜಾರಿ ಮಾಡಿ ಅನಗತ್ಯ ಆತಂಕ ಸೃಷ್ಟಿಸುತ್ತಿದೆ. ಹಾಗಾಗಿ ಈ ಹಿಂದಿನ ನಿಯಮವನ್ನೇ ಪುನರ್‌ ಅನುಷ್ಠಾನಕ್ಕೆ ತರಬೇಕು ಎನ್ನುವುದು ಕೆಲವು ಪಾಲಕ, ಪೋಷಕರ ಆಗ್ರಹ.

Advertisement

ಅಧಿಕಾರಿಗಳಲ್ಲೂ ಸ್ಪಷ್ಟತೆಯಿಲ್ಲ
ಈ ನಿಯಮದಿಂದ ಪುಟ್ಟ ಮಕ್ಕಳ ಭವಿಷ್ಯದ ಒಂದು ವರ್ಷ ಹಾಳಾಗದಂತೆ ತಡೆಯಲು ಪರ್ಯಾಯ ಮಾರ್ಗ ಏನು ಎಂಬ ಬಗ್ಗೆ ಅಧಿಕಾರಿಗಳನ್ನು ಕೇಳಿದರೂ ಸ್ಪಷ್ಟತೆ ಇಲ್ಲ. ಸರಕಾರದ ಆದೇಶವನ್ನು ಪಾಲಿಸುತ್ತಿದ್ದೇವೆ ಎಂದಷ್ಟೇ ಹೇಳುತ್ತಿದ್ದಾರೆ.

ಖಾಸಗಿ ಶಾಲೆಗೂ ಅನ್ವಯ
ಈ ಆದೇಶ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಿಗೂ ಅನ್ವಯಿಸುತ್ತದೆ. ಆದರೆ ಖಾಸಗಿ ಹಾಗೂ ಅನುದಾನಿತ ಶಾಲೆಗಳು ಇದನ್ನು ಅಷ್ಟು ಗಂಭೀರವಾಗಿ ಪಾಲಿಸದ ಮಾತು ಕೇಳಿಬಂದಿದೆ. ಆದರೆ ಸರಕಾರಿ ಶಾಲೆಗಳಲ್ಲಿ ಆದೇಶ ಉಲ್ಲಂ ಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಅನಿವಾರ್ಯವಾಗಿ ಶಿಕ್ಷಕರು ಪಾಲಿಸುತ್ತಿದ್ದಾರೆ.

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next