ಬೆಂಗಳೂರು: ಬಿಬಿಎಂಪಿಯಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮುಂದುವರಿಸಲಿರುವ ಜೆಡಿಎಸ್, ಮೇಯರ್ ಸ್ಥಾನವನ್ನು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಟ್ಟು, ಉಪಮೇಯರ್ ಹಾಗೂ ತೆರಿಗೆ ಮತ್ತು ಆರ್ಥಿಕ ಸೇರಿದಂತೆ ಪ್ರಮುಖ ನಾಲ್ಕು ಸ್ಥಾಯಿ ಸಮಿತಿಗಳನ್ನು ತನ್ನ ಬಳಿ ಇಟ್ಟುಕೊಳ್ಳಲು ತೀರ್ಮಾನಿಸಿದೆ.
ಬಿಬಿಎಂಪಿ ಮೈತ್ರಿ ಹಾಗೂ ಮೇಯರ್, ಉಪಮೇಯರ್ ಆಯ್ಕೆ ಸಂಬಂಧ ಭಾನುವಾರ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಅವರ ನಿವಾಸದಲ್ಲಿ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಗೃಹ ಸಚಿವ ರಾಮಲಿಂಗಾ ರೆಡ್ಡಿ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಭೆಯಲ್ಲಿ ಜೆಡಿಎಸ್ ಶಾಸಕ ಕೆ. ಗೋಪಾಲಯ್ಯ ಹಾಗೂ ವಿಧಾನಪರಿಷತ್ ಸದಸ್ಯ ಟಿ.ಎ. ಶರವಣ ಇದ್ದರು.
ಮೇಯರ್ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಅನ್ನುವುದು ನಿಮಗೆ (ಕಾಂಗ್ರೆಸ್) ಬಿಟ್ಟ ವಿಚಾರ. ಆದರೆ, ಉಪಮೇಯರ್ ಸ್ಥಾನ ಹಾಗೂ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಸೇರಿದಂತೆ ಪ್ರಮುಖ ನಾಲ್ಕು ಸ್ಥಾಯಿ ಸಮಿತಿಗಳಿಗೆ ನಮ್ಮ (ಜೆಡಿಎಸ್) ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ. ಅಲ್ಲದೇ ಕಳೆದ 2 ವರ್ಷದ ಮೈತ್ರಿಯ ಅವಧಿಯಲ್ಲಿ ಜೆಡಿಎಸ್‌ನ್ನು ಕಡೆಗಣಿಸಿರುವುದು, ಅನುದಾನ ಹಂಚಿಕೆಯಲ್ಲಿ ಮಾಡಲಾದ ತಾರತಮ್ಯ ಸೇರಿದಂತೆ ಅನೇಕ ನೋವುಗಳನ್ನು ಪಕ್ಷದ ಕಾರ್ಪೋರೇಟರ್‌ಗಳು ಹೇಳಿಕೊಂಡಿದ್ದಾರೆ.
ಮುಂದಿನ ದಿನಗಳಲ್ಲಿ ಅದೆಲ್ಲವೂ ಸರಿಯಾಗಬೇಕು. ಅದೇ ರೀತಿ ಸಮನ್ವಯ ಸಮಿತಿ ರಚನೆಗೆ ಕಾಂಗ್ರೆಸ್ ಒಪ್ಪಬೇಕು. ಪ್ರಮುಖ ತೀರ್ಮಾನಗಳು ಈ ಸಮನ್ವಯ ಸಮಿತಿಯಲ್ಲೇ ಆಗಬೇಕು ಎಂದು ದೇವೇಗೌಡರು ಹೇಳಿದ್ದಕ್ಕೆ ರಾಮಲಿಂಗಾರೆಡ್ಡಿ ಒಪ್ಪಿಕೊಂಡು, ಮುಂದಿನ ದಿನಗಳಲ್ಲಿ ಇಂತಹದ್ದಕ್ಕೆ ಅವಕಾಶ ನೀಡದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಒಕ್ಕಲಿಗರೇತರಿಗೆ ಉಪಮೇಯರ್ ಸ್ಥಾನ: ರಾಮಲಿಂಗಾರೆಡ್ಡಿ ಅವರೊಂದಿಗಿನ ಸಭೆ ಬಳಿಕ ದೇವೇಗೌಡರು, ಜೆಡಿಎಸ್‌ನ ಎಲ್ಲ 14 ಕಾರ್ಪೋರೇಟರ್‌ಗಳು ಹಾಗೂ ಕೆಲವು ಶಾಸಕರೊಂದಿಗೆ ಸಭೆ ನಡೆಸಿದರು. ಕಳೆದ ಎರಡು ಅವಧಿಗೆ ಉಪಮೇಯರ್ ಸ್ಥಾನಕ್ಕೆ ಒಕ್ಕಲಿಗ ಅಭ್ಯರ್ಥಿಗಳಿಗೆ ಅವಕಾಶ ನೀಡಿರುವುದರಿಂದ ಈ ಬಾರಿ ಒಕ್ಕಲಿಗರೇತರ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ಹಾಗಾಗಿ ಓಬಿಸಿ ಅಥವಾ ಮುಸ್ಲಿಂ ಅಭ್ಯರ್ಥಿಯನ್ನು ಉಪಮೇಯರ್ ಸ್ಥಾನಕ್ಕೆ ಆಯ್ಕೆ ಮಾಡಬೇಕಿದೆ.
ಅಲ್ಲದೇ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಸೇರಿದಂತೆ ನಾಲ್ಕು ಪ್ರಮುಖ ಸಮಿತಿಗೆ ಪಕ್ಷದ 14 ಕಾರ್ಪೋರೇಟರ್‌ಗಳ ಪೈಕಿ ಇಲ್ಲಿವರೆಗೆ ಅಧಿಕಾರ ಅನುಭವಿಸದೇ ಇದ್ದವರನ್ನು ಪರಿಗಣಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಉಪಮೇಯರ್ ಸ್ಥಾನಕ್ಕೆ ಮೂವರು ಆಕಾಂಕ್ಷಿಗಳಿದ್ದು, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿಯವರ ಜತೆ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುವುದಾಗಿ ಮಾಜಿ ಪ್ರಧಾನಿ ದೇವೇಗೌಡರು ತಿಳಿಸಿದರು.