Advertisement

ಮುಂದಿನ ವಾರ 4 ಚಿತ್ರಗಳು

10:34 AM Sep 02, 2017 | Team Udayavani |

“ಮುಗುಳು ನಗೆ’ ಬಂದುಬಿಡಲಿ ಎಂದು ಕಾದಿದ್ದ ಸಣ್ಣ ಮತ್ತು ಹೊಸಬರ ಚಿತ್ರಗಳೆಲ್ಲಾ ಮುಂದಿನ ವಾರ ಒಂದರಹಿಂದೊಂದು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈಗಾಗಲೇ ಮುಂದಿನ ವಾರ ನಾಲ್ಕು ಚಿತ್ರಗಳು ಬಿಡುಗಡೆಯಾಗಲಿವೆ ಎಂದು ಜಾಹೀರಾತು ಬಂದಿದ್ದು, ಆ ನಾಲ್ಕರ ಜೊತೆಗೆ ಇನ್ನೊಂದೆರೆಡು ಮೂರು ಚಿತ್ರಗಳು ಹೆಚ್ಚಾದರೆ ಅದರಲ್ಲಿ ಆಶ್ಚರ್ಯವೇನಿಲ್ಲ.

Advertisement

ಮುಂದಿನ ಶುಕ್ರವಾರ, ಗೌರಿಶಿಖರ್‌ ಅಭಿನಯದ “ರಾಜಹಂಸ’, ನೃತ್ಯ ನಿರ್ದೇಶಕ ಕಪಿಲ್‌ ಮೊದಲ ಬಾರಿಗೆ ನಿರ್ದೇಶಿಸಿರುವ “ಹಳ್ಳಿ ಸೊಗಡು’, ಹೊಸಬರ “ಅಯನ’ ಮತ್ತು “ದರ್ಪಣ’ ಚಿತ್ರಗಳು ಬಿಡುಗಡೆಯಾಗಲಿದ್ದು, ಈ ನಾಲ್ಕು ಚಿತ್ರಗಳ ಬಿಡುಗಡೆಯ ದಿನಾಂಕ ಘೋಷಿಸಲಾಗಿದೆ. ಈ ಪೈಕಿ “ರಾಜಹಂಸ’ ಚಿತ್ರವು ಜನಮನ ಸಿನಿಮಾಸ್‌ ಬ್ಯಾನರ್‌ನಡಿ ನಿರ್ಮಿತವಾಗಿದ್ದು, ಜಡೇಶ್‌ ಕುಮಾರ್‌ ಎನ್ನುವವರು ನಿರ್ದೇಶಿಸಿದ್ದಾರೆ.

ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ “ಪುಟ್ಟಗೌರಿ ಮದುವೆ’ ಧಾರಾವಾಹಿಯಲ್ಲಿ ಪುಟ್ಟಗೌರಿಯಾಗಿ ಕಾಣಿಸಿಕೊಳ್ಳುತ್ತಿರುವ ರಂಜನಿ ರಾಘವನ್‌ ಇಲ್ಲಿ ನಾಯಕಿಯಾಗಿದ್ದಾರೆ. ಚಿತ್ರದಲ್ಲಿ ಯಮುನಾ, ಬಿ.ಸಿ. ಪಾಟೀಲ್‌, ತಬಲಾ ನಾಣಿ, ರಾಜು ತಾಳಿಕೋಟೆ, ಬುಲೆಟ್‌ ಪ್ರಕಾಶ್‌, ವಿಜಯ್‌ ಚೆಂಡೂರ್‌ ಇತರರು ನಟಿಸಿದ್ದಾರೆ.

ಅರವಿಂದ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ “ದರ್ಪಣ’ ಚಿತ್ರವನ್ನು ಎಡ್ವರ್ಡ್‌ ಡಿ’ಸೋಜಾ ನಿರ್ಮಿಸಿದ್ದಾರೆ. ಇನ್ನು ಚಿತ್ರದಲ್ಲಿ ಅರವಿಂದ್‌ ರಾವ್‌, ದುಬೈ ರಫೀಕ್‌, ಸಂದೀಪ್‌ ಮಲಾನಿ, ಯತಿರಾಜ್‌, ಸೂರ್ಯ, ಮಧುರ ಮುಂತಾದವರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ನಿರ್ದೇಶಕ ಕಾರ್ತಿಕ್‌ ವೆಂಕಟೇಶ್‌ ಅವರು ಈ ಚಿತ್ರಕ್ಕೆ 21 ವಿಭಾಗದಲ್ಲಿ ಕೆಲಸ ಮಾಡಿದ್ದು, ಗಿನ್ನೀಸ್‌ ದಾಖಲೆ ಪುಸ್ತಕಕ್ಕೆ ಅರ್ಜಿ ಸಲ್ಲಿಸಲಾಗಿದೆ.

ಇನ್ನು ಡಾ. ದೊಡ್ಡರಂಗೇಗೌಡರ ಅಭಿಮಾನಿಯ ಕಥೆ ಇರುವ “ಹಳ್ಳಿ ಸೊಗಡು’ ಚಿತ್ರವನ್ನು ಸತೀಶ್‌ ಕುಮಾರ್‌ ಮೆಹ್ತಾ ನಿರ್ಮಿಸುತ್ತಿದ್ದಾರೆ. ಇನ್ನು ಈ ಚಿತ್ರದ ಪರಿಕಲ್ಪನೆ ಮತ್ತು ನಿರ್ದೇಶನ ಮಾಡಿರುವವರು ಕಪಿಲ್‌. ಈ ಹಿಂದೆ ಹಲವು ಚಿತ್ರಗಳಿಗೆ ನೃತ್ಯ ನಿರ್ದೇಶನ ಮಾಡಿದ್ದ ಎಂ.ಆರ್‌. ಕಪಿಲ್‌, ಈ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶಕರಾಗುತ್ತಿದ್ದಾರೆ. ಚಿತ್ರಕ್ಕೆ ರಾಗ ರಮಣ ಅವರು ಸಂಗೀತ ಸಂಯೋಜಿಸುತ್ತಿದ್ದಾರೆ.

Advertisement

“ಅಯನ’ ಚಿತ್ರವನ್ನು ನಿರ್ದೇಶಿಸಿರುವುದು ಗಂಗಾಧರ್‌ ಸಾಲಿಮಠ ಅವರು ನಿರ್ದೇಶಕರಷ್ಟೇ ಅಲ್ಲ, ನಿರ್ಮಾಪಕರಲ್ಲೊಬ್ಬರು. ಕಥೆಯನ್ನೂ ಅವರೇ ಬರೆದಿದ್ದಾರೆ. ಈ ಚಿತ್ರದ ಮೂಲಕ ದೀಪಕ್‌ ಸುಬ್ರಹ್ಮಣ್ಯ, ಅಪೂರ್ವ ಇಬ್ಬರೂ ನಾಯಕ-ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಜೊತೆಗೆ ನಾಗಶ್ರೀ, ಕಾರ್ತಿಕ್‌ ಅನಂತಪದ್ಮನಾಭ, ಗೌತಮ್‌ ಶಶಿಧರ್‌, ಶ್ರೀಹರ್ಷ ಮುಂತಾದವರು ನಟಿಸಿದ್ದಾರೆ. ಶ್ರೀರಾಮ್‌ ಎನ್ನುವವರು ಸಂಗೀತ ಸಂಯೋಯಿಸಿದರೆ, ವರುಣ್‌ ಎನ್ನುವವರು ಛಾಯಾಗ್ರಹಣ ಮಾಡಿದ್ದಾರೆ. 

ಇದಲ್ಲದೆ “ಎಚ್‌ ಯಾರಿಗೆ’, “ಜಾಲಿ ಬಾರು ಮತ್ತು ಪೋಲಿ ಗೆಳೆಯರು’, “ವೈರ’, “ನನ್‌ ಮಗಳೇ ಹೀರೋಯಿನ್‌’ ಮುಂತಾದ ಚಿತ್ರಗಳು ಸೆಪ್ಟೆಂಬರ್‌ ತಿಂಗಳಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಪೈಕಿ ಯಾವುದಾದರೂ ಚಿತ್ರ ಸೆಪ್ಟೆಂಬರ್‌ ಎಂಟರಂದು ಬಿಡುಗಡೆಯಾದರೆ ಆಶ್ಚರ್ಯವಿಲ್ಲ. ಆದರೆ, ಯಾವ ಚಿತ್ರಗಳು ಈ ನಾಲ್ಕು ಚಿತ್ರಗಳ ಜೊತೆಗೆ ಬಿಡುಗಡೆಯಾಗಲಿವೆ ಎಂದು ಇನ್ನಷ್ಟೇ ಗೊತ್ತಾಗಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next