ನವದೆಹಲಿ: ಕೇಂದ್ರ ಸರ್ಕಾರವು ತನ್ನ ಒಂದು ಕೋಟಿಗೂ ಅಧಿಕ ಉದ್ಯೋಗಿಗಳು ಹಾಗೂ ಪಿಂಚಣಿದಾರರ ತುಟ್ಟಿ ಭತ್ಯೆ(ಡಿಎ)ಯನ್ನು ಶೇ.4ರಷ್ಟು ಏರಿಕೆ ಮಾಡುವ ಸಾಧ್ಯತೆ ಇದೆ.
ಪ್ರಸ್ತುತ ಡಿಎ ಶೇ.38ರಷ್ಟು ಇದ್ದು, ಇದು ಶೇ.42ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಉದ್ಯೋಗಿಗಳು ಹಾಗೂ ಪಿಂಚಣಿದಾರರಿಗೆ ಕಾರ್ಮಿಕ ಬ್ಯೂರೊ ಪ್ರತಿ ತಿಂಗಳು ಹೊರತರುವ ಇತ್ತೀಚಿನ ಕೈಗಾರಿಕಾ ಕಾರ್ಮಿಕರ ಗ್ರಾಹಕ ದರ ಸೂಚ್ಯಂಕದ(ಸಿಪಿಐ-ಐಡಬ್ಲ್ಯೂ) ಆಧಾರದ ಮೇಲೆ ಡಿಎ ನಿರ್ಧರಿಸಲಾಗುತ್ತದೆ. ಕಾರ್ಮಿಕ ಬ್ಯೂರೊ ಎನ್ನುವುದು ಕಾರ್ಮಿಕ ಸಚಿವಾಲಯದ ಒಂದು ವಿಭಾಗವಾಗಿದೆ.
2023ರ ಜ.1ರಿಂದಲೇ ತುಟ್ಟಿ ಭತ್ಯೆ ಪೂರ್ವಾನ್ವಯವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರು ಶೇ.38ರಷ್ಟು ತುಟ್ಟಿ ಭತ್ಯೆ ಪಡೆಯುತ್ತಿದ್ದಾರೆ.
ಈ ಹಿಂದೆ, ಕಳೆದ ವರ್ಷದ ಜು.1ರಿಂದ ಪೂರ್ವಾನ್ವಯವಾಗುವಂತೆ 2022ರ ಸೆ.28ರಂದು ತುಟ್ಟಿಭತ್ಯೆ ಏರಿಕೆ ಮಾಡಲಾಗಿತ್ತು.