Advertisement
ವಾಸ್ತು ಸರಿ ಇಲ್ಲದ್ದಕ್ಕೆ ಕಚೇರಿ ಸ್ಥಳಾಂತರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಪಕ್ಷದಿಂದ ಸಂಸದರಾಗಿ ಆಯ್ಕೆಗೊಂಡಿರುವ ಬಿ.ಎನ್.ಬಚ್ಚೇಗೌಡ, ಜಿಲ್ಲಾಡಳಿತ ಭವನದಲ್ಲಿ ಕಚೇರಿ ತೆರೆಯಲು ಕೊಠಡಿ ಒದಗಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದರು. ಆದರೆ ಜಿಲ್ಲಾಡಳಿತ ತೋರಿಸಿದ ಎರಡು ಮೂರು ಕೊಠಡಿಗಳು ವಾಸ್ತು ಸರಿ ಇಲ್ಲದ ಕಾರಣ ಹಲವು ಕಚೇರಿಗಳನ್ನು ಸ್ಥಳಾಂತರ ಮಾಡಿ ಸಂಸದರ ಕಾರ್ಯಾಲಯಕ್ಕೆ ಕಚೇರಿ ಸೌಲಭ್ಯ ಒದಗಿಸಲಾಗಿದೆ.
Related Articles
Advertisement
ಡೀಸಿ ಆದೇಶದಂತೆ ಬಿಟ್ಟು ಕೊಟ್ಟಿದ್ದೇವೆ: ಜಿಲ್ಲಾಡಳಿತ ಭವನದಲ್ಲಿ ಸಂಸದರಿಗೆ ಕಚೇರಿ ಕಲ್ಪಿಸಲು ಹಲವು ಇಲಾಖೆಗಳ ಕಚೇರಿಗಳನ್ನು ಸೂಚಿಸಿದರೂ ಅವರ ಆಪ್ತ ಕಾರ್ಯದರ್ಶಿಗಳು ವಾಸ್ತು ದೋಷದ ಹಿನ್ನೆಲೆಯಲ್ಲಿ ಯಾವುದನ್ನು ಒಪ್ಪದೇ ನಮ್ಮ ಇಲಾಖೆ ಕಾರ್ಯನಿರ್ವಹಿಸುತ್ತಿದ್ದ ಕಟ್ಟಡ ವಾಸ್ತು ಪ್ರಕಾರ ಇದೆ. ಜೊತೆಗೆ ಮಿನಿ ಸಭಾಂಗಣ, ಎಲ್ಲಾ ರೀತಿಯ ಸೌಕರ್ಯ ಇದೆಯೆಂದು ಹೇಳಿದ್ದಕ್ಕೆ ನಮ್ಮ ಕಚೇರಿಯನ್ನು ಜಿಲ್ಲಾಧಿಕಾರಿಗಳ ಆದೇಶದಂತೆ ಬಿಟ್ಟು ಕೊಟ್ಟಿದ್ದೇವೆ. ನಮ್ಮ ಇಲಾಖೆಗೆ ಪಿಯು ಉಪ ನಿರ್ದೇಶಕರ ಕಚೇರಿಯನ್ನು ಬಿಟ್ಟು ಕೊಟ್ಟಿದ್ದಾರೆ. ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯನಿರ್ವಹಿಸುತ್ತಿದ್ದ ಕಟ್ಟಡಕ್ಕೆ ಸ್ಥಳಾಂತರಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಜಿಲ್ಲಾ ಕೈ ಮಗ್ಗ ಹಾಗೂ ಜವಳಿ ಇಲಾಖೆ ಉಪ ನಿರ್ದೇಶಕ ಶಿವಕುಮಾರ್ “ಉದಯವಾಣಿ’ಗೆ ತಿಳಿಸಿದರು.
ನಮಗೂ ತೊಂದರೆ ಆಯಿತು: ಜಿಲ್ಲಾಡಳಿತ ಭವನದಲ್ಲಿ ಎಲ್ಲಾ ಕೊಠಡಿಗಳು ಚೆನ್ನಾಗಿವೆ. ಆದರೆ ಸಂಸದರು ವಾಸ್ತು ದೋಷ ಇರುವ ಕೊಠಡಿಗಳನ್ನು ಕಚೇರಿಯಾಗಿ ಪಡೆಯಲು ಒಪ್ಪದ ಕಾರಣ ನಮ್ಮ ಇಲಾಖೆಯ ಕಚೇರಿಯನ್ನು ಬೇರೆ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. ಮೂರು ದಿನದಿಂದ ಇಲಾಖೆ ಕಚೇರಿ ಕೆಲಸ ಕಾರ್ಯಗಳು ನಡೆದಿಲ್ಲ. ಸ್ಥಳಾಂತರ ಕಾರ್ಯದಿಂದ ಸಾಕಷ್ಟು ತೊಂದರೆ ಅನುಭವಿಸಿದೆವು ಎಂದು ಹೆಸರು ಹೇಳಲು ಇಚ್ಛಿಸದ ಸ್ಥಳಾಂತರಗೊಳ್ಳುತ್ತಿರುವ ಇಲಾಖೆಯ ಸಿಬ್ಬಂದಿಯೊಬ್ಬರು ಅಳಲು ತೋಡಿಕೊಂಡರು.
ಯಾವ್ಯಾವ ಇಲಾಖೆಗಳ ಸ್ಥಳಾಂತರ: ಜಿಲ್ಲಾಡಳಿತ ಭವನದ ಎರಡನೇ ಮಹಡಿಯಲ್ಲಿದ್ದ ಜಿಲ್ಲಾ ಕೈ ಮಗ್ಗ ಹಾಗೂ ಜವಳಿ ಇಲಾಖೆ ಉಪ ನಿರ್ದೇಶಕರ ಕೊಠಡಿಯಲ್ಲಿ ಸದ್ಯ ಸಂಸದರ ಕಾರ್ಯಾಲಯ ತೆರೆಯಲಾಗಿದ್ದು, ಅಲ್ಲಿಂದ ಕೈಮಗ್ಗ ಹಾಗೂ ಜವಳಿ ಇಲಾಖೆಯನ್ನು ಜಿಲ್ಲಾಡಳಿತದ ಭವನದ ಮೊದಲ ಮಹಡಿಯಲ್ಲಿದ್ದ ಪಿಯು ಉಪ ನಿರ್ದೇಶಕರ ಕಚೇರಿಗೆ ಸ್ಥಳಾಂತರ ಮಾಡಲಾಗಿದೆ. ಅಲ್ಲಿನ ಪಿಯು ಉಪ ನಿರ್ದೇಶಕರ ಕಚೇರಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕರ ಕಚೇರಿಗೆ ಸ್ಥಳಾಂತರ ಮಾಡಿದ್ದರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕ ಕಚೇರಿಯನ್ನು ಜಿಪಂ ಅಧ್ಯಕ್ಷರ ಕಾರ್ಯಾಲಯ ಪಕ್ಕದಲ್ಲಿರುವ ಕೊಠಡಿಗೆ ಸ್ಥಳಾಂತರ ಮಾಡಲಾಗಿದೆ.
ಕೊಠಡಿಗಳ ವಾಸ್ತು ದೋಷದ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಸಂಸದರಿಗೆ ಎರಡು, ಮೂರು ಕೊಠಡಿಗಳನ್ನು ತೋರಿಸಲಾಗಿತ್ತು. ಅವರು ಯಾವುದನ್ನು ಒಪ್ಪಿದ್ದಾರೋ ಆ ಕಚೇರಿಯಲ್ಲಿರುವ ಇಲಾಖೆಯನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಿಸಿ ಸಂಸದರ ಕಾರ್ಯಾಲಯಕ್ಕೆ ಅವಕಾಶ ಮಾಡಿಕೊಡಲಾಗಿದೆ. ವಾಸ್ತುದೋಷದ ಬಗ್ಗೆ ಚರ್ಚೆ ಆಗಿರುವುದು ನನ್ನ ಗಮನಕ್ಕೆ ಬಂದಿಲ್ಲ-ಅನಿರುದ್ಧ್ ಶ್ರವಣ್, ಹಿಂದಿನ ಜಿಲ್ಲಾಧಿಕಾರಿ * ಕಾಗತಿ ನಾಗರಾಜಪ್ಪ