ನವದೆಹಲಿ:ಕ್ಷಿಪ್ರವಾಗಿ ಹರಡಬಲ್ಲ ಬ್ರಿಟನ್ ನ ನೂತನ ರೂಪಾಂತರಿತ ಸೋಂಕು ಶುಕ್ರವಾರ(2021, ಜನವರಿ 01) ಭಾರತದಲ್ಲಿಯೂ ನಾಲ್ಕು ಪ್ರಕರಣ ಪತ್ತೆಯಾಗಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದ್ದು, ಒಟ್ಟು ದೇಶದಲ್ಲಿ ಬ್ರಿಟನ್ ಸೋಂಕಿತರ ಸಂಖ್ಯೆ 29ಕ್ಕೆ ಏರಿಕೆಯಾಗಿರುವುದಾಗಿದೆ ಹೇಳಿದೆ.
ಇಂದು ಬೆಂಗಳೂರಿನ ಪ್ರಯೋಗಾಲಯದಲ್ಲಿ ಮೂರು ಪ್ರಕರಣ ಹಾಗೂ ಹೈದರಾಬಾದ್ ನ ಲ್ಯಾಬ್ ನಲ್ಲಿ ಒಂದು ಸೇರಿ ಒಟ್ಟು ನಾಲ್ಕು ಪ್ರಕರಣ ವರದಿಯಾಗಿರುವುದಾಗಿ ಮೂಲಗಳು ತಿಳಿಸಿದೆ. ಇದರೊಂದಿಗೆ ಬೆಂಗಳೂರಿನಲ್ಲಿ ನೂತನ ರೂಪಾಂತರಿತ ಸೋಂಕು ಪೀಡಿತರ ಸಂಖ್ಯೆ 10ಕ್ಕೆ ಏರಿದೆ.
ದೆಹಲಿ ಪ್ರಯೋಗಾಲಯದಲ್ಲಿ 10 ಪ್ರಕರಣ, ಬೆಂಗಳೂರಿನಲ್ಲಿ 10, ಪಶ್ಚಿಮ ಬಂಗಾಳದಲ್ಲಿ ಒಂದು, ಹೈದರಾಬಾದ್ ನಲ್ಲಿ ಮೂರು ಹಾಗೂ ಪುಣೆಯ ನ್ಯಾಶನಲ್ ಇನ್ಸ್ ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ಐದು ಪ್ರಕರಣ ಪತ್ತೆಯಾಗಿದ್ದು, ಎಲ್ಲಾ 29 ಸೋಂಕಿತರನ್ನು ಐಸೋಲೇಶನ್ ನಲ್ಲಿ ಇರಿಸಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಕೋವಿಡ್ 19 ಸೋಂಕಿಗಿಂತ ನೂತನ ರೂಪಾಂತರಿತ ಸೋಂಕು ಹೆಚ್ಚು ಕ್ಷಿಪ್ರವಾಗಿ ಹರಡಲಿದೆ. ಈಗಾಗಲೇ ಹೊಸ ಸೋಂಕು ಬ್ರಿಟನ್, ಡೆನ್ಮಾರ್ಕ್, ನೆದರ್ ಲ್ಯಾಂಡ್, ಆಸ್ಟ್ರೇಲಿಯಾ, ಇಟಲಿ, ಸ್ವೀಡನ್, ಫ್ರಾನ್ಸ್, ಸ್ಪೈನ್, ಸ್ವಿಟ್ಜರ್ ಲ್ಯಾಂಡ್, ಜರ್ಮನಿ, ಕೆನಡಾ, ಜಪಾನ್, ಲೆಬನಾನ್ ಮತ್ತು ಸಿಂಗಾಪುರದಲ್ಲಿ ಪತ್ತೆಯಾಗಿದೆ.
ಇದನ್ನೂ ಓದಿ:ಮುಂದುವರಿದ ಚಿರತೆ ದಾಳಿ : ವಿರೂಪಾಪೂರಗಡ್ಡಿ ಬೆಟ್ಟದಲ್ಲಿ ಯುವಕನನ್ನು ಕೊಂದು ಹಾಕಿದ ಚಿರತೆ
ಕೋವಿಡ್ ನ ಹೊಸ ರೂಪಾಂತರಿತ ಸೋಂಕು ಮೊದಲು ಬ್ರಿಟನ್ ನಲ್ಲಿ ಸೆಪ್ಟೆಂಬರ್ ನಲ್ಲಿ ಪತ್ತೆಯಾಗಿತ್ತು. ಡಿಸೆಂಬರ್ ನಲ್ಲಿ ಯುರೋಪ್ ದೇಶಗಳಿಂದ ಭಾರತಕ್ಕೆ ವಾಪಸ್ ಆಗಿದ್ದ ಜನರಿಂದ ನೂತನ ಸೋಂಕು ಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ.