Advertisement
ಸಾಮಾಜಿಕವಾಗಿ ಅತ್ಯಂತ ಹಿಂದುಳಿದ 1,92,000 ವಿದ್ಯಾರ್ಥಿಗಳು ಮೊರಾರ್ಜಿ ದೇಸಾಯಿ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಅವರಲ್ಲಿರುವ ಪ್ರತಿಭೆಗಳನ್ನು ಒರೆಗೆ ಹಚ್ಚುವ ಸಲುವಾಗಿ ಸರಕಾರ 2020-21ನೇ ಸಾಲಿನ ಆಯವ್ಯಯದಲ್ಲಿ ಸಮಗ್ರ ಮೂಲಸೌಕರ್ಯ ಒದಗಿಸಿ ಕ್ರೀಡಾ ಶಾಲೆಯನ್ನಾಗಿ ಉನ್ನತೀಕರಿಸುವ ನಿರ್ಧಾರಕ್ಕೆ ಮುಂದಾಗಿದೆ.
ರಾಜ್ಯದ ಕಂದಾಯ ವಿಭಾಗವಾರು ಮೈಸೂರು, ಬೆಂಗಳೂರು, ಗುಲ್ಬರ್ಗ ಮತ್ತು ಬೆಳಗಾವಿಯಲ್ಲಿ ಈಗಿರುವ ಶಾಲೆಗಳ ಮೂಲಸೌಕರ್ಯ ಆಧರಿಸಿ ಶಾಲೆಯನ್ನು ಆಯ್ಕೆ ಮಾಡಲಾಗಿದೆ. ಮೈಸೂರು ವಿಭಾಗದಲ್ಲಿ ದ.ಕ. ಜಿಲ್ಲೆಯ ಮುಂಡಾಜೆ ಶಾಲೆಯನ್ನು ಆಯ್ಕೆ ಮಾಡಿದ್ದು, ಬೆಂಗಳೂರು ವಿಭಾಗದಲ್ಲಿ ಚಿತ್ರದುರ್ಗ ಹೊಳಲ್ಕೆರೆಯ ಚಿತ್ರಹಳ್ಳಿ, ಬೆಳಗಾವಿ ವಿಭಾಗದಲ್ಲಿ ಧಾರವಾಡದ ಹೆಬ್ಬಳ್ಳಿ, ಕಲಬುರಗಿ ವಿಭಾಗದಡಿ ರಾಯಚೂರು ಮೊರಾರ್ಜಿ ಶಾಲೆ ಆಯ್ಕೆಯಾಗಿವೆ. ಕಂದಾಯ ವಿಭಾಗದಡಿ ವಿದ್ಯಾರ್ಥಿಗಳ ಆಯ್ಕೆ
ಕಂದಾಯ ವಿಭಾಗವಾರು ಕ್ರೀಡಾ ಪ್ರತಿಭಾನ್ವಿತರನ್ನು ಆಯ್ಕೆ ಮಾಡಲಾಗುತ್ತದೆ. ಉದಾಹರಣೆಗೆ ಮೈಸೂರು ವಿಭಾಗದಲ್ಲಿ ಮೈಸೂರು, ಹಾಸನ, ಚಿಕ್ಕಮಗಳೂರು, ಮಂಡ್ಯ, ಉಡುಪಿ, ಮಂಗಳೂರು, ಕೊಡಗು ಜಿಲ್ಲೆಗಳಿವೆ. ಈ ವ್ಯಾಪ್ತಿಯ ವಿದ್ಯಾರ್ಥಿಗಳು ಆಯಾಯ ಮೊರಾರ್ಜಿ ದೇಸಾಯಿ ಶಾಲೆಗೆ 6ನೇ ತರಗತಿಗೆ ದಾಖಲಾಗುವ ಅವಧಿಯಲ್ಲಿ ಕ್ರೀಡಾ ಶಾಲೆಗೆಂದೇ ಹೊಸ ನಮೂನೆಯನ್ನು ಸರಕಾರ ಆರಂಭಿಸಲಿದೆ. ಈ ವಿಭಾಗವಾರು ಜಿಲ್ಲೆಗಳ ಕ್ರೀಡಾ ಪ್ರತಿಭಾನ್ವಿತರು ಪರೀಕ್ಷೆ ಬರೆದ ಬಳಿಕ ಕ್ರೀಡಾ ಶಾಲೆಗೆ ಆಯ್ಕೆಯಾಗುವರು.
Related Articles
Advertisement
ಸವಾಲುಗಳು ಇವೆಕ್ರೀಡಾ ಶಾಲೆ ಎಂದಾಕ್ಷಣ ಕ್ರೀಡೆ ಸಹಿತ ಪಠ್ಯಕ್ಕೆ ಸಂಬಂಧಿಸಿದ ಖಾಯಂ ಶಿಕ್ಷಕರ ಆವಶ್ಯಕತೆ ಇದೆ. ಕ್ರೀಡೆಯಲ್ಲಿ ಪರಿಣತ ಕನಿಷ್ಠ ಮೂವರು ಶಾರೀರಿಕ ಶಿಕ್ಷಣ ಶಿಕ್ಷಕರ ನೇಮಕ ಆಗಬೇಕಿದೆ. ವಸತಿ ಸಹಿತ ಅಗತ್ಯ ಸೌಕರ್ಯ ಒದಗಿಸಬೇಕಿದೆ. ಪ್ರಸ್ತುತ ಭಾರತ ಕ್ರೀಡಾ ರಂಗವು ಒಲಿಂಪಿಕ್ ಸಹಿತ ಅಂತಾರಾಷ್ಟ್ರೀಯ ಕ್ರೀಡಾ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಗಳು ಹೊರಹೊಮ್ಮುತ್ತಿರುವ ಸಂದರ್ಭದಲ್ಲಿ ಸರಕಾರವು ಸಮಾಜ ಕಲ್ಯಾಣ ಇಲಾಖೆಯಡಿ ಆರ್ಥಿಕ ಹಿಂದುಳಿದಿರುವ ಪ.ಜಾತಿ ಮತ್ತು ಪ.ಪಂ.ವಿದ್ಯಾರ್ಥಿಗಳನ್ನು ಪೋಷಿಸುವಲ್ಲಿ ಮಹತ್ತರ ಚಿಂತನೆ ನಡೆಸಿದೆ. ಅಗತ್ಯಗಳನ್ನೆಲ್ಲ ಪೂರೈಸಿದಲ್ಲಿ ಭವಿಷ್ಯದಲ್ಲಿ ಗ್ರಾಮೀಣ ಕ್ರೀಡಾ ಶಾಲೆಗಳಿಂದ ಉತ್ತಮ ಕ್ರೀಡಾಪಟುಗಳು ದೇಶಕ್ಕೆ ಅರ್ಪಣೆಯಾಗಬಹುದು. ಸಮಗ್ರ ಅಭಿವೃದ್ಧಿಗೆ ಆದ್ಯತೆ
ಆಯ್ಕೆಯಾದ ಶಾಲೆಗೆ 5 ಕೋಟಿ ರೂ. ಮೀಸಲಿಡಲಾಗಿದೆ. ಆರಂಭದ ವರ್ಷದಲ್ಲಿ ಸ್ಟಾರ್ಟಪ್‌ಗಾಗಿ ಅಗತ್ಯ ಸೌಕರ್ಯ ಒದಗಿಸಲು ಪ್ರತೀ ಶಾಲೆಗೆ 1.25 ಕೋ.ರೂ. ಮೀಸಲಿಡಲಾಗಿದೆ. ಕಾಂಪೌಂಡ್, ಆಡಿಟೋರಿಯಂ, ಕ್ರೀಡಾಂಗಣ, ಕೊಳವೆಬಾವಿ, ಶಿಕ್ಷಕರಿಗೆ ವಸತಿಗೃಹ ಸಿದ್ಧಗೊಳ್ಳಲಿದೆ. ಇದಕ್ಕಾಗಿ ಕ್ರೀಡಾ ಮತ್ತು ಯುವಜನ ಇಲಾಖೆಯಲ್ಲಿರುವ ಎನ್‌ಡಿಎ, ಎನ್‌ಎಸಿ, ಒಲಿಂಪಿಕ್, ಸೈನಿಕ್ ತರಬೇತಿ ಪಡೆದ ಮಾಸ್ಟರ್ ಟ್ರೈನರ್‌ಗಳನ್ನು ನೇಮಿಸಲಾಗುವುದು. ರಾಜ್ಯದ ಮೊರಾರ್ಜಿ ದೇಸಾಯಿ ಶಾಲೆಗಳಲ್ಲಿರುವ ಪ.ಜಾ./ಪ.ಪಂ. ವಿದ್ಯಾರ್ಥಿಗಳ ಕ್ರೀಡಾ ಸಾಧನೆಗಾಗಿ ಮೂಲಸೌಕರ್ಯ ವೃದ್ಧಿಸಿಕೊಂಡು ಸಮಗ್ರವಾಗಿ ಕ್ರಿಡಾ ಸೌಕರ್ಯ ಒದಗಿಸುವ ಸಲುವಾಗಿ ಆಯ್ದ 4 ಶಾಲೆಗಳಿಗೆ ತಲಾ 1.25 ಕೋ.ರೂ.ಗಳಂತೆ ಪ್ರಸಕ್ತ ಸಾಲಿನಲ್ಲಿ 5 ಕೋ.ರೂ. ಮೀಸಲಿಡಲಾಗಿದೆ. ಹಂತಹಂತವಾಗಿ ಆವಶ್ಯಕತೆ ಗಳನ್ನು ಪೂರೈಸಲಾಗುವುದು.
– ಕೋಟ ಶ್ರೀನಿವಾಸ ಪೂಜಾರಿ, ಸಮಾಜ ಕಲ್ಯಾಣ ಇಲಾಖೆ ಸಚಿವ – ಚೈತ್ರೇಶ್ ಇಳಂತಿಲ