Advertisement
ಮುಂಗಾರಿನ ನಿರ್ಗಮನ ಮತ್ತು ಹಿಂಗಾರಿನ ಆಗಮನದ ಸೆಪ್ಟಂಬರ್ -ಅಕ್ಟೋಬರ್‌ನಲ್ಲಿ ಕ್ರಮವಾಗಿ 3.47 ಲಕ್ಷ ಹೆ. ಮತ್ತು 58 ಸಾವಿರ ಹೆ. ಪ್ರದೇಶದಲ್ಲಿ ಬೆಳೆಗಳು ಹಾನಿಗೀಡಾ ಗಿವೆ. ಸಾವಿರಾರು ಹೆಕ್ಟೇರ್ ತೋಟಗಾರಿಕೆ ಬೆಳೆಗಳು ಕೂಡ ಕೊಚ್ಚಿ ಹೋಗಿವೆ ಎಂದು ಕೃಷಿ ಇಲಾಖೆ ಅಂದಾಜಿಸಿದೆ. ಕಳೆದ ವರ್ಷ ಕೊರೊನಾ ರೈತರ ಬದುಕನ್ನು “ಲಾಕ್’ ಮಾಡಿತ್ತು. ಈ ಸಲ ಮಳೆಯೇ ಬೆಳೆ ಕೈಗೆ ಸಿಗದಂತೆ ಮಾಡಿದೆ.
Related Articles
ಸಾಮಾನ್ಯವಾಗಿ ನೈಋತ್ಯ ಮಾರುತಗಳ ಪರಿಣಾಮ ರಾಜ್ಯದಲ್ಲಿ ಹೆಚ್ಚಿರುತ್ತದೆ. ಆದರೆ ಈ ಸಲ ನೆರೆಯ ತಮಿಳು ನಾಡು ಮತ್ತು ಆಂಧ್ರಪ್ರದೇಶದಲ್ಲಿ ವಾಯುಭಾರ ಕುಸಿತ ಸಹಿತ ಹಲವು ಬೆಳವಣಿಗೆಗಳು ಕಂಡುಬಂದ ಪರಿಣಾಮ ವಾಡಿಕೆಗಿಂತ ಮಳೆ ಹೆಚ್ಚಾಗಿದೆ. ಅದರಲ್ಲೂ ದಕ್ಷಿಣ ಒಳನಾಡಿನಲ್ಲಿ ಇದರ ಪ್ರಭಾವ ಅಧಿಕವಾಗಿದೆ. ರಾಜ್ಯದಲ್ಲಿ ಇದುವರೆಗೆ ಹಿಂಗಾರಿನಲ್ಲಿ ವಾಡಿಕೆ ಮಳೆ 158.3 ಮಿ.ಮೀ. ಆದರೆ, ಬಿದ್ದಿರುವುದು 266.6 ಮಿ.ಮೀ. ಅಂದರೆ ಶೇ. 68ರಷ್ಟು ಹೆಚ್ಚುವರಿ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Advertisement
ಇದನ್ನೂ ಓದಿ:ರೇಷ್ಮೆ ಮಾರುಕಟ್ಟೆ ವಾರಣಾಸಿಗೆ ವಿಸ್ತರಿಸುವ ಚಿಂತನೆ: ಡಾ| ನಾರಾಯಣ ಗೌಡ
ದಕ್ಷಿಣ ಒಳನಾಡಿನಲ್ಲಿ 175.9 ಮಿ.ಮೀ. ಆಗಬೇಕಿದ್ದ ಮಳೆ 377.9 ಮಿ.ಮೀ. ಬಿದ್ದಿದೆ. ಉತ್ತರ ಒಳನಾಡಿನಲ್ಲಿ ಹಿಂಗಾರು ಮಳೆ ಪ್ರಭಾವ ತುಸು ಕಡಿಮೆ ಇದ್ದು, ವಾಡಿಕೆ 121.7 ಮಿ.ಮೀ. ಬದಲಿಗೆ 98.6 ಮಿ.ಮೀ. ಮಳೆಯಾಗಿದೆ. ಕರಾವಳಿಯಲ್ಲಿ 226.6 ಮಿ.ಮೀ. ವಾಡಿಕೆ ಮಳೆ ಇದ್ದು, 428.4 ಮಿ.ಮೀ. ಸುರಿದಿದೆ ಎಂದು ಇಲಾಖೆ ತಿಳಿಸಿದೆ.
ಹಾಸನ, ಚಿಕ್ಕಮಗಳೂರು, ಬೆಂಗಳೂರು ನಗರ, ಚಿತ್ರದುರ್ಗ, ದಾವಣಗೆರೆ, ಮಂಡ್ಯ, ಮೈಸೂರು, ರಾಮನಗರ, ಚಾಮರಾಜನಗರ, ತುಮಕೂರು, ಶಿವಮೊಗ್ಗ ಸುತ್ತಮುತ್ತ ವಾಡಿಕೆಗಿಂತ ದುಪ್ಪಟ್ಟು ಮಳೆಯಾಗಿದೆ. ಹಾಗಾಗಿ, ಮಲೆನಾಡು ಮತ್ತು ಹಳೆಯ ಮೈಸೂರು ಭಾಗದ ತೋಟಗಾರಿಕೆ ಬೆಳೆಗಳಿಗೆ ಸಾಕಷ್ಟು ಹಾನಿಯಾಗಿದ್ದು, ಇದರ ಅಂದಾಜು ಲೆಕ್ಕಹಾಕುವ ಪ್ರಕ್ರಿಯೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರಾವಳಿ: 100 ಹೆಕ್ಟೇರ್‌ಗೂ ಮಿಕ್ಕಿ ಭತ್ತ ಕೃಷಿಗೆ ಹಾನಿಉಡುಪಿ/ ಮಂಗಳೂರು: ನಿಯಮ ತಪ್ಪಿದ ಮಳೆಯಿಂದ ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ 100ಕ್ಕೂ ಹೆಚ್ಚು ಹೆಕ್ಟೇರ್ ಭತ್ತ ಕೃಷಿಗೆ ಹಾನಿಯಾಗಿದೆ. ಮಳೆ ಮುಂದುವರಿಯುತ್ತಿರುವು ದರಿಂದ ಇನ್ನಷ್ಟು ಹಾನಿ ಉಂಟಾಗುವ ಸಾಧ್ಯತೆ ಇದ್ದು, ಖಚಿತ ಅಂಕಿಅಂಶ, ಸ್ಪಷ್ಟ ಚಿತ್ರಣ ಇನ್ನಷ್ಟೇ ಸಿಗಬೇಕಿದೆ. ಜತೆಗೆ ರಬ್ಬರ್, ಕಾಳುಮೆಣಸು, ಒಂದನೇ ಕೊಯ್ಲಾಗಿ ಅಂಗಳದಲ್ಲಿ ಒಣಗಬೇಕಿದ್ದ ಅಡಿಕೆಗೂ ತೊಂದರೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ 30ಕ್ಕೂ ಹೆಚ್ಚು ಹೆಕ್ಟೇರ್ ಭತ್ತ ಕೃಷಿಗೆ ಹಾನಿಯಾಗಿ ರೈತರು ನಷ್ಟ ಅನುಭವಿಸಿದ್ದಾರೆ. ಜಿಲ್ಲೆಯಲ್ಲಿ 35,726 ಹೆ.ನಷ್ಟು ಭತ್ತದ ಕೃಷಿ ಮಾಡಲಾಗಿದ್ದು, 30 ಹೆ. ಭತ್ತ ಕೃಷಿಗೆ ಹಾನಿಯಾಗಿದೆ ಎಂದು ಜಿಲ್ಲಾ ಕೃಷಿ ಇಲಾಖೆಯ ಮೂಲಗಳು ತಿಳಿಸಿವೆ. ಗದ್ದೆಗಳಲ್ಲಿ ನೀರು ನಿಂತಿದ್ದು, ಗೆಣಸು, ಉದ್ದು, ಎಳ್ಳು, ಹೆಸರು, ಮೆಣಸು ಮತ್ತಿತರ ಬೆಳೆಗಳನ್ನು ಬೆಳೆಸಲು ಸಾಧ್ಯವಾಗದ ಸ್ಥಿತಿ ಇದೆ. ದ.ಕ.ದಲ್ಲಿ ನ. 10ರ ವರೆಗೆ 73ಕ್ಕೂ ಹೆಚ್ಚು ಹೆಕ್ಟೇರ್ ಭತ್ತ ಬೆಳೆಗೆ ಹಾನಿ ಯಾಗಿದೆ. ಕಟಾವಾದ ಭತ್ತ, ಬೈಹುಲ್ಲು ಕೊಳೆತು ನಾಶವಾಗಿದೆ. ಇಲ್ಲಿಯೂ ನಷ್ಟದ ಸ್ಪಷ್ಟ ಚಿತ್ರಣ ಇನ್ನಷ್ಟೇ ಲಭಿಸ ಬೇಕು. ಅಡಿಕೆ, ಕೊಕೊ, ಬಾಳೆ ಕೃಷಿಯೂ ಹಾನಿ ಅನುಭವಿಸಿದೆ ಎಂದು ಜಿಲ್ಲಾ ತೋಟಗಾರಿಕೆ ಇಲಾಖೆ ತಿಳಿಸಿದೆ.