ನಾಶಿಕ್ : ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡವೊಂದರ ವಾಟರ್ ಟ್ಯಾಂಕ್ ಕುಸಿದ ದುರಂತದಲ್ಲಿ ನಾಲ್ವರು ಕಾರ್ಮಿಕರು ದಾರುಣವಾಗಿ ಮೃತಪಟ್ಟಿರುವ ಘಟನೆ ಇಂದು ಮಂಗಳವಾರ ನಡೆದಿದೆ. ಇನ್ನಿಬ್ಬರು ಕಾರ್ಮಿಕರು ಗಾಯಗೊಂಡಿದ್ದು ಅವರ ಸ್ಥಿತಿ ಚಿಂತಾಜನಕವಿದೆ ಎಂದು ವರದಿಗಳು ತಿಳಿಸಿವೆ.
ಗಂಗಾಪುರ ರಸ್ತೆಯ ಸೋಮೇಶ್ವರ ಕಾಲನಿಯಲ್ಲಿ ಈ ದುರ್ಘಟನೆ ಇಂದು ಬೆಳಗ್ಗೆ 8.30ರ ಸುಮಾರಿಗೆ ನಡೆಯಿತು. ಕುಸಿದ ವಾಟರ್ ಟ್ಯಾಂಕ್ ನಡಿ ಸಿಲುಕಿಕೊಂಡಿದ್ದ ಮೂವರು ಮೃತದೇಹಗಳನ್ನು ಹರಸಾಹಸದಿಂದ ಹೊರತೆಗೆಯಲಾಯಿತು.
ಇನ್ನೋರ್ವ ಕಾರ್ಮಿಕ ಆಸ್ಪತ್ರೆಗೆ ಒಯ್ಯಲ್ಪಡುತ್ತಿದ್ದಾಗಲೇ ಕೊನೆಯುಸಿರೆಳೆದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತರನ್ನು ಮೊಹಮ್ಮದ್ ಬಾರಿಕ್ 32, ಬೇಬಿ ಸನಾಬಿ ಖತೂನ್ 28 (ಇಬ್ಬರೂ ಬಿಹಾರಿಗಳು), ಸುಧಾಮ ಗೋಹಿರ್ 30 (ಒಡಿಶಾ) ಮತ್ತು ಅನಾಮಿ ಚಂದನ್ 50 (ದಿಲ್ಲಿ ನಿವಾಸಿ) ಎಂದು ಗುರುತಿಸಲಾಗಿದೆ.
ಗಂಗಾಪುರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದ್ದು ತನಿಖೆ ನಡೆಯುತ್ತಿದೆ.