Advertisement

4 ಗಣ್ಯರಿಗೆ ಪದ್ಮವಿಭೂಷಣದ ಗರಿಮೆ:ಸಾಲುಮರದ ತಿಮ್ಮಕ್ಕಗೆ ಪದ್ಮಶ್ರಿ

12:30 AM Jan 26, 2019 | Team Udayavani |

ನವದೆಹಲಿ: 2019ರ ಪದ್ಮ ವಿಭೂಷಣ ಪುರಸ್ಕಾರವು ನಾಲ್ವರು ಗಣ್ಯರ ಮುಡಿಗೇರಿದೆ. ಛತ್ತೀಸ್‌ಗಡದ ಪಂದವಾನಿ ಕಲಾ ಪ್ರಕಾರದಲ್ಲಿ ಪರಿಣಿತ ತೀಜನ್‌ ಬಾಯ್‌, ಜಿಬೌತಿ ದೇಶದ ಅಧ್ಯಕ್ಷ ಇಸ್ಮಾಯಿಲ್‌ ಉಮರ್‌ ಗ್ವೆಲ್ಲೆಹ್‌, ಎಲ್‌ ಆ್ಯಂಡ್‌ ಟಿ ಸಮೂಹ ಕಾರ್ಯನಿರ್ವಹಣಾ ಚೇರನ್‌ ಅನಿಲ್‌ ಕುಮಾರ್‌ ಮಣಿಭಾಯ್‌ ನಾಯ್ಕ, ಮಹಾರಾಷ್ಟ್ರದ ಜನಪ್ರಿಯ ರಂಗಕರ್ಮಿ ಬಾಬಾ ಸಾಹೇಬ್‌ ಪುರಂದರೆ ಎಂದೇ ಹೆಸರಾದ ಬಲವಂತ್‌ ಮೋರೇಶ್ವರ ಪುರಂದರೆಗೆ ಪದ್ಮ ವಿಭೂಷಣ ಪುರಸ್ಕಾರ ನೀಡಲಾಗಿದೆ.

Advertisement

ಇಸ್ರೋದ ಮಾಜಿ ವಿಜ್ಞಾನಿ ಹಾಗೂ ಇತ್ತೀಚೆಗಷ್ಟೇ ರಹಸ್ಯ ಸೋರಿಕೆ ಆರೋಪದಿಂದ ಮುಕ್ತವಾಗಿರುವ ನಂಬಿ ನಾರಾಯಣನ್‌, ಮಲಯಾಳಂ ಸಿನಿಮಾ ನಟ ಮೋಹನ್‌ಲಾಲ್‌, ಜಾರ್ಖಂಡ್‌ನ‌ ರಾಜಕಾರಣಿ ಕರಿಯಾ ಮುಂಡಾ, ಪತ್ರಕರ್ತ ಕುಲದೀಪ್‌ ನಯ್ಯರ್‌ (ಮರಣೋತ್ತರ), ಸಿತಾರ್‌ ವಾದಕ ಬುಧಾದಿತ್ಯ ಮುಖರ್ಜಿ ಸೇರಿದಂತೆ 14 ಗಣ್ಯರಿಗೆ ಪದ್ಮಭೂಷಣ ಪುರಸ್ಕರಿಸಲಾಗಿದೆ. 112 ಮಂದಿಗೆ ಪದ್ಮಶ್ರೀ ಪ್ರಶಸ್ತಿ ಸಂದಿದೆ.

ಕರ್ನಾಟಕದ ಪದ್ಮ ಪುರಸ್ಕೃತರು
ಸಾಲುಮರದ ತಿಮ್ಮಕ್ಕ
ತುಮಕೂರಿನ ಗುಬ್ಬಿ ತಾಲೂಕಿನವರಾದ ತಿಮ್ಮಕ್ಕ, ಪರಿಸರ ಪ್ರೇಮಿಯಾಗಿ ಕರ್ನಾಟಕದಾದ್ಯಂತ ಮನೆಮಾತಾಗಿದ್ದಾರೆ. ಹುಲಿಕಲ್‌ ಹಾಗೂ ಕಡೂರು ನಡುವಿನ 4 ಕಿ.ಮೀ. ದೂರದ ರಸ್ತೆಯ ಇಕ್ಕೆಲಗಳಲ್ಲಿ ಆಲದ ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸಿದ್ದು, ಅವೀಗ ಹೆಮ್ಮರಗಳಾಗಿ ಪ್ರಯಾಣಿಕರಿಗೆ ನೆರಳಾಗಿ ತಿಮ್ಮಕ್ಕನವರ ವೃಕ್ಷಪ್ರೇಮಕ್ಕೆ ಜ್ವಲಂತ ಸಾಕ್ಷಿಯಾಗಿವೆ. 

ರಾಜೀವ್‌ ತಾರಾನಾಥ್‌
ಖ್ಯಾತ ಹಿಂದೂಸ್ತಾನಿ ಸಂಗೀತರಾರರಾಗಿರುವ ರಾಜೀವ್‌ ತಾರಾನಾಥ್‌, ಬೆಂಗಳೂರಿನವರು. ಸಂಗೀತಗಾರರಾಗಿದ್ದ ಪಂಡಿತ ತಾರಾನಾಥ್‌ ಅವರಿಂದ ಪ್ರಾಥಮಿಕ ಸಂಗೀತಾಭ್ಯಾಸ ಮಾಡಿದ್ದ ಅವರು, ಆನಂತರ ಸಂಗೀತ ದಿಗ್ಗಜ ಅಲಿ ಅಕºರ್‌ ಖಾನ್‌ ಅವರ ಶಿಷ್ಯರಾದರು. ಮೈಹಾರ್‌-ಅಲ್ಲಾವುದ್ದೀನ್‌ ಘರಾನಾ ಸಂಗೀತ ಪ್ರಬೇಧವನ್ನು ಕಲಿಸುವ ವಿಷಯದಲ್ಲಿ ಸಂಶೋಧನೆ ಮಾಡಿದ್ದಾರೆ.

ಪ್ರಭುದೇವ
ಮೂಲತಃ ಕರ್ನಾಟಕದವರಾದ ಪ್ರಭುದೇವ, ನೃತ್ಯ ನಿರ್ದೇಶಕರಾಗಿ, ನಟರಾಗಿ, ಗಾಯಕರಾಗಿ, ಚಿತ್ರ ನಿರ್ಮಾಪಕ, ನಿರ್ದೇಶಕರಾಗಿ ಚಿತ್ರರಂಗದಲ್ಲಿ ಸುಮಾರು 30ಕ್ಕೂ ಹೆಚ್ಚು ವರ್ಷಗಳ ಸೇವೆ ಮಾಡಿದ್ದಾರೆ. ಕನ್ನಡದ ನೃತ್ಯ ನಿರ್ದೇಶಕ ಮೂಗೂರು ಸುಂದರ್‌ ಅವರ ಪುತ್ರರಾದ ಇವರಿಗೆ ನೃತ್ಯದ ಸಾಂಗತ್ಯ ಬಾಲ್ಯದಿಂದಲೇ ಲಭಿಸಿತ್ತು. ತಮಿಳು ಚಿತ್ರರಂಗದ ಮೂಲಕ ಸಿನಿಮಾ ರಂಗಕ್ಕೆ ಪ್ರವೇಶ ಪಡೆದ ಅವರು, ಆನಂತರ, ತೆಲುಗು, ಕನ್ನಡ, ಹಿಂದಿ ಚಿತ್ರರಂಗಗಳಲ್ಲೂ ಹೆಸರು ಮಾಡಿದ್ದಾರೆ.

Advertisement

ಶಾರದಾ ಶ್ರೀನಿವಾಸನ್‌
ಬೆಂಗಳೂರಿನ ಇಂಡಿಯನ್‌ ಇನ್ಸಿಟಿಟ್ಯೂಟ್‌ ಆಫ್ ಸೈನ್ಸ್‌ನ “ನ್ಯಾಷನಲ್‌ ಇನ್ಸಿಟಿಟ್ಯೂಟ್‌ ಆಫ್ ಅಡ್ವಾನ್ಸ್‌ಡ್‌ ಸ್ಟಡೀಸ್‌’ನಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ಶಾರದಾ ಶ್ರೀನಿವಾಸನ್‌, ಪ್ರಾಚ್ಯವಸ್ತು ಸಂಶೋಧನಾ ರಂಗಕ್ಕೆ ಹಲವಾರು ಕಾಣಿಕೆ ಸಲ್ಲಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಕಂಚಿನ ಲೋಹದ ನಿಕ್ಷೇಪಗಳ ಪತ್ತೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. 

ರೋಹಿಣಿ ಗೋಡ್ಬೋಲೆ
ಬೆಂಗಳೂರಿನ ನಿವಾಸಿಯಾಗಿರುವ ರೋಹಿಣಿ ಗೋಡ್ಬೋಲೆ ಅವರು, “ಐಐಎಸ್‌ಸಿ  ಕ್ಯಾಂಪಸ್‌ನಲ್ಲಿರುವ ಸೆಂಟರ್‌ ಫಾರ್‌ ಹೈ ಎನರ್ಜಿ ಫಿಸಿಕ್ಸ್‌’ ಕೇಂದ್ರದಲ್ಲಿ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದು, ಪರಮಾಣು ವಿಜ್ಞಾನದ ವಿಜ್ಞಾನಿಯೂ ಹೌದು. ಹೈ ಎನರ್ಜಿ ಪ್ರೋಟಾನ್ಸ್‌ ವಿಷಯದಲ್ಲಿ ಅವರು ನಡೆಸಿದ ಸಂಶೋಧನೆಯ ಫ‌ಲವಾಗಿ, ಮುಂದಿನ ಪೀಳಿಗೆಯ ಪರಮಾಣು ಕೊಲೈಡರ್‌ಗಳ ಸೃಷ್ಟಿಗೆ ಕಾರಣವಾಗಿದೆ. 

ಮತ ಚಲಾವಣೆ ಪವಿತ್ರ ಕರ್ತವ್ಯ
ಗಣರಾಜ್ಯೋತ್ಸವದ ಮುನ್ನಾದಿನ ಶುಕ್ರವಾರ ದೇಶಕ್ಕೆ ಸಂದೇಶ ನೀಡಿದ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ಮತದಾನ ಮಾಡುವುದು ಪವಿತ್ರ ಕರ್ತವ್ಯವಾಗಿದೆ. ಇದು 21 ನೇ ಶತಮಾನದಲ್ಲಿ ಭಾರತ ಹೊಸ ರೂಪ ಪಡೆದುಕೊಳ್ಳಲು ದ್ಯೋತಕವಾಗಲಿದೆ. ಹೀಗಾಗಿ ಇದನ್ನು ಈ ಶತಮಾನದ ಪ್ರಮುಖ ಜವಾಬ್ದಾರಿ ಎಂದು ಪರಿಗಣಿಸಬೇಕು ಎಂಬುದಾಗಿ ಕರೆ ನೀಡಿದ್ದಾರೆ. ಕೆಲವೇ ತಿಂಗಳುಗಳಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಕೋವಿಂದ್‌ ಭಾಷಣದಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಹೆಚ್ಚಿನ ಒತ್ತು ನೀಡಲಾಗಿತ್ತು. ಚುನಾವಣೆ ಎಂಬುದು ಕೇವಲ ರಾಜಕೀಯ ಪ್ರಕ್ರಿಯೆಯಲ್ಲ. ವಿವೇಕದಿಂದ ನಮ್ಮ ಹಕ್ಕು ಚಲಾಯಿಸುವ ಒಂದು ಪ್ರಕ್ರಿಯೆಯೂ ಹೌದು. ಸಮಗ್ರತೆ ಹಾಗೂ ವೈವಿಧ್ಯತೆಗೆ ಗೌರವ ನೀಡದೇ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಇದು ವೈವಿಧ್ಯತೆ, ಪ್ರಜಾಪ್ರಭುತ್ವ ಮತ್ತು ಅಭಿವೃದ್ಧಿಯ ಮೂಲ ಅಂಶವೂ ಹೌದು ಎಂದು ಅವರು ಹೇಳಿದ್ದಾರೆ. 

855 ಪೊಲೀಸ್‌ ಪದಕ ಘೋಷಣೆ
ಕೇಂದ್ರ ಸರ್ಕಾರವು ವಿಶಿಷ್ಟ ಸೇವೆಗೈದ 855 ಪೊಲೀಸರಿಗೆ ಪೊಲೀಸ್‌ ಪದಕ ಘೋಷಿಸಿದೆ. ರಾಷ್ಟ್ರಪತಿಗಳ ಪೊಲೀಸ್‌ ಪದಕವನ್ನು ಮೂವರಿಗೆ, ಪೊಲೀಸ್‌ ಪದಕವನ್ನು 146 ಸಿಬ್ಬಂದಿಗೆ, ವಿಶೇಷ ಸೇವೆಯ ಪೊಲೀಸ್‌ ಪದಕ 74 ಸಿಬ್ಬಂದಿಗೆ, ಅತ್ಯುನ್ನತ ಸೇವೆ ನೀಡಿದ 632 ಮಂದಿಗೆ ಪೊಲೀಸ್‌ ಪದಕ ನೀಡಲಾಗಿದೆ. ಎಲ್ಲ 3 ರಾಷ್ಟ್ರಪತಿಗಳ ಪೊಲೀಸ್‌ ಪದಕವೂ ಸಿಆರ್‌ಪಿಎಫ್ ಪಾಲಾಗಿದೆ.

ಮಗು ರಕ್ಷಿಸಿದ ಯೋಧನಿಗೆ ಪದಕ: ಕೇರಳ ಪ್ರವಾಹದ ವೇಳೆ ಹೆಲಿಕಾಪ್ಟರ್‌ ಮೂಲಕ ಮಗು ವನ್ನು ರಕ್ಷಿಸಿ ವಾಯುಸೇನೆ ಅಧಿಕಾರಿ ಪ್ರಶಾಂತ್‌ ನಾಯರ್‌ಗೆ ಈ ಬಾರಿಯ ವಾಯುಸೇನೆ ಪದಕ ಘೋಷಿಸಲಾಗಿದೆ. ಇದೇ ವೇಳೆ, ಗೋಲ್ಡನ್‌ ಗ್ಲೋಬ್‌ ರೇಸ್‌ನಲ್ಲಿ ಭಾಗವಹಿಸಿದ್ದ ನೌಕಾಪಡೆ ಯೋಧ ಅಭಿಲಾಷ್‌ ಟಾಮಿ ನೌಕಾಪಡೆ ಪದಕಕ್ಕೆ ಅರ್ಹರಾಗಿದ್ದಾರೆ. 

ತುಮಕೂರಿನ ಯೋಧಗೆ ಪದಕ
ತುಮಕೂರಿನ ಯೋಧ ನಾಯ್ಕ ಎಂ. ಸಾದಿಕ್‌ಗೆ ಸೇನಾ ಪದಕ ನೀಡಿ ಪುರಸ್ಕರಿಸಲಾಗಿದೆ. ಅಲ್ಲದೆ ಅವರೊಂದಿಗೆ ಒಟ್ಟು 103 ಯೋಧರಿಗೆ ಈ ಪುರಸ್ಕಾರ ಲಭ್ಯವಾಗಿದೆ. ಪ್ರಸ್ತುತ ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿರುವ ಸಾದಿಕ್‌, 2004ರಲ್ಲಿ ಸೇನೆಗೆ ಸೇರಿದ್ದರು. ಜಮ್ಮು ಕಾಶ್ಮೀರದಲ್ಲಿ ಎಂಟು ವರ್ಷಗಳವರೆಗೆ ಅವರು ಸೇವೆ ಸಲ್ಲಿಸಿದ್ದಾರೆ. 28 ಯೋಧರಿಗೆ ಪರಮ ವಿಶಿಷ್ಟ ಸೇವಾ ಪದಕ, ಮೂವರಿಗೆ ಉತ್ತಮ ಯುದ್ಧ ಸೇವೆ ಪದಕ, 51 ಯೋಧರಿಗೆ ಅತಿ ವಿಶಿಷ್ಟ ಸೇವಾ ಪದಕ ನೀಡಿ ಪುರಸ್ಕರಿಸಲಾಗಿದೆ.

ಪದ್ಮ ವಿಭೂಷಣ
ತೀಜನ್‌ ಭಾಯ್‌ – ಜಾನಪದ  (ಛತ್ತೀಸ್‌ಗಢ)
ಶ್ರೀ ಇಸ್ಮಾಯಿಲ್‌ ಉಮರ್‌ ಗ್ವೆಲ್ಲೆ –   ಸಾರ್ವಜನಿಕ ವ್ಯವಹಾರಗಳು – (ವಿದೇಶ)
ಅನಿಲ್‌ಕುಮಾರ್‌ ಮಣಿಭಾಯ್‌ ನಾಯಕ್‌ – ವ್ಯಾಪಾರ ಮತ್ತು ಉದ್ಯಮ (ಮಹಾರಾಷ್ಟ್ರ)
ಬಲವಂತ್‌ ಮೊರೇಶ್ವರ ಪುರಂದರೆ – ನಾಟಕ  (ಮಹಾರಾಷ್ಟ್ರ)

ಪದ್ಮಭೂಷಣ
ಶ್ರೀ ಜಾನ್‌ ಚೇಂಬರ್ಸ್‌ (ವಿದೇಶ) – ವ್ಯಾಪಾರ ಮತ್ತು ಉದ್ಯಮ  (ಅಮೆರಿಕ)
ಸುಖದೇವ್‌ ಸಿಂಗ್‌ ಧಿಂಡಾ – ಸಾರ್ವಜನಿಕ ವ್ಯವಹಾರಗಳು  (ಪಂಜಾಬ್‌)
ಪ್ರವೀಣ್‌ ಗೋರ್ಧನ್‌ – ಸಾರ್ವಜನಿಕ ವ್ಯವಹಾರಗಳು (ದಕ್ಷಿಣ ಆಫ್ರಿಕಾ)
ಮಹಾಶಯ ಧರಮ್‌ ಪಾಲ್‌ ಗುಲಾಟಿ – ವ್ಯಾಪಾರ ಮತ್ತು ಉದ್ಯಮ  (ದೆಹಲಿ)
ದರ್ಶನ್‌ ಲಾಲ್‌ ಜೈನ್‌ – ಸಾಮಾಜಿಕ  (ಹರಿಯಾಣ)
ಅಶೋಕ್‌ ಲಕ್ಷ್ಮಣರಾವ್‌ ಕುಕಡೆ – ವೈದ್ಯಕೀಯ (ಮಹಾರಾಷ್ಟ್ರ)
ಕರಿಯಾ ಮುಂಡ – ಸಾರ್ವಜನಿಕ ವ್ಯವಹಾರಗಳು  (ಜಾರ್ಖಂಡ)
ಬುಧಾದಿತ್ಯ ಮುಖರ್ಜಿ – ಸಿತಾರ್‌  (ಪ.ಬಂಗಾಳ)
ಮೋಹನ್‌ಲಾಲ್‌ – ಸಿನಿಮಾ  (ಕೇರಳ)
ಎಸ್‌ ನಂಬಿ ನಾರಾಯಣ್‌ – ವಿಜ್ಞಾನ  (ಕೇರಳ)
ಕುಲದೀಪ್‌ ನಯ್ಯರ್‌  – ಪತ್ರಿಕೋದ್ಯಮ (ದೆಹಲಿ)
ಬಚೇಂದ್ರಿ ಪಾಲ್‌ – ಕ್ರೀಡೆ  (ಉತ್ತರಾಖಂಡ)
ವಿ.ಕೆ.ಶುಂಗು – ನಾಗರಿಕ ಸೇವೆ (ದೆಹಲಿ)
ಹುಕುಮ್‌ದೇವ್‌ ನಾರಾಯಣ ಯಾದವ್‌  (ಸಾರ್ವಜನಿಕ) ವ್ಯವಹಾರ  (ಬಿಹಾರ)

Advertisement

Udayavani is now on Telegram. Click here to join our channel and stay updated with the latest news.

Next