ನವದೆಹಲಿ: ಕೋವಿಡ್ 19 ಲಾಕ್ ಡೌನ್ ಸಂದರ್ಭದಲ್ಲಿ ಪತ್ರಕರ್ತರ ಸೋಗು ಧರಿಸಿ ಅಧಿಕ ಬೆಲೆಗೆ ಮದ್ಯ ಮಾರಾಟ ಮಾಡುತ್ತಿದ್ದ ನಾಲ್ವರನ್ನು ದೆಹಲಿ ಪೊಲೀಸರು ಬುಧವಾರ(ಮೇ 19) ಬಂಧಿಸಿರುವ ಘಟನೆ ನಡೆದಿದೆ.
ಇದನ್ನೂ ಓದಿ:CORONAದಿಂದಾಗಿ ಎಷ್ಟು SINGLE SCREENಗಳು ಮುಚ್ಚಿಹೋದವು ?
ಲಾಕ್ ಡೌನ್ ಸಮಯ ಉಪಯೋಗಿಸಿಕೊಂಡು ಅತ್ಯಧಿಕ ಬೆಲೆಗೆ ಮದ್ಯ ಮಾರಾಟ ಮಾಡುತ್ತಿದ್ದ ಅಮಿತ್ ಮಲಿಕ್ (36ವರ್ಷ), ರಾಮ್ ಆಶೀಶ್ (25), ಪವನ್ ಕೌಶಿಕ್ (41ವರ್ಷ) ಮತ್ತು ಮೋಹಿತ್ ಬೈಸೋಯ(21) ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿ ಸಂದರ್ಭದಲ್ಲಿ 42 ಬಿಯರ್ ಬಾಟಲ್ ಮತ್ತು 18 ವಿಸ್ಕಿ ಬಾಟಲ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪಿಟಿಐ ವರದಿ ಮಾಡಿದೆ. ಮಂಗಳವಾರ ರಾತ್ರಿ ದಕ್ಷಿಣ ಎಕ್ಸ್ ಟೆನ್ಶನ್ 1ರಲ್ಲಿ ಪೊಲೀಸ್ ತಂಡ ಗಸ್ತು ತಿರುಗುತ್ತಿದ್ದಾಗ ಹೆಡ್ ಕಾನ್ಸ್ ಟೇಬಲ್ ಸತೇಂದರ್ ಅವರು ಅಧಿಕ ಬೆಲೆಗೆ ಮದ್ಯ ಮಾರಾಟ ಮಾಡುತ್ತಿದ್ದ ಮಾಹಿತಿ ಪಡೆದಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಾಹಿತಿ ಆಧಾರದ ಮೇಲೆ ಏಮ್ಸ್ ಸಮೀಪದ ರಿಂಗ್ ರೋಡ್ ಅಂಡರ್ ಪಾಸ್ ನಲ್ಲಿ ಕಾರಿನ ತುಂಬಾ ಮದ್ಯ ತುಂಬಿಸಿಕೊಂಡು ಆರೋಪಿಗಳು ಆಗಮಿಸಿದಾಗ ದಾಳಿ ನಡೆಸಿ ನಾಲ್ವರನ್ನು ಬಂಧಿಸಲಾಗಿತ್ತು ಎಂದು ವರದಿ ತಿಳಿಸಿದೆ.
ಇವರು ಪತ್ರಕರ್ತರ ಸೋಗಿನಲ್ಲಿ ಆಗಮಿಸಿ ಅಧಿಕ ಬೆಲೆಗೆ ಮದ್ಯ ಮಾರಾಟ ಮಾಡುತ್ತಿದ್ದರು, ಇವರ ಬಳಿ ಇದ್ದ ನಕಲಿ ಐಡಿ ಕಾರ್ಡ್, ಕಾರು ಮತ್ತು ಮೂರು ಸ್ಕೂಟರ್ ಗಳನ್ನು ಜಪ್ತಿ ಮಾಡಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.