ಹೊಸದಿಲ್ಲಿ : 2017ರ ಎಪ್ರಿಲ್ ನಲ್ಲಿ ಒಂದು ದಿನ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ದಿಲ್ಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣದಿಂದ ಕಾರಿನಲ್ಲಿ ನಗರದ ಚಾಣಕ್ಯಪುರಿಯಲ್ಲಿನ ತಮ್ಮ ನಿವಾಸಕ್ಕೆ ಹೋಗುತ್ತಿದ್ದಾಗ ಕುಡಿದ ಅಮಲಿನಲ್ಲಿದ್ದ ನಾಲ್ವರು ದಿಲ್ಲಿ ವಿವಿ ವಿದ್ಯಾರ್ಥಿಗಳು ಆಕೆಯ ಕಾರನ್ನು ಅಟ್ಟಿಸಿಕೊಂಡು ಹೋಗಿ ಅಶ್ಲೀಲ ಸಂಜ್ಞೆಗಳನ್ನು ಮಾಡುವ ಮೂಲಕ ಲೈಂಗಿಕ ಕುಚೋದ್ಯ ತೋರಿದ್ದಕ್ಕಾಗಿ ಬಂಧಿತರಾಗಿ ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದರು.
ಈ ಘಟನೆ ನಡೆದ ಒಂದು ವರ್ಷವಾಗುತ್ತಾ ಬಂದಿದ್ದು ದಿಲ್ಲಿ ಪೊಲೀಸರು ಇಂದು ಮಂಗಳವಾರ ನಾಲ್ವರು ಆರೋಪಿ ವಿದ್ಯಾರ್ಥಿಗಳ ವಿರುದ್ಧ ಚಾರ್ಜ್ ಶೀಟ್ ಫೈಲ್ ಮಾಡಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.
ಅಂದು ಸಚಿವ ಸ್ಮೃತಿ ಇರಾನಿ ಅವರು ಕೊಟ್ಟಿದ್ದ ದೂರಿನ ಪ್ರಕಾರ ಪೊಲೀಸರು ನಾಲ್ವರು ಆರೋಪಿ ದಿಲ್ಲಿ ವಿವಿ ವಿದ್ಯಾರ್ಥಿಗಳ ವಿರುದ್ದ ಐಪಿಸಿ ಸೆ.354ಡಿ (ಮಹಿಳೆಯನ್ನು ಬೆನ್ನಟ್ಟಿ ಪೀಡಿಸುವುದು), ಸೆ.509 (ಮಹಿಳೆಯನ್ನು ಅವಮಾನಿಸುವ ರೀತಿಯಲ್ಲಿ ಅಶ್ಲೀಲ ಪದಗಳನ್ನು, ಸಂಜ್ಞೆಗಳನ್ನು ವ್ಯಕ್ತಪಡಿಸುವುದು) ಪ್ರಕಾರ ಕೇಸು ದಾಖಲಿಸಿದ್ದರು.
ಆರೋಪಿ ವಿದ್ಯಾರ್ಥಿಗಳು ತಮ್ಮ ಸ್ನೇಹಿತನ ಹುಟ್ಟುಹಬ್ಬದ ಪಾರ್ಟಿ ಮುಗಿಸಿ ಕಂಠ ಪೂರ್ತಿ ಮದ್ಯ ಸೇವಿಸಿ ಕಾರಿನಲ್ಲಿ ಮರಳುತ್ತಿದ್ದಾಗ ಎದುರಾದ ಸಚಿವೆ ಇರಾನಿ ಅವರ ಕಾರು ಮೋತಿ ಬಾಗ್ ಫ್ಲೈ ಓವರ್ ಬಳಿ ಕ್ರಾಸ್ ಮಾಡುತ್ತಿದ್ದುದನ್ನು ಕಂಡು ಬೆನ್ನಟ್ಟಿದ್ದರು. ಚಾಣಕ್ಯಪುರಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು.
ಅಂದು ಸಚಿವೆ ಇರಾನಿ ಅವರ ದೂರಿನ ಪ್ರಕಾರ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದ ನಾಲ್ವರು ವಿದ್ಯಾರ್ಥಿಗಳನ್ನು ವೈದ್ಯಕೀಯ ಪರೀಕ್ಷೆಗೆ ಗುರಿಪಡಿಸಲಾಗಿ ಅವರು ಮದ್ಯ ಸೇವಿಸಿದ್ದುದು ಸಾಬೀತಾಗಿತ್ತು.