ಬೆಂಗಳೂರು: ಮಗಳ ವಿವಾಹದ ಅದ್ದೂರಿ ಆಮಂತ್ರಣ ವಿಡಿಯೋ ವೈರಲ್ ಆದ ಬೆನ್ನಲ್ಲೇ ಜೆಡಿಎಸ್ ನಾಯಕ ಎಲ್.ಆರ್.ಶಿವರಾಮೇಗೌಡರಿಗೆ ಅಘಾತವೆಂಬಂತೆ ಬೆಂಗಳೂರಿನ ಕಲ್ಯಾಣನಗರದಲ್ಲಿರುವ ಅವರ ಒಡೆತನದ ರಾಯಲ್ ಕಾನ್‌ಕೋರ್ಡ್ ಅಂತರಾಷ್ಟ್ರೀಯ ಶಾಲೆಯಲ್ಲಿ ಕಟ್ಟಡದ ಗಾಜಗಳು ಉದುರಿ ಬಿದ್ದು ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಬುಧವಾರ ನಡೆದಿದೆ.
ಇಬ್ಬರು ಬಾಲಕರು ಮತ್ತು ಇಬ್ಬರು ಬಾಲಕಿಯರ ತಲೆಯ ಮೇಲೆ ಗಾಜು ಬಿದ್ದು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ನಾಲ್ವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ.
ಘಟನೆ ಬೆನ್ನಲ್ಲೇ ಗುರುವಾರ ಶಾಲೆಯ ಎದುರು ಸಾವಿರಾರು ಪೋಷಕರು ಜಮಾವಣೆಗೊಂಡು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಶಿವರಾಮೇ ಗೌಡ ಮತ್ತು ಶಾಲಾ ಸಿಬಂದಿ ಪ್ರತಿಭಟನಾ ಕಾರರ ಮನವೊಲಿಸಲು ಹರಸಾಹಸ ಪಡುತ್ತಿದ್ದಾರೆ. ಶಿವರಾಮೇಗೌಡ ವಿರುದ್ಧ ಮಕ್ಕಳ ತಾಯಂದಿರು ಕಿಡಿ ಕಾರಿದ್ದಾರೆ.
ಎಲ್ಲಾ ಸಮಸ್ಯೆಗಳನ್ನು 3 ದಿನಗಳ ಒಳಗೆ ಸರಿ ಮಾಡುವುದಾಗಿ ಶಿವರಾಮೇಗೌಡ ಅವರು ಹೇಳಿದ್ದಾರೆ.
ಮಗಳ ಮದುವೆಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡುವ ರಾಜಕಾರಣಿಗೆ ತಮ್ಮ ಲಕ್ಷಾಂತರ ರೂಪಾಯಿ ಪೀಸು ಪೀಕುವ ಶಾಲೆಯಲ್ಲಿ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಲು ಸಾಧ್ಯವಿಲ್ಲವೆ ಎಂದು ಪ್ರತಿಭಟನಾ ನಿರತ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.
ಶಾಲೆಯ ಬಳಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು ನೂರಾರು ಪೊಲೀಸರನ್ನುನಿಯೋಜಿಸಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.