Advertisement

4-5 ಕೋಟಿ ಲಸಿಕೆ ರೆಡಿ

01:34 AM Dec 29, 2020 | mahesh |

ಹೊಸದಿಲ್ಲಿ: ಜಗತ್ತಿನ ಕೆಲವು ದೇಶಗಳ ಜನತೆ ಲಸಿಕೆ ಚುಚ್ಚಿಸಿಕೊಳ್ಳುತ್ತಿರುವ ನಡುವೆ ಇತ್ತ ಭಾರತದಲ್ಲೂ ಕೊರೊನಾಕ್ಕೆ “ಸಂಜೀವಿನಿ’ ಸಿದ್ಧಗೊಂಡಿದೆ. ಪುಣೆಯ ಸೀರಮ್‌ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ (ಎಸ್‌ಐಐ) “ಕೋವಿಶೀಲ್ಡ್‌’ನ 4-5 ಕೋಟಿ ಡೋಸ್‌ಗಳ ದಾಸ್ತಾನು ಪೂರ್ಣಗೊಳಿಸಿದೆ.

Advertisement

ಆಕ್ಸ್‌ಫ‌ರ್ಡ್‌ ವಿವಿ ಮತ್ತು ಅಸ್ಟ್ರಾಜೆನೆಕಾ ಶೋಧಿಸಿರುವ ದೇಶೀ ಲಸಿಕೆ “ಕೋವಿಶೀಲ್ಡ್‌’ ಅನ್ನು ಭಾರತದಲ್ಲಿ ಸೀರಮ್‌ ಸಂಸ್ಥೆ ಉತ್ಪಾದಿಸುತ್ತಿದೆ. “ಡಿಸೆಂಬರ್‌ ಅಂತ್ಯ ಅಥವಾ ಜನವರಿ ಆರಂಭದಲ್ಲಿ ಆಕ್ಸ್‌ಫ‌ರ್ಡ್‌ ಲಸಿಕೆಗೆ ಇಂಗ್ಲೆಂಡ್‌ ಒಪ್ಪಿಗೆ ನೀಡಲಿದೆ. ಆ ಬಳಿಕ ಭಾರತ ಕೋವಿಶೀಲ್ಡ್‌ನ ತುರ್ತು ಬಳಕೆಗೆ ಗ್ರೀನ್‌ಸಿಗ್ನಲ್‌ ನೀಡುವ ಸಾಧ್ಯತೆ ಇದೆ’ ಸೀರಮ್‌ನ ಸಿಇಒ ಅಡಾರ್‌ ಪೂನಾವಾಲಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದಾಸ್ತಾನು ಪೂರ್ಣ: “ಕೋವಿಶೀಲ್ಡ್‌ನ 4-5 ಕೋಟಿ ದಾಸ್ತಾನು ಪೂರ್ಣಗೊಂಡಿದೆ. ಅತ್ಯಂತ ಶೀಘ್ರದಲ್ಲಿ ನಮಗೆ ಲಸಿಕೆ ನೀಡುವಿಕೆ ಸಂಬಂಧ ಭಾರತ ಸರಕಾರದ ನಿಯಮಾವಳಿಗಳಿಗೆ ಅನುಮೋದನೆ ಸಿಗಲಿದೆ. ಎಷ್ಟು ಪ್ರಮಾಣದಲ್ಲಿ, ಎಷ್ಟು ವೇಗದಲ್ಲಿ ಲಸಿಕೆ ನೀಡಬೇಕು ಎನ್ನುವುದನ್ನು ಸರಕಾರ ನಿರ್ಧರಿಸಲಿದೆ’ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಜುಲೈಗೆ 300 ಡೋಸ್‌!: “2021ರ ಮೊದಲಾ ರ್ಧದಲ್ಲಿ ವಿಶ್ವದಾದ್ಯಂತ ಲಸಿಕೆ ಕೊರತೆ ಬೀಳಲಿದೆ. ಜುಲೈ 2021ರ ವೇಳೆಗೆ ಸಂಸ್ಥೆ 30 ಕೋಡಿ ಡೋಸ್‌ ಕೋವಿಶೀಲ್ಡ್‌ ಉತ್ಪಾದಿಸುವ ಗುರಿ ಹೊಂದಿದೆ. ಆಗಸ್ಟ್‌ ನಿಂದ ಸೆಪ್ಟೆಂಬರ್‌ವರೆಗೆ ಜಗತ್ತಿನ ಬಹುತೇಕ ಲಸಿಕೆ ತಯಾರಕರು ಲಸಿಕೆ ಸರಬರಾಜು ಬಗ್ಗೆ ಗಮನ ಕೇಂದ್ರೀಕರಿಸಲಿದ್ದಾರೆ’ ಎಂದು ತಿಳಿಸಿದ್ದಾರೆ. ಪ್ರಸ್ತುತ ಕೋವಿಶೀಲ್ಡ್‌ 3ನೇ ಹಂತದ ಪ್ರಯೋಗದಲ್ಲಿದ್ದು, ಶೇ.62ರಷ್ಟು ಪರಿಣಾಮಕಾರಿ ಹೊಂದಿದೆ. ಪ್ರಯೋಗ ಹಂತದ ಎಲ್ಲ ಡೇಟಾಗಳನ್ನೂ ಡಿಸಿಜಿಐಗೆ ಸೀರಮ್‌ ಕಳುಹಿಸಿದ್ದು, ತುರ್ತು ಬಳಕೆಗೆ ಅನುಮತಿಸುವಂತೆ ಡಿಸೆಂಬರ್‌ ಆರಂಭದಲ್ಲಿಯೇ ಕೋರಿದೆ.

ಹತ್ತು ಲ್ಯಾಬ್‌ಗಳು ರೆಡಿ: ಜಗತ್ತಿನ ಅಲ್ಲಲ್ಲಿ ರೂಪಾಂತರಿ ಕೊರೊನಾದ ಭೀತಿ ಶುರುವಾಗಿದೆ. ಇದರ ಸವಾಲು ಎದುರಿಸಲು ಕೇಂದ್ರ ಸರಕಾರ ಸಕಲ ರೀತಿಯಿಂದ ಸನ್ನದ್ಧವಾಗಿದೆ. ರೂಪಾಂತರಿ ಸೋಂಕಿತರ ಮಾದರಿ ಪರೀಕ್ಷೆ ನಡೆಸಲು ದೇಶಾದ್ಯಂತ 10 ಲ್ಯಾಬ್‌ಗಳನ್ನು ಸರಕಾರ ಗುರುತಿಸಿದೆ.

Advertisement

ಅಲ್ಲದೆ ಹೊಸ ರೂಪದ ಸೋಂಕಿತರ ಮೇಲೆ ಕಣ್ಗಾವಲು ಹೆಚ್ಚಿಸಲು “ಇಂಡಿಯನ್‌ ಸಾರ್ಸ್‌-ಕೋವ್‌-2 ಜಿನೋಮಿಕ್ಸ್‌ ಕಾನ್ಸಾರ್ಟಿಯಮ್‌’ (ಐಎನ್‌ಎಸ್‌ಎಸಿಒಜಿ) ಸ್ಥಾಪಿಸಿದೆ. ರೂಪಾಂತರಿ ಕೊರೊನಾಕ್ಕೆ ಲಸಿಕೆ ಅಭಿವೃದ್ಧಿಪಡಿಸಲು ಈ ಸಮಿತಿ ಪೂರಕ ವರದಿಗಳನ್ನೂ ತಜ್ಞರಿಗೆ ನೀಡಲಿದೆ. ಇನ್ನೊಂದೆಡೆ ಗೃಹ ವ್ಯವಹಾರಗಳ ಸಚಿವಾಲಯ ರೂಪಾಂತರಿ ವೈರಾಣುವಿನ ನಿಯಂತ್ರಣಕ್ಕಾಗಿಯೇ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದೆ. ಇವುಗಳ ನಿಯಂತ್ರಣಕ್ಕೂ ಕಂಟೈನ್‌ಮೆಂಟ್‌ ಝೋನ್‌ ರಚಿಸುವಂತೆ ಸೂಚಿಸಲಾಗಿದೆ.

ರೋಗನಿರೋಧಕತೆ ಹೆಚ್ಚಾದ್ರೆ ಬಂಜೆತನ!
ಕೊರೊನಾ ನಿಯಂತ್ರಿಸುವ ಸಲುವಾಗಿ ಜಗತ್ತು ರೋಗ ನಿರೋಧಕಗಳನ್ನು ಹೆಚ್ಚೆಚ್ಚು ದೇಹದಲ್ಲಿ ಸೇರಿಸಲು ಯೋಜನೆ ಕೈಗೊಂಡಿದೆ. ಆದರೆ, ಇದರಿಂದ “ಸೂಪರ್‌ ಗೊನೋರಿಯಾ’ ಸೋಂಕಿನ ಸಮಸ್ಯೆ ಉದ್ಭವಿ ಸುವ ಸಾಧ್ಯತೆಯೂ ಇದೆ ಎಂದು ಡಬ್ಲ್ಯುಎಚ್‌ಒ ಎಚ್ಚರಿಸಿದೆ. ವೈರಾಣು ನಿಯಂತ್ರಿಸುವ ಸಲುವಾಗಿ ನೀಡಲಾಗುವ ಅಝಿತ್ರೊಮೈಸಿನ್‌ ಚಿಕಿತ್ಸೆ “ಸೂಪರ್‌ ಗೊನೋರಿ ಯಾ’ಕ್ಕೆ ಎಡೆಮಾಡಿಕೊಡುತ್ತದೆ. ಇದರಿಂದ ವ್ಯಕ್ತಿಯ ದೇಹದಲ್ಲಿ ಲೈಂಗಿಕ ಫ‌ಲವತ್ತತೆ ಕುಸಿಯುತ್ತದೆ.

ಸಿಎಂ ರಾವತ್‌ ದಿಲ್ಲಿಗೆ ಶಿಫ್ಟ್
ಉತ್ತರಖಂಡ ಸಿಎಂ ತ್ರಿವೇಂದ್ರ ಸಿಂಗ್‌ ರಾವತ್‌ ಅವರಿಗೆ ಕೊರೊನಾ ಪಾಸಿಟಿವ್‌ ದೃಢಪಟ್ಟಿದೆ. ಡೆಹ್ರಾಡೂನ್‌ ಆಸ್ಪತ್ರೆಗೆ ದಾಖಲಾಗಿದ್ದ ಇವರನ್ನು ಹೆಚ್ಚಿನ ಚಿಕಿತ್ಸೆಗೆ ದಿಲ್ಲಿಯ ಏಮ್ಸ್‌ ಆಸ್ಪತ್ರೆಗೆ ಸೇರಿಸಲಾಗಿದೆ. “ರಾವತ್‌ ಆರೋಗ್ಯ ಸ್ಥಿರವಾಗಿದೆ’ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
20 ಸಾವಿರ ಪಾಸಿಟಿವ್‌: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 20,021 ಮಂದಿಗೆ ಕೊರೊನಾ ಪಾಸಿಟಿವ್‌ ತಗುಲಿದೆ.

4 ರಾಜ್ಯಗಳಲ್ಲಿ ಡ್ರೈ ರನ್‌ ಶುರು
ಲಸಿಕೆ ನೀಡುವಿಕೆ ಕಾರ್ಯಕ್ರಮ ಸಂಬಂಧ “ಡ್ರೈ ರನ್‌’ 4 ರಾಜ್ಯಗಳಲ್ಲಿ ಸೋಮವಾರದಿಂದ ಆರಂಭಗೊಂಡಿದೆ. ಪಂಜಾಬ್‌, ಹರಿಯಾಣ, ಅಸ್ಸಾಂ, ಆಂಧ್ರಪ್ರದೇಶದ ಕನಿಷ್ಠ 125 ಫ‌ಲಾನುಭವಿಗಳ ದತ್ತಾಂಶಗಳನ್ನು ಕೋ-ವಿನ್‌ ಆ್ಯಪ್‌ನಲ್ಲಿ ದಾಖಲಿಸುವ ಕೆಲಸಗಳು ಮೊದಲ ದಿನ ನಡೆದಿದೆ. ಲಸಿಕೆ ಸಾಗಾಟ, ಸಂರಕ್ಷಣೆ ಮುಂತಾದ ಕಾರ್ಯಕ್ರಮಗಳನ್ನು ವ್ಯವಸ್ಥಿತಗೊಳಿಸಲು, ಸಂಭಾವ್ಯ ದೋಷಗಳನ್ನು ನಿವಾರಿಸಲು ಡ್ರೈರನ್‌ ನೆರವಾಗಲಿದೆ. ಮಂಗಳವಾರವೂ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next