Advertisement

3ನೇ ವೇತನ ಪರಿಷ್ಕರಣೆ: ಶೇ.15 ಫಿಟ್‌ಮೆಂಟ್‌ನೊಂದಿಗೆ ನೀಡಿ

06:30 AM Nov 16, 2018 | Team Udayavani |

ಬೆಂಗಳೂರು:ಮೂರನೇ ವೇತನ  ಪರಿಷ್ಕರಣೆಯಲ್ಲಿ ಶೇ  15ರಷ್ಟು ಫಿಟ್‌ಮೆಂಟ್‌ನೊಂದಿಗೆ ಅನುಷ್ಠಾನಗೊಳಿಸುವುದು, 4ಜಿ ಸೇವೆಯನ್ನು ನೀಡುವುದು ಸೇರಿ ಹಲವು ಬೇಡಿಕೆಗಳ ಈಡೇರಿಸುವಂತೆ ಕೇಂದ್ರ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ನೌಕರರ ಒಕ್ಕೂಟಗಳ ಪರವಾಗಿ ಗುರುವಾರ ಕೇಂದ್ರದ ಟೆಲಿಕಾಂ ಖಾತೆ ರಾಜ್ಯ ಸಚಿವ  ಮನೋಜ್‌ ಕುಮಾರ್‌ ಸಿನ್ಹಾರಿಗೆ ಮನವಿ ಪತ್ರ ಸಲ್ಲಿಸಲಾಗಿದೆ.

Advertisement

3ನೇ ವೇತನ ಆಯೋಗದಲ್ಲಿ ಶೇ 15ರಷ್ಟು ಫಿಟ್‌ಮೆಂಟ್‌ನ್ನು 2017ರ ಜನವರಿಯಿಂದ ಅನ್ವಯವಾಗುವಂತೆ ಆದೇಶ ಹೊರಡಿಸಬೇಕು. 4ಜಿ ಸೇವೆಯನ್ನು ಬಿಎಸ್‌ಎನ್‌ಎಲ್‌ಗೆ ವಿಸ್ತರಿಸಬೇಕು. ಸದ್ಯ ನಿವೃತ್ತಿ ವೇತನ ಲಾಭಾಂಶವನ್ನು ಕೊನೆಯ ಹಂತದ ವೇತನ ಶ್ರೇಣಿಗೆ ಅನುಗುಣವಾಗುವಂತೆ ಕಡಿತಗೊಳಿಸಲಾಗುತ್ತಿದೆ. ಇದನ್ನು ತಕ್ಷಣ ನಿಲ್ಲಿಸಬೇಕು. ಬದಲಿಗೆ ಮೂಲವೇತನಕ್ಕೆ ಅನುಗುಣವಾಗಿಯೇ ನಿವೃತ್ತಿ ವೇತನ ಲಾಭಾಂಶ ಮೊತ್ತವನ್ನು ಕಡಿತಗೊಳಿಸಬೇಕು. ಅಲ್ಲದೆ, 2016ರಿಂದ ಕಡಿತಗೊಳಿಸಿರುವ ನಿವೃತ್ತಿ ವೇತನ ಲಾಭಾಂಶವನ್ನು ವಾಪಾಸ್‌ ನೀಡಬೇಕು.

ಇದಲ್ಲದೆ ನಿವೃತ್ತ ವೇತನ ಪರಿಷ್ಕರಣೆಯೂ ಮಾಡಬೇಕು, ಈ ಲಾಭ ಈಗಾಗಲೇ ನಿವೃತ್ತರಾಗಿರುವ ನೌಕರರಿಗೂ ಅನ್ವಯವಾಗುವಂತೆ ಮಾಡಬೇಕು ಎಂಬುದು ಸೇರಿ ಹಲವು ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮನವಿ ಪತ್ರದಲ್ಲಿ ಕೋರಲಾಗಿದೆ.

ಕೇಂದ್ರದ ವಾದವೇನು?
ಅಫೋರ್‌xಬಲಿಟಿ ಕ್ಲಾಸ್‌ ವ್ಯಾಪ್ತಿಯಲ್ಲಿ ಬಿಎಸ್‌ಎನ್‌ಎಲ್‌ ನೌಕರರು ಬರುತ್ತಾರೆ.ಹೀಗಾಗಿ, ನಿವೃತ್ತಿ ವೇತನ ಪರಿಷ್ಕರಣೆ ನೀಡಲು ಬರುವುದಿಲ್ಲ ಎಂದು ಕೇಂದ್ರಸರ್ಕಾರ ಹೇಳುತ್ತಿದೆ. ಆದರೆ, ಬಿಎಸ್‌ಎನ್‌ಎಲ್‌ ಕೇಂದ್ರ ಸರ್ಕಾರದ ಸ್ವಾಯತ್ತ ಸಂಸ್ಥೆಯಾಗಿದೆ.ಅಫ‌ರ್‌xಬಲಿಟಿ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂಬುದು ಬಿಎಸ್‌ಎನ್‌ಎಲ್‌ ನೌಕರರು ಹೇಳುತ್ತಿದ್ದಾರೆ.

ಬಿಎಸ್‌ಎನ್‌ಎಲ್‌ಗೆ ಮಲತಾಯಿ ಧೋರಣೆ
3ನೇ ವೇತನ ಪರಿಷ್ಕರಣೆಯನ್ನು ಬಿಎಸ್‌ಎನ್‌ಎಲ್‌ಗೆ ಜಾರಿಗೊಳಿಸಲು ಕೇಂದ್ರ ಸಂವಹನ ಇಲಾಖೆ (ಡಿಓಟಿ) ಹಲವು ಕಾರಣಗಳನ್ನು ಮುಂದಿಟ್ಟಿದೆ. ಬಿಎಸ್‌ಎನ್‌ಎಲ್‌ ನಷ್ಟದಲ್ಲಿದೆ, ಕಳೆದ ಮೂರು ವಾರ್ಷಿಕ ವರ್ಷಗಳಲ್ಲಿ ಲಾಭಾಂಶವಿಲ್ಲ ಎಂದು ತಿಳಿಸುತ್ತಿದೆ. ಆದರೆ, 2017ರಲ್ಲಿ  ಟ್ರಾಯ್‌ ತನ್ನ ವರದಿಯಲ್ಲಿ, ಉಳಿದ ಖಾಸಗಿ ಟೆಲಿಕಾಂ ಸಂಸ್ಥೆಗಳಿಗಿಂತ ಎಜಿಎಆರ್‌ನಲ್ಲಿ ಜೂನ್‌ ವರ್ಷಾಂತ್ಯಕ್ಕೆ ಶೇ 6.8 ರಷ್ಟು ಏರಿಕೆ ಕಂಡಿದೆ ಎಂದು ತಿಳಿಸಿದೆ.

Advertisement

ಅದೇ ರೀತಿ ಡಿಓಟಿ, ಎಂಟಿಎನ್‌ಎಲ್‌ ನೌಕಕರಿಗೆ 2ನೇ ವೇತನ ಪರಿಷ್ಕರಣೆಯನ್ನು ಶೇ 30ರಷ್ಟು ಫಿಟ್‌ಮೆಂಟ್‌ನೊಂದಿಗೆ 2007ರಲ್ಲಿ ಬಗೆಹರಿಸಿದೆ. ಆದರೆ, ವಾಸ್ತವದಲ್ಲಿ ಎಂಟಿಎನ್‌ಎಲ್‌ ವೇತನ ಪರಿಷ್ಕರಣೆಗೆ ಅವಕಾಶ ಇರಲಿಲ್ಲ.ಹೀಗಾಗಿ, ಬಿಎಸ್‌ಎನ್‌ಎಲ್‌ ನೌಕರರ 3ನೇ ವೇತನ ಪರಿಷ್ಕರಣೆಯನ್ನು ಸಚಿವ ಸಂಪುಟ ಸಭೆಯಲ್ಲಿ ಇತ್ಯರ್ಥವಾಗಬೇಕು ಎಂಬುದು ಸರಿಯಿಲ್ಲ ಎಂದು ಒಕ್ಕೂಟ ಆಕ್ಷೇಪಿಸಿದೆ.

4ಜಿ ಖರೀದಿಸಲು ಸಿದ್ಧವಿದೆ
4ಜಿ ಸೇವೆಯನ್ನು ಮಾರುಕಟ್ಟೆ ದರಕ್ಕೆ ಖರೀದಿಸಲು ಬಿಎಸ್‌ಎನ್‌ಎಲ್‌ ಸಿದ್ಧವಿದೆ. ಇದರಲ್ಲಿ ಶೇ 50ರಷ್ಟು ಮೊತ್ತವನ್ನು ಬಿಎಸ್‌ಎನ್‌ಎಲ್‌ ಆಡಳಿತ ಮಂಡಳಿ ಭರಿಸಲಿದ್ದು, ಉಳಿದ ಹಣ ಸರ್ಕಾರ ಭರಿಸಲಿ ಎಂದು ಪ್ರಸ್ತಾವನೆ ಕಳುಹಿಸಿ 8 ತಿಂಗಳು ಕಳೆದಿದೆ. ಆದರೆ, ಇದುವರೆಗೂ ಯಾವುದೇ ಕ್ರಮವಾಗಿಲ್ಲ ಎಂದು ಒಕ್ಕೂಟದ ಸದಸ್ಯರೊಬ್ಬರು ತಿಳಿಸಿದರು.

ಡಿಸೆಂಬರ್‌ 3ರಿಂದ ರಾಷ್ಟ್ರವ್ಯಾಪಿ ಹೋರಾಟ
ಬೇಡಿಕೆಗಳ ಈಡೇರಿಸುವ ಕುರಿತು ಕೇಂದ್ರ ಸಚಿವರು ಸಕಾರಾತ್ಮಕ ಭರವಸೆ ನೀಡಿದ್ದಾರೆ. ಆದರೆ, ಈ ಹಿಂದೆಯೂ ಎರಡು ಬಾರಿ ನೀಡಿದ್ದ ಭರವಸೆಯನ್ನು ಈಡೇರಿಸುವಲ್ಲಿ ಸರ್ಕಾರ ವಿಫ‌ಲವಾಗಿದೆ.ಹೀಗಾಗಿ ಮುಂದಿನ 15ದಿನಗಳಲ್ಲಿ ನಮ್ಮ ಬೇಡಿಕೆಗಳು ಈಡೇರದಿದ್ದರೆ ಡಿ.3ರಿಂದ  ರಾಷ್ಟ್ರವ್ಯಾಪಿ ಬಿಎಸ್‌ಎನ್‌ಎಲ್‌ ನೌಕರರು ಹೋರಾಟ ನಡೆಸಲು ತೀರ್ಮಾನಿಸಲಾಗಿದೆ ಎಂದು ಒಕ್ಕೂಟದ ಸದಸ್ಯರು ತಿಳಿದರು.  ಈ ಎಲ್ಲ ಬೇಡಿಕೆಗಳಿಗೆ ಒತ್ತಾಯಿಸಿ ನೌಕರರು ಹಲವು ದಿನಗಳಿಂದ ಸಾಂಕೇತಿಕ ಹೋರಾಟ ಮಾಡುತ್ತಿದ್ದರು.

“ಕೇಂದ್ರಸರ್ಕಾರ ಖಾಸಗಿ ಟೆಲಿಕಾಂ ಕಂಪೆನಿಗಳಿಗೆ 5ಜಿ ಸೇವೆ ನೀಡಲು ಕ್ರಮ ವಹಿಸಿದೆ. ಇಂಡಿಯಾ ಕಾಂಗ್ರೆಸ್‌ 5ಜಿ ಸೇವೆ ನೀಡುವುದರ ಬಗ್ಗೆ ಪ್ರಸ್ತಾಪಿಸಲಾಗಿದೆ. ಬಿಎಸ್‌ಎನ್‌ಎಲ್‌ನಿಂದ ಸದ್ಯದಲ್ಲಿಯೇ 4ಜಿ ಸೇವೆ ಒದಗಿಸಲಾಗುವುದು”
– ಮನೋಜ್‌ ಕುಮಾರ್‌ ಸಿನ್ಹಾ, ಕೇಂದ್ರ ಟೆಲಿಕಾಂ ರಾಜ್ಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next