Advertisement

ಇರಾಕ್‌: ಅಪಹೃತ ಭಾರತೀಯರ ಹತ್ಯೆ

06:00 AM Mar 21, 2018 | |

ಹೊಸದಿಲ್ಲಿ: ಆ ನತದೃಷ್ಟರ ಕುಟುಂಬದ ಸದಸ್ಯರು ಅವರಿಗಾಗಿ ಕಾದಿದ್ದು ಬರೋಬ್ಬರಿ ಮೂರು ವರ್ಷ. ಆದರೆ, ಆ ನಿರೀಕ್ಷೆಯ ನಂದಾದೀಪ ನಂದಿ ಹೋಗಿದೆ. ಒಂದಿಷ್ಟು ಕಾಸು ಸಂಪಾದಿಸಿ ತಮ್ಮ ಕುಟುಂಬದ ಜೀವನ ಮಟ್ಟ ಸುಧಾರಿಸಲೆಂದು, ತಾವು ಬೆಳೆದ ಹಳ್ಳಿ, ಊರುಗಳನ್ನು, ಬಂಧು-ಬಳಗ, ಸ್ನೇಹಿತರನ್ನು ತೊರೆದು ದೂರದ ಇರಾಕ್‌ಗೆ ಹೋಗಿದ್ದ ಅವರೆಲ್ಲರೂ ಹೇಳ ಹೆಸರಿಲ್ಲದಂತೆ ಅಳಿದುಹೋಗಿದ್ದಾರೆ. ಮನೆಗಳಿಂದ ತೆರಳುವಾಗ ನಗುಮೊಗದಲ್ಲಿ ಎಲ್ಲರಿಂದ ಬೀಳ್ಕೊಂಡ ಅವರು, ಕನಿಷ್ಠ ಪಕ್ಷ ಅವರ ಸಂಬಂಧಿಕರಿಗೆ ಶವಗಳಾಗಿಯೂ ಸಿಗದೆ ಕೇವಲ ಅಸ್ಥಿಪಂಜರಗಳ ರೂಪದಲ್ಲಿ ಪತ್ತೆಯಾಗಿರುವುದು ದುರಂತ.

Advertisement

ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ರಾಜ್ಯಸಭೆಯಲ್ಲಿ ಮಂಗಳವಾರ ಸ್ವಯಂ ಪ್ರೇರಿತ ವಾಗಿ ಹೇಳಿಕೆ ನೀಡುವ ಸಂದರ್ಭದಲ್ಲಿಯೇ ಭಾರೀ  ಕೋಲಾಹಲ ಉಂಟಾಗಿತ್ತು. ಆದರೆ ಲೋಕ ಸಭೆಯಲ್ಲಿ ಸುಷ್ಮಾ ಸ್ವರಾಜ್‌ ಮಾಹಿತಿ ನೀಡಲು ಎದ್ದು ನಿಲ್ಲುತ್ತಿದ್ದಂತೆಯೇ ಕಾಂಗ್ರೆಸ್‌ ಸದಸ್ಯರು ಅಡ್ಡಿಪಡಿಸಿದರು. ಹೀಗಾಗಿ ಕಲಾಪವನ್ನು ಬುಧವಾರಕ್ಕೆ ಮುಂದೂಡಲಾಯಿತು. ಏಕಾಏಕಿ ಸದನದಲ್ಲಿ ಸಾವಿನ ಸುದ್ದಿ ಪ್ರಕಟಿಸಿದ ಸರಕಾರದ ಕ್ರಮಕ್ಕೆ ವಿಪಕ್ಷಗಳು ಆಕ್ಷೇಪಿಸಿದವು. ರಾಜ್ಯಸಭೆಯಲ್ಲಿ ಗದ್ದಲದ ಹೊರತಾಗಿಯೂ ಮಾತನಾಡಿದ ಸುಷ್ಮಾ, ಪಂಜಾಬ್‌ನಿಂದ ಇರಾಕ್‌ಗೆ ತೆರಳಿದ್ದ 39 ಮಂದಿಯನ್ನು ಐಸಿಸ್‌ ಉಗ್ರರು ಕೊಂದಿದ್ದಾರೆ. ಆದರೆ ಯಾವಾಗ ಈ ಹೀನ ಕೃತ್ಯ ನಡೆಸಲಾಗಿದೆ ಎಂಬ ಮಾಹಿತಿ ಸಿಕ್ಕಿಲ್ಲ  ಎಂದರು.

ರೇಡಾರ್‌ ಮೂಲಕ ಪತ್ತೆ: ನಾಪತ್ತೆಯಾಗಿದ್ದ ಭಾರತೀಯರನ್ನು ಪತ್ತೆ ಮಾಡಲು ಭಾರತ-ಇರಾಕ್‌ ಶ್ರಮಿಸುತ್ತಿದ್ದೆವು.  ಕಳೆದ ವರ್ಷದ ಮಧ್ಯದಲ್ಲಿ ಬದೋಶ್‌ನಲ್ಲಿನ ಗುಡ್ಡದ ಮಣ್ಣಿನ ಪದರಗಳ ಅಡಿಯಲ್ಲಿ  ಒಟ್ಟಿಗೇ 39  ಅಸ್ಥಿಪಂಜರಗಳು ಪತ್ತೆಯಾಗಿದ್ದವು. “ಡೀಪ್‌ ಪಿನಿಟ್ರೇಷನ್‌ ರೇಡಾರ್‌’ ಮೂಲಕ ಅಸ್ಥಿಪಂಜರಗಳನ್ನು ಪತ್ತೆ ಮಾಡಲಾಗಿತ್ತು. ಇವುಗಳನ್ನು ಬಗ್ಧಾದ್‌ನಲ್ಲಿ ಡಿಎನ್‌ಎ ಪರೀಕ್ಷೆಗೊಳ ಪಡಿಸಲಾಯಿತು. ಇದಾದ ಮೇಲೆ, ಕಳೆದ ಅಕ್ಟೋಬರ್‌ನಲ್ಲಿ, ಅಪಹೃತರ ಸಂಬಂಧಿಕರಿಂದ ಡಿಎನ್‌ಎ ಸ್ಯಾಂಪಲ್‌ಗ‌ಳನ್ನು ಪಡೆದು ಅವನ್ನು ಬಗ್ಧಾದ್‌ಗೆ ರವಾನಿಸಲಾಯಿತು. ರವಾನಿಸಿದ ಡಿಎನ್‌ಎ ಮಾದರಿಗಳು, ಅಸ್ಥಿಪಂಜರಗಳ ಡಿಎನ್‌ಎಗಳಿಗೆ ಹೋಲಿಕೆಯಾಗಿದ್ದರಿಂದ ಮೃತ ಪಟ್ಟವರು ಭಾರತೀಯ ಕೂಲಿ ಕಾರ್ಮಿಕರೇ ಎಂದು ತೀರ್ಮಾನಿಸಲಾಯಿತು ಎಂದು ಸುಷ್ಮಾ ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next