Advertisement

44 ಯೋಧರ ಬಲಿದಾನ ! ; ಕಾಶ್ಮೀರದ ಇತಿಹಾಸದ ಘೋರ ಪೈಶಾಚಿಕ ಕೃತ್ಯ 

02:53 PM Feb 14, 2019 | |

ಶ್ರೀನಗರ : ಕಾಶ್ಮೀರದ ಇತಿಹಾಸದಲ್ಲೇ ಮೊದಲು ಎನ್ನುವಂತೆ ಉಗ್ರರು ಯುರೋಪ್‌ ರಾಷ್ಟ್ರಗಳಲ್ಲಿ ನಡೆಯುತ್ತಿದ್ದ ಮಾದರಿಯಲ್ಲಿ  ಕಾರಿನಲ್ಲಿ  ಸ್ಫೋಟಕ ತುಂಬಿಸಿ ನಡೆಸಿದ ಆತ್ಮಾಹುತಿ ದಾಳಿಯಲ್ಲಿ  ಕನಿಷ್ಠ 
44 ಮಂದಿ ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ. ಇದು ಉರಿ ದಾಳಿಯ ಬಳಿಕ ಭದ್ರತಾ ಪಡೆಗಳನ್ನು ಗುರಿಯಾಗಿಸಿ ನಡೆಸಿದ ಭೀಕರ ದಾಳಿಯಾಗಿದೆ. 

Advertisement

ಆವಂತಿಪೋರಾದ ಗೋರಿಪುರ ಪ್ರದೇಶದ ಹೆದ್ದಾರಿಯಲ್ಲಿ  ಸಾಗುತ್ತಿದ್ದ ಸಿಆರ್‌ಪಿಎಫ್ ವಾಹನಗಳ ಸಾಲನ್ನು ಗುರಿ ಇರಿಸಿ ಆತ್ಮಾಹುತಿ ದಾಳಿಕೋರನೊಬ್ಬ ಸ್ಫೋಟಕ ತುಂಬಿದ ಕಾರನ್ನು ಗುದ್ದಿಸಿದ್ದಾನೆ. ಪರಿಣಾಮವಾಗಿ ಸೇನಾ ವಾಹನ ಛಿದ್ರ ಛಿದ್ರವಾಗಿದ್ದು ಕನಿಷ್ಠ 44 ಸಿಆರ್‌ಪಿಎಫ್ ಸೈನಿಕರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. 

ಸ್ಫೋಟದ ತೀವ್ರತೆಗೆ ಹಲವರ ದೇಹಗಳು ಛಿದ್ರ ಛಿದ್ರವಾಗಿದ್ದು, ಯೋಧರ ಗುರುತು ಸಿಗದಷ್ಟು ಭಯಾನಕ ದೃಶ್ಯ ಕಂಡು ಬಂದಿದೆ. ಯೋಧನೊಬ್ಬರ ದೇಹ ನೂರು ಮೀಟರ್‌ ದೂರಕ್ಕೆ ಎಸೆಯಲ್‌ಪಟ್ಟಿತ್ತು ಎಂದು ವರದಿಯಾಗಿದೆ. 

ಪಾಕ್‌ ಮೂಲದ ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆ ದಾಳಿಯ ಹೊಣೆ ಹೊತ್ತಿದ್ದು, ಆತ್ಮಾಹುತಿ ದಾಳಿಕೋರ ಪುಲ್ವಾಮಾದ ಕಾಕಪೋರಾ ನಿವಾಸಿ ಅದಿಲ್‌ ಅಹ್ಮದ್‌ ಎನ್ನುವವನಾಗಿದ್ದು ಕೃತ್ಯ ಎಸಗುವ ಮುನ್ನ ವಿಡಿಯೋವನ್ನೂ ಮಾಡಿಟ್ಟಿದ್ದಾನೆ. 

2,547 ಯೋಧರು ಜಮ್ಮವಿನಿಂದ ಶ್ರೀನಗರದತ್ತ 78 ವಾಹನಗಳಲ್ಲಿ ತೆರಳುತ್ತಿದ್ದ ಸಮಯವನ್ನು ಕಾದು ದಾಳಿ ನಡೆಸಲಾಗಿದೆ. ಮಧ್ಯಾಹ್ನ ಸುಮಾರು 3.20 ರ ವೇಳೆಗೆ ಘೋರ ದಾಳಿ ನಡೆದಿದೆ. 

Advertisement

ಜಮ್ಮ  ಮತ್ತು ಕಾಶ್ಮೀರದ ಹೆದ್ದಾರಿಯಲ್ಲಿ ಪ್ರತಿಕೂಲ ಹವಾಮಾನ ಮತ್ತು ದಟ್ಟ ಮಂಜು ಕವಿದಿದ್ದ ಕಾರಣ 2 ದಿನಗಳ ಕಾಲ ಹೆದ್ದಾರಿ ಬಂದ್‌ ಮಾಡಲಾಗಿತ್ತು, ಹೀಗಾಗಿ ಏಕಕಾಲದಲ್ಲಿ ಇಷ್ಟೊಂದು ಮಂದಿ ಸೈನಿಕರು ಪ್ರಯಾಣ ಬೆಳೆಸಿದ್ದರು. 

ಇನ್ನೂ ಕೆಲ ಸೈನಿಕರಿಗೆ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next