ಹೊಸದಿಲ್ಲಿ : ಪ್ರಸಕ್ತ ವರ್ಷ ಬಿಎಸ್‌ಎಫ್ ನ 56 ಸಿಬಂದಿಗಳು ಸೇರಿದಂತೆ ದೇಶಾದ್ಯಂತ ಒಟ್ಟು 383 ಪೊಲೀಸ್, ಭದ್ರತಾ ಸಿಬಂದಿಗಳು ಕರ್ತವ್ಯದ ವೇಳೆ ಹುತಾತ್ಮರಾಗಿದ್ದಾರೆ ಎಂದು ಗುಪ್ತಚರ ಇಲಾಖೆ ನಿರ್ದೇಶಕ ರಾಜೀವ್ ಜೈನ್ ಶನಿವಾರ ಮಾಹಿತಿ ನೀಡಿದ್ದಾರೆ.
‘ಪೊಲೀಸ್ ಹುತಾತ್ಮರ ದಿನಾಚರಣೆ’ಯಲ್ಲಿ ಪಾಲ್ಗೊಂಡು ಮಾಧ್ಯಮ ಪ್ರತಿನಿಧಿಗಳನ್ನುಉದ್ದೇಶಿಸಿ ಮಾತನಾಡಿ ಈ ಅಂಕಿ ಅಂಶಗಳನ್ನು ನೀಡಿದ್ದಾರೆ. 383 ಹುತಾತ್ಮರ ಪೈಕಿ 56 ಬಿಎಸ್‌ಎಫ್ ಯೋಧರು, 42 ಮಂದಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಎಂದು ತಿಳಿಸಿದ್ದಾರೆ.
ಪೊಲೀಸರ ಪೈಕಿ ಉತ್ತರ ಪ್ರದೇಶದಲ್ಲಿ 76 ಮಂದಿ ಹುತಾತ್ಮರಾಗಿದ್ದು, ಸಿಆರ್‌ಪಿಎಫ್ ನ 49 ಮಂದಿ , ಛತ್ತೀಸ್‌ಘಡದಲ್ಲಿ 23 ಮಂದಿ, ಪಶ್ಚಿಮ ಬಂಗಾಲದಲ್ಲಿ 16 ಮಂದಿ, ದೆಹಲಿಯಲ್ಲಿ ಮತ್ತು ಸಿಐಎಸ್‌ಎಫ್ ನಲ್ಲಿ ತಲಾ 13 ಮಂದಿ, ಬಿಹಾರ ಮತ್ತು ಕರ್ನಾಟಕದಲ್ಲಿ ತಲಾ 12 ಮಂದಿ , ಐಟಿಬಿಪಿಯಲ್ಲಿ 11ಮಂದಿ ಹುತಾತ್ಮರಾಗಿದ್ದಾರೆ ಎಂದು ವಿವರ ನೀಡಿದ್ದಾರೆ.
ಪಾಕಿಸ್ತಾನದ ಗಡಿಯುದ್ದದ ಗುಂಡಿನ ದಾಳಿ, ಜಮ್ಮು ಮತ್ತು ಕಾಶ್ಮೀರದಲ್ಲಿನ ಉಗ್ರ ಕಾರ್ಯಾಚರಣೆ, ನಕ್ಸಲ್ ವಿರೋಧಿ ಕಾರ್ಯಾಚರಣೆ ಮತ್ತು ಇತರ ಕಾನೂನು ಮತ್ತು ಸುವ್ಯವಸ್ಥೆಯ ಕರ್ತವ್ಯದ ವೇಳೆ ಈ ಸಿಬಂದಿಗಳು ಹುತಾತ್ಮರಾಗಿದ್ದಾರೆ ಎಂದು ತಿಳಿಸಿದರು.
1959 ರಲ್ಲಿ ಚೀನಾ ಪಡೆಗಳು ಭಾರತದ 10 ಪೊಲೀಸರನ್ನು ಬರ್ಬರವಾಗಿ ಕೊಂದ ಕರಾಳ ದಿನವಾದ ಆಕ್ಟೋಬರ್ 21 ನ್ನು ಪ್ರತೀ ವರ್ಷ ದೇಶಾದ್ಯಂತ ‘ಪೊಲೀಸ್ ಹುತಾತ್ಮರ ದಿನಾಚರಣೆ’ಯನ್ನಾಗಿ ಆಚರಿಸಲಾಗುತ್ತಿದೆ.
ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್, ಸೇರಿದಂತೆ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳು ಪೊಲೀಸ್ ಅಧಿಕಾರಿಗಳು ಹುತಾತ್ಮರಿಗೆ ಶನಿವಾರ ಪುಷ್ಪ ನಮನ ಸಲ್ಲಿಸಿದ್ದಾರೆ.