Advertisement

ಪೌರ ಕಾರ್ಮಿಕರಿಗಾಗಿ ಜಿ+1 ಮಾದರಿಯಲ್ಲಿ 381 ಮನೆ

01:09 PM Jun 18, 2018 | Team Udayavani |

ದಾವಣಗೆರೆ: ಕಳೆದ ಹಲವಾರು ವರ್ಷದ ದಾವಣಗೆರೆ ಮಹಾನಗರ ಪಾಲಿಕೆ ಪೌರ ನೌಕರರ ವಸತಿ ಸಮುಚ್ಚಯದ ಕನಸು ನನಸಾಗುವ ಮುಹೂರ್ತ ಭಾನುವಾರ ಕೂಡಿ ಬಂದಿದೆ.

Advertisement

ದಾವಣಗೆರೆ ನಗರಸಭೆ ಆಗಿದ್ದ ಕಾಲದಿಂದಲೂ ವಸತಿ ಸಮುಚ್ಚಯ ಎಂಬುದು ಪ್ರಮುಖ ಬೇಡಿಕೆ ಆಗಿತ್ತು. ಪ್ರತಿ ನಿತ್ಯ ನಗರ ಸ್ವಚ್ಚತಾ ಕಾರ್ಯದಲ್ಲಿ  ತೊಡಗಿಸಿಕೊಳ್ಳುವ ಪೌರ ಕಾರ್ಮಿಕರಿಗೆ ಸ್ವಂತದ್ದಾದ ಸೂರಿಲ್ಲ. ಬರುವಂತಹ ವೇತನದಲ್ಲೇ ಮನೆ ಬಾಡಿಗೆ ಕಟ್ಟಿಕೊಂಡು ಜೀವನ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ ಎಲ್ಲವೂ ಸರಿದೂಗಿಸುವುದು ಕಷ್ಟ. ಸ್ವಂತದ್ದೊಂದು ಮನೆ ಇದ್ದಲ್ಲಿ ಜೀವನ ಸಾಗಿಸಲಿಕ್ಕೆ ಅನುಕೂಲ ಆಗುತ್ತದೆ ಎಂಬುದು ಪೌರ ಕಾರ್ಮಿಕರ ಕನಸಾಗಿತ್ತು.

ವಸತಿ ಸಮುಚ್ಚಯದ ಅಗತ್ಯತೆ ಮನಗಂಡು ಪೌರ ಕಾರ್ಮಿಕರು ವಸತಿ ಸಮುಚ್ಚಯಕ್ಕಾಗಿ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಕೆ ಮಾಡಿದ್ದರು. ಅಂತಿಮವಾಗಿಹೋರಾಟದ ಹಾದಿ ತುಳಿದಿದ್ದರು. ಆದರೂ, ಪ್ರಯೋಜನ ಆಗಿರಲಿಲ್ಲ.  ಆದರೂ, ಪಟ್ಟು ಬಿಡದೆ ನಡೆಸಿದ ಹೋರಾಟಕ್ಕೆ ಕೊನೆಗೂ ಸ್ಪಂದನೆ ದೊರೆತಿತ್ತು. ದಾವಣಗೆರೆ ಹೊರ ವಲಯದ ದೊಡ್ಡಬೂದಿಹಾಳ್‌ ಗ್ರಾಮದ ಬಳಿ ಸರ್ವೇ ನಂ.112ರಲ್ಲಿ ಸುಮಾರು 10 ಎಕರೆ ಪ್ರದೇಶದಲ್ಲಿ ವಸತಿ ಸಮುಚ್ಛಯ  ನಿರ್ಮಾಣದ ಸಿಹಿ ಸುದ್ದಿ ಹೊರ ಬಂದಿತ್ತು.

ಆದರೂ, ಕೆಲವಾರು ಕಾರಣದಿಂದ ವಸತಿ ಸಮುಚ್ಚಯ ಕನಸು ನನಸಾಗುವುದಕ್ಕೆ ಕೆಲವಾರು ಸಮಸ್ಯೆ ಕಾಣಿಸಿಕೊಂಡಿದ್ದವು. ಎಲ್ಲ ಜನಪ್ರತಿನಿಧಿಗಳು, ಮುಖಂಡರು ಮತ್ತು ಅಧಿಕಾರಿಗಳ ಪ್ರಯತ್ನದ ಫಲವಾಗಿ ವಸತಿ
ಸಮುಚ್ಚಯದ ಕನಸು ನನಸಾಗುವ ಕಾಲ ಕೂಡಿ ಬಂದಿದೆ.

ಭಾನುವಾರ ಶಾಸಕ ಶಾಮನೂರು ಶಿವಶಂಕರಪ್ಪ ದೊಡ್ಡಬೂದಿಹಾಳ್‌ ಗ್ರಾಮದ ಬಳಿ ಸರ್ವೇ ನಂ. 112ರಲ್ಲಿ ಸುಮಾರು 10 ಎಕರೆ ಪ್ರದೇಶದಲ್ಲಿ ವಸತಿ ಸಮುಚ್ಚಯ ನಿರ್ಮಾಣದ ಭೂಮಿಪೂಜೆ ನೆರವೇರಿಸುವ ಮೂಲಕ ಪೌರ
ಕಾರ್ಮಿಕರ ಆಸೆ ಈಡೇರಿಸುವ ಶುಭ ಗಳಿಗೆಗೆ ಸಾಕ್ಷಿಯಾದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಅವರು, ದಾವಣಗೆರೆ ಮಹಾನಗರ ಪಾಲಿಕೆಯ ಪೌರಕಾರ್ಮಿಕರಿಗೆ ರಾಜ್ಯ ಸರ್ಕಾರದ ಗೃಹ ಭಾಗ್ಯ ಯೋಜನೆಯಡಿ ದೊಡ್ಡಬೂದಿಹಾಳ್‌ ಗ್ರಾಮದ ಸರ್ವೇ ನಂ. 112ರಲ್ಲಿ ಸುಮಾರು 10 ಎಕರೆ ಪ್ರದೇಶದಲ್ಲಿ ಜಿ+1 ಮಾದರಿಯ ಸಮುಚ್ಚಯ ನಿರ್ಮಾಣ ಮಾಡಲಾಗುವುದು. 

ಸಮುತ್ಛಯದಲ್ಲಿ ಒಟ್ಟು 381 ಮನೆಗಳು ನಿರ್ಮಾಣಗೊಳ್ಳಲಿವೆ. ಅರ್ಹ ಪೌರ ಕಾರ್ಮಿಕರಿಗಷ್ಟೇ ಮನೆಗಳ ಹಂಚಿಕೆ ಮಾಡಲಾಗುವುದು. ಗುತ್ತಿಗೆದಾರರಿಗೆ 18 ತಿಂಗಳು ಕಾಲಾವಕಾಶ ನೀಡಲಾಗಿದ್ದರೂ ಸಹ 8-10 ತಿಂಗಳಲ್ಲಿ ಮನೆ ನಿರ್ಮಿಸುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ.  ಉತ್ತಮ ಗುಣಮಟ್ಟದಲ್ಲಿ ಮನೆ ನಿರ್ಮಿಸುವಂತೆ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಪ್ರತಿ ಮನೆ ನಿರ್ಮಾಣಕ್ಕೆ ಸುಮಾರು 8 ಲಕ್ಷ ರೂಪಾಯಿ ವೆಚ್ಚವಾಗಲಿದೆ. ಇದರಲ್ಲಿ ರಾಜ್ಯ ಸರ್ಕಾರ ಶೇ. 80 ರಷ್ಟು ಇನ್ನುಳಿದ ಶೇ. 20ನ್ನು ಪೌರಕಾರ್ಮಿಕರು ಭರಿಸಲಿರುವರು.
ವಸತಿ ಸಮುಚ್ಛಯಕ್ಕೆ ಎಲ್ಲ ಅಗತ್ಯ ನಾಗರಿಕ ಸೌಲಭ್ಯಗಳನ್ನು ಸಹ ಕಲ್ಪಿಸಲಾಗುವುದು ಎಂದು ತಿಳಿಸಿದರು.

ವಸತಿ ಸಮುಚ್ಚಯದ ಕಾಮಗಾರಿ ಕಳೆದ 2 ವರ್ಷಗಳ ಹಿಂದೆಯೇ ಆರಂಭಗೊಳ್ಳಬೇಕಾಗಿದ್ದರೂ ಸಹ ಕೆಲವು
ಅಡಚಣೆಗಳಿಂದ ಈಗ ಕಾಮಗಾರಿ ಆರಂಭಗೊಳ್ಳುತ್ತಿದೆ ಎಂದ ಅವರು, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಸುಮಾರು 700 ಎಕರೆ ಪ್ರದೇಶದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಅಭಿವೃದ್ಧಿ ಮಾಡಲಾಗುವುದು ಎಂದು ತಿಳಿಸಿದರು.

ಮಹಾನಗರ ಪಾಲಿಕೆ ಸದಸ್ಯ ಎಂ.ಹಾಲೇಶ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೇಯರ್‌ ಶೋಭಾ ಪಲ್ಲಾಗಟ್ಟೆ, ಡೆಪ್ಯುಟಿ ಮೇಯರ್‌ ಕೆ. ಚಮನ್‌ಸಾಬ್‌, ಸದಸ್ಯರಾದ ಅನಿತಾಬಾಯಿ, ದಿನೇಶ್‌ ಕೆ.ಶೆಟ್ಟಿ, ಎಸ್‌. ಬಸಪ್ಪ, ಎಲ್‌.ಎಂ. ಹನುಮಂತಪ್ಪ, ಪೌರ ಕಾರ್ಮಿಕರ ಸಂಘದ ಬಿ.ಎಚ್‌. ವೀರಭದ್ರಪ್ಪ, ಡೂಡಾ ಮಾಜಿ ಅಧ್ಯಕ್ಷ ಮಾಲತೇಶ್‌ ಜಾಧವ್‌, ನಗರಸಭೆ ಮಾಜಿ ಉಪಾಧ್ಯಕ್ಷ ಎ. ನಾಗರಾಜ್‌, ನಗರಸಭೆ ಮಾಜಿ ಸದಸ್ಯ ಎಸ್‌. ಮಲ್ಲಿಕಾರ್ಜುನ್‌, ಟಿ.ರಮೇಶ್‌, ಅಣ್ಣಪ್ಪ, ಸಾಗರ್‌, ಆಯುಕ್ತ ಮಂಜುನಾಥ್‌ ಬಳ್ಳಾರಿ, ಅಧೀಕ್ಷಕ ಅಭಿಯಂತ ಸತೀಶ್‌, ಎಚ್‌. ಎನ್‌.ರಾಜು, ರಾಮಚಂದ್ರಪ್ಪ, ಆರೋಗ್ಯ ನಿರೀಕ್ಷಕರು ಮತ್ತಿತತರರು ಇದ್ದರು. ಪೌರ ಕಾರ್ಮಿಕರ ಸಂಘದ ಎನ್‌. ನೀಲಗಿರಿಯಪ್ಪ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next