ಕೋಲ್ಕತಾ: ಪಶ್ಚಿಮಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ನ 30ಕ್ಕೂ ಅಧಿಕ ಶಾಸಕರು ಭಾರತೀಯ ಜನತಾ ಪಕ್ಷದ ಸಂಪರ್ಕದಲ್ಲಿದ್ದಾರೆ ಎಂದು ನಟ ಮಿಥುನ್ ಚಕ್ರವರ್ತಿ ಬುಧವಾರ (ಜುಲೈ 27) ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ.
ಇದನ್ನೂ ಓದಿ:ಪ್ರವೀಣ್ ಹತ್ಯೆ : ಕೊಲೆಗಡುಕರಿಗೆ ಉಗ್ರ ಶಿಕ್ಷೆ ನೀಡುತ್ತೇವೆ : ಸಿಎಂ ಬೊಮ್ಮಾಯಿ
ಶಿಕ್ಷಕರ ನೇಮಕಾತಿ ಹಗರಣದಲ್ಲಿ ಬಂಧನಕ್ಕೊಳಗಾಗಿರುವ ಸಚಿವ ಮತ್ತು ಅವರ ಆಪ್ತರಿಂದಾಗಿ ಟಿಎಂಸಿ ಪಕ್ಷದೊಳಗೆ ಸಮಸ್ಯೆ ತಲೆದೋರಿದೆ ಎಂದು ಚಕ್ರವರ್ತಿ ಆರೋಪಿಸಿದ್ದಾರೆ.
ನಾನು ನಿಮಗೆ ಎಲ್ಲಾ ಬ್ರೇಕಿಂಗ್ ನ್ಯೂಸ್ ನೀಡುತ್ತೇನೆ. ಸದ್ಯ ತೃಣಮೂಲ ಕಾಂಗ್ರೆಸ್ ನ 38 ಶಾಸಕರು ಬಿಜೆಪಿ ಜೊತೆ ಸಂಪರ್ಕದಲ್ಲಿದ್ದಾರೆ. ಅವರಲ್ಲಿ 21 ಶಾಸಕರು ನೇರವಾಗಿ ನನ್ನ ಸಂಪರ್ಕದಲ್ಲಿದ್ದಾರೆ ಎಂದು ಮಿಥುನ್ ತಿಳಿಸಿದ್ದಾರೆ.
ಕಳೆದ ವರ್ಷ ಪಶ್ಚಿಮಬಂಗಾಳ ವಿಧಾನಸಭಾ ಚುನಾವಣೆಗೂ ಮುನ್ನ ನಟ ಮಿಥುನ್ ಚಕ್ರವರ್ತಿಯನ್ನು ಬಿಜೆಪಿ ತನ್ನ ಮಡಿಲಿಗೆ ಸೆಳೆದುಕೊಂಡಿತ್ತು. ನಾನಿಂದು ಇಷ್ಟು ದೊಡ್ಡ ನಟನಾಗಲು ಹಿಂದೂಗಳೇ ಕಾರಣ. ಮುಸ್ಲಿಮರು ಮತ್ತು ಸಿಖ್ಖರು ನನ್ನ ನಟನೆಯನ್ನು ಪ್ರೀತಿಸುತ್ತಾರೆ ಎಂದು ಚಕ್ರವರ್ತಿ ಹೇಳಿದರು.
ಶಿಕ್ಷಕರ ನೇಮಕಾತಿ ಹಗರಣದಲ್ಲಿ ಬಂಧನಕ್ಕೊಳಗಾಗಿರುವ ಸಚಿವ ಪಾರ್ಥ ಚಟರ್ಜಿ ಕುರಿತು ಮಾತನಾಡಿದ ಮಿಥುನ್, ಹಗರಣದಲ್ಲಿ ಅವರು ಶಾಮೀಲಾಗದಿದ್ದರೆ, ಅದಕ್ಕೆ ಪುರಾವೆ ಇಲ್ಲವೆಂದಾದ ಮೇಲೆ ಭಯಪಡುವ ಅಗತ್ಯವಿಲ್ಲ. ಆದರೆ ಒಂದು ವೇಳೆ ಆರೋಪಿ ಎಂದು ಸಾಬೀತಾದರೆ ಜಗತ್ತಿನ ಯಾವ ಶಕ್ತಿಯೂ ಅವರನ್ನು ಕಾಪಾಡಲಾರದು ಎಂದು ತಿಳಿಸಿದ್ದಾರೆ.