ಕಲಬುರಗಿ: ಸತತ ಹೋರಾಟದ ಫಲವಾಗಿ ಪಡೆಯಲಾದ ಸಂವಿಧಾನದ 371 (ಜೆ) ವಿಧಿ ಜಾರಿಯಲ್ಲಿ ಅಧಿಕಾರಿಗಳು ಅಸಡ್ಡೆ ತೋರುತ್ತಿರುವುದರಿಂದ ಹಾಗೂ ಮೀಸಲಾತಿ ಉಲ್ಲಂಘನೆ, ಬಡ್ತಿ ನೀಡುವಲ್ಲಿ ನಿರ್ಲಕ್ಷ್ಯ ತೋರುತ್ತಿರುವ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕದ ಜನತೆ ಮತ್ತೊಂದು ಹಂತದ ಹೋರಾಟಕ್ಕೆ ಮುಂದಾಗುವುದು ಅನಿವಾರ್ಯವಾಗಿದೆ ಎಂದು ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದಲ್ಲಿ ಶೈಕ್ಷಣಿಕ ಪ್ರವೇಶಾತಿ ಹಾಗೂ ನೇಮಕಾತಿ ಜತೆಗೆ ಬಡ್ತಿಯಲ್ಲಿ ಮೀಸಲಾತಿ ಕಡ್ಡಾಯ ಕಲ್ಪಿಸಬೇಕು. ಆದರೆ ಕಲ್ಯಾಣ ಕರ್ನಾಟಕದ ವಿರೋಧಿ ಧೋರಣೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ 371 (ಜೆ) ಕನ್ನಡಿಯೊಳಗಿನ ಗಂಟಾಗಿ ಪರಿಣಮಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಮೀಸಲಾತಿ ಉಲ್ಲಂಘನೆ, ಬಡ್ತಿಯಲ್ಲಿ ಅನ್ಯಾಯ-ಸರಿಪಡಿಸದ ದೋಷಗಳ ಹಿನ್ನೆಲೆಯಲ್ಲಿ ಪ್ರಮುಖವಾಗಿ 371 (ಜೆ) ಪ್ರಮಾಣ ಪತ್ರ ವಿತರಣೆಯಲ್ಲಿ ಬೋಗಸ್ ನಡೆಯುತ್ತಿರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೋರಾಟವೊಂದೇ ಪರಿಹಾರವಾಗಿದೆ. ಈ ಎಲ್ಲವುಗಳನ್ನು ಸರಿಪಡಿಸದಿದ್ದರೆ ಕಲ್ಯಾಣ ಕರ್ನಾಟಕ ಭಾಗದಾದ್ಯಂತ ಹೋರಾಟ ಕೈಗೊಳ್ಳಲು ಈಗಿನಿಂದಲೇ ಭೂಮಿಕೆ ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಿದರು.
371 (ಜೆ) ವಿಧಿ ಜಾರಿಯಾಗಿ ಎಂಟು ವರ್ಷವಾದರೂ ಇನ್ನೂ ದೋಷ ದೂರವಾಗಿಲ್ಲ. ಪ್ರಮುಖವಾಗಿ ಮೀಸಲಾತಿ ಕಾರ್ಯಾನುಷ್ಠಾನಕ್ಕೆ ತರದೇ ಅನ್ಯಾಯ ಎಸಗಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಲ್ಲಿ ಮಾತ್ರ ಮುಂದಾಗುವ ಅನಾಹುತ ತಪ್ಪಿಸಬಹುದು ಎಂದರು. ಕೇವಲ 371 (ಜೆ) ವಿಧಿ ಕಡೆ ಬೊಟ್ಟು ಮಾಡಿ ಒಂದೊಂದೇ ಯೋಜನೆಗಳನ್ನು ಈ ಭಾಗದಿಂದ ಕಿತ್ತುಕೊಳ್ಳಲಾಗುತ್ತಿದೆ. ಇದಕ್ಕೆ ಈ ಭಾಗದ ಜನಪ್ರತಿನಿಧಿಗಳಲ್ಲಿರುವ ಒಗ್ಗಟ್ಟಿನ ಕೊರತೆಯೇ ಕಾರಣವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ರೈಲ್ವೆ ವಿಭಾಗೀಯ ಕಚೇರಿ ಕಾರ್ಯಾನುಷ್ಠಾನ ಗೊಳ್ಳುತ್ತಿಲ್ಲ. ರಾಯಚೂರಿಗೆ ಸಿಗಬೇಕಾದ ಐಐಟಿ ಧಾರವಾಡಕ್ಕೆ ಸ್ಥಳಾಂತರವಾಗಿದೆ. ಅದೇ ರೀತಿ ಏಮ್ಸ್ ಧಾರವಾಡದ ಪಾಲಾಗುತ್ತಿದೆ. ಮೆಘಾ ಟೆಕ್ಸಟೈಲ್ ಪಾರ್ಕ್‌ಗೆ ಮೂರು ಜಿಲ್ಲೆಗಳ ಹೆಸರನ್ನು ಪ್ರಸ್ತಾವನೆಗೆ ಕಳುಹಿಸಲಾಗಿದೆ. ಇದು ಕೂಡಾ ಕೈ ತಪ್ಪುವ ಆತಂಕ ಕಾಡಲಾರಂಭಿಸಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಫೆ. 10ರಂದು ಕಲಬುರಗಿಗೆ ಸಾರಿಗೆ ಸಚಿವ ಶ್ರೀ ರಾಮುಲು ನೇತೃತ್ವ ದ 371 (ಜೆ) ವಿಧಿ ಕಾರ್ಯಾನು ಷ್ಠಾನ ಸಮಿತಿ ಆಗಮಿಸುತ್ತಿದೆ. ಈ ಸಂದರ್ಭದಲ್ಲಿ 22 ಅಂಶಗಳ ಮನವಿ ಪತ್ರ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು. ಮುಖಂಡರಾದ ಮನೀಷ ಜಾಜು, ಲಿಂಗರಾಜ ಸಿರಗಾಪುರ, ಡಾ| ಎ.ಎಸ್. ಭದ್ರಶೆಟ್ಟಿ, ಶಿವಲಿಂಗಪ್ಪ ಬಂಡಕ್ ಮುಂತಾದವರಿದ್ದರು.