Advertisement

ಗದಗ ಜಿಲ್ಲೆ ಈಗ ಕಾದ ಕಾವಲಿ..!

10:18 AM Mar 07, 2019 | |

ಗದಗ: ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸೂರ್ಯನ ಪ್ರಖರ ಹೆಚ್ಚುತ್ತಿದೆ. ದಿನದಿಂದ ದಿನಕ್ಕೆ ಬಿಸಿಲಿನ ಝಳ ಹೆಚ್ಚುತ್ತಿದ್ದು,
ಭೂಮಿ ಕಾದ ಕಾವಲಿಯಂತಾಗಿದೆ.

Advertisement

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬೇಸಿಗೆ ಬಿಸಿಲು ಮತ್ತಷ್ಟು ಏರುವ ಸಾಧ್ಯತೆ ಇದೆ. ಹೊಸ ವರ್ಷದ ಮೊದಲ ದಿನವಾದ ಜನವರಿ 1ರಂದು ಜಿಲ್ಲೆಯಲ್ಲಿ ಮೈ ಕೊರೆಯುವ ಚಳಿ ಮುಂದುವರಿದಿತ್ತು. ಆದರೆ, ಫೆಬ್ರವರಿ ತಿಂಗಳಾಂತ್ಯದಿಂದ ಬಿಸಿಲಿನ ತಾಪ ಹೆಚ್ಚುತ್ತಿದೆ. ಇದೀಗ ಮಾರ್ಚ್‌ ಮೊದಲ ವಾರದಲ್ಲೇ ವಿಪರೀತ ಉಷ್ಣಾಂಶ ಕಂಡು ಬರುತ್ತಿದೆ. ಈಗಾಗಲೇ ರಣ ಬಿಸಿಲಿನ ತಾಪದಿಂದ ಜನರು ಬೆವರುವಂತಾಗಿದೆ.

ಬುಧವಾರ ಗದಗ-ಬೆಟಗೇರಿ ಅವಳಿ ನಗರದಲ್ಲಿ 36 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಕಳೆದ ಒಂದು ದಶಕದಲ್ಲೇ ಗರಿಷ್ಠ ಎಂದರೆ ಮೂರು ವರ್ಷಗಳ ಹಿಂದೆ (2016ರ) ಮಾರ್ಚ್‌ನಲ್ಲಿ 39.4 ಡಿಗ್ರಿ ಉಷ್ಣಾಂಶ ದಾಖಲಾಗಿತ್ತು. 1953ರ ಮಾರ್ಚ್‌ ತಿಂಗಳಲ್ಲಿ ಗರಿಷ್ಠ 40 ಡಿಗ್ರಿ ಉಷ್ಣಾಂಶ ದಾಖಲಾಗಿತ್ತು. ಇದೇ ಈವರೆಗಿನ ಸಾರ್ವಕಾಲಿಕ ದಾಖಲೆಯಾಗಿದೆ. 

ಸಾಮಾನ್ಯವಾಗಿ ಮಾರ್ಚ್‌ ತಿಂಗಳಲ್ಲಿ ಜಿಲ್ಲೆಯಲ್ಲಿ 36.6 ರಿಂದ 38.9 ಡಿಗ್ರಿ ಸೆಲ್ಸಿಯಸ್‌ ವಾಡಿಕೆ ಉಷ್ಣಾಂಶ ಇರುತ್ತದೆ. ಆದರೆ, ಈ ಬಾರಿ ಮಾರ್ಚ್‌ ಮೊದಲ ವಾರದಲ್ಲೇ ಬಿಸಿಲಿನ ಝಳದಲ್ಲಿ ವಿಪರೀತವಾಗಿ ಏರಿಕೆಯಾಗುತ್ತಿದೆ. ಬೆಳಿಗ್ಗೆ 8 ರಿಂದ ಸಂಜೆ 4ರ ವರೆಗೆ ತೀವ್ರ ಬಿಸಿಲಿರುತ್ತದೆ. ಬಿಸಿಲಿನ ಪ್ರಖರತೆಯಿಂದ ಮಧ್ಯಾಹ್ನ ವೇಳೆಗೆ ಮನೆಯಿಂದ ಹೊರ ಬರಲು ಜನರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಮಧ್ಯಾಹ್ನ ವೇಳೆಗೆ ಮಾರುಕಟ್ಟೆ ಸೇರಿದಂತೆ ಬಹುತೇಕ ಪ್ರಮುಖ ರಸ್ತೆಗಳಲ್ಲಿ ಜನಸಂದಣಿ ಕಡಿಮೆಯಾಗುತ್ತಿದೆ. ಈಗಲೇ ಇಷ್ಟೊಂದು ಬಿಸಿಲಿದ್ದರೆ, ಮುಂದಿನ ಏಪ್ರಿಲ್‌, ಮೇ ತಿಂಗಳ ಪರಿಸ್ಥಿತಿ ಹೇಗೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಹವಾಮಾನ ಇಲಾಖೆಯ ಮುನ್ನೋಟದ ಪ್ರಕಾರ ಮಾರ್ಚ್‌ ಎರಡನೇ ವಾರದ ಬಳಿಕ 37ರಿಂದ 39 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣಾಂಶ ದಾಟಬಹುದೆಂದು ಹೇಳಲಾಗಿದೆ.

ಜಿಲ್ಲೆಯಲ್ಲಿ 2011ರಿಂದ ನಿರಂತರವಾಗಿ ಸರಾಸರಿ ವಾಡಿಕೆ ಮಳೆಗಿಂತ (641.6 ಮಿ.ಮೀ) ಕಡಿಮೆ ಮಳೆಯಾಗುತ್ತಿದೆ. ಅಲ್ಲದೆ, ಕಳೆದ ನಾಲ್ಕೈದು ವರ್ಷಗಳಿಂದ ನಿರಂತರ ಬರ ಆವರಿಸುತ್ತಿದ್ದು, ಜಲಮೂಲಗಳು ಕಣ್ಮರೆಯಾಗುತ್ತಿದೆ. ಪರಿಣಾಮ ವಾತಾವರಣದಲ್ಲಿ ತೇವಾಂಶ ಕಡಿಮೆಯಾಗಿ ಬಿಸಿಲ ಧಗೆ ಹೆಚ್ಚುತ್ತಿದೆ. ಇನ್ನೊಂದೆಡೆ ಒಣ ಹವೆ ಹೆಚ್ಚುತ್ತಿದೆ. ಕೆಲಸದ ನಿಮಿತ್ತ ನಗರ ಹಾಗೂ ಸುತ್ತಲಿನ ಗ್ರಾಮಗಳಿಂದ ಪಟ್ಟಣಕ್ಕೆ ಬರುವ ಜನರು ಬಿಸಿಲಿನ ತಾಪಕ್ಕೆ ಬಸವಳಿಯುತ್ತಿದ್ದಾರೆ. ಪಾದಚಾರಿಗಳು ನೆತ್ತಿ ಸುಡುವ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಕೊಡೆ, ಮರದ ನೆರಳಿಗೆ ಮೊರೆ ಹೋಗುತ್ತಿದ್ದಾರೆ.

Advertisement

ಹವಾಮಾನ ಇಲಾಖೆಯ ಮುನ್ನೋಟದ ಪ್ರಕಾರ ಗದಗ ಜಿಲ್ಲೆಯಲ್ಲಿ ಮಾರ್ಚ್‌ ಎರಡನೇ ವಾರದ ಬಳಿಕ 37ರಿಂದ 39 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣಾಂಶ ದಾಟಬಹುದೆಂದು ಹೇಳಲಾಗಿದೆ.

ವೀರೇಂದ್ರ ನಾಗಲದಿನ್ನಿ 

Advertisement

Udayavani is now on Telegram. Click here to join our channel and stay updated with the latest news.

Next