ನವದೆಹಲಿ: ದೇಶಕ್ಕೆ ಮೋಸ ಮಾಡಿ ವಿದೇಶಗಳಲ್ಲಿ ಅವಿತಿರುವ ಉದ್ಯಮಿಗಳ್ಯಾರು ಎಂಬ ಪ್ರಶ್ನೆಗೆ ಯಾರಾದರೂ ಮಲ್ಯ ಮತ್ತು ನೀರವ್ ಮೋದಿ ಎಂದು ಸಲೀಸಾಗಿ ಉತ್ತರಿಸಬಹುದೇನೋ! ಆದರೆ, ಜಾರಿ ನಿರ್ದೇಶನಾಲಯ (ಇ.ಡಿ.) ಹೊಸದಾಗಿ ನೀಡಿರುವ ಮಾಹಿತಿಯ ಪ್ರಕಾರ, ಈವರೆಗೆ 36 ಉದ್ಯಮಿಗಳು ಹೀಗೆ ವಂಚಿಸಿ ದೇಶಬಿಟ್ಟು ಪರಾರಿಯಾಗಿದ್ದಾರೆ. ಅಗಸ್ಟಾ ಕಾಪ್ಟರ್ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿಯಾಗಿರುವ ಸುಶೇನ್ ಮೋಹನ್ ಗುಪ್ತಾ ಎಂಬಾತನ ಜಾಮೀನು ಅರ್ಜಿ ವಿಚಾರಣೆ ವೇಳೆ, ಇ.ಡಿ. ವಕೀಲರು ನ್ಯಾಯಾಲಯಕ್ಕೆ ಈ ಮಾಹಿತಿ ನೀಡಿದರು. ದೇಶ ತೊರೆದು ಓಡಿ ಹೋದವರಲ್ಲಿ ಮಲ್ಯ, ಲಲಿತ್ ಮೋದಿ, ನೀರವ್ ಮೋದಿ, ಮೆಹುಲ್ ಚೋಕ್ಸಿ, ಸ್ಟೆರ್ಲಿಂಗ್ ಬಯೋಟೆಕ್ ಕಂಪನಿಯ ಪ್ರವರ್ತಕರಾದ ಸಂದೇಸರ ಸಹೋದರರು ಸೇರಿ ಒಟ್ಟು 36 ಉದ್ಯಮಿಗಳಿದ್ದಾರೆ ಎಂದು ತಿಳಿಸಿದ್ದಾರೆ.