ಬೆಂಗಳೂರು: ಕರ್ನಾಟಕದಲ್ಲಿ 2013ರ ಎಪ್ರಿಲ್‌ನಿಂದ 2017ರ ನವೆಂಬರ್ ವರೆಗಿನ ಅವಧಿಯಲ್ಲಿ ಒಟ್ಟು 3,515 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪೈಕಿ 2,525 ಆತ್ಮಹತ್ಯೆಗಳು ಬರ ಮತ್ತು ಬೆಳೆ ವೈಫಲ್ಯದ ಕಾರಣಕ್ಕಾಗಿ ಆಗಿವೆ ಎಂದು ರಾಜ್ಯದ ಕೃಷಿ ಇಲಾಖೆ ಒದಗಿಸಿರುವ ಅಂಕಿ ಅಂಶಗಳು ಹೇಳುತ್ತವೆ.
ವರದಿಯಾಗಿರುವ 3,515 ರೈತ ಆತ್ಮಹತ್ಯೆ ಪ್ರಕರಣಗಳಲ್ಲಿ 2,525 ಕೇಸುಗಳು ಬರ ಮತ್ತು ಬೆಳೆ ವೈಫಲ್ಯದ ಕಾರಣಕ್ಕೆ ಆಗಿರುವುದನ್ನು ಕೃಷಿ ಇಲಾಖೆ ಒಪ್ಪಿಕೊಂಡಿದೆ. 2015ರ ಎಪ್ರಿಲ್‌ನಿಂದ 2017ರ ಎಪ್ರಿಲ್ ವರೆಗೆ 2,514 ರೈತ ಆತ್ಮಹತ್ಯೆ ವರದಿಗಳು ವರದಿಯಾಗಿದ್ದು ಇವುಗಳ ಪೈಕಿ 1,929 ಕೇಸುಗಳನ್ನು ಕೃಷಿ ಇಲಾಖೆ ಸ್ವೀಕರಿಸಿದೆ ಎಂದು ಅಂಕಿ ಅಂಶಗಳು ತಿಳಿಸಿವೆ.
2017ರ ಎಪ್ರಿಲ್ ನಿಂದ 2017ರ ನವೆಂಬರ್ ವರೆಗಿನ ಅವಧಿಯಲ್ಲಿ ರಾಜ್ಯಕ್ಕೆ ಪರ್ಯಾಪ್ತ ಮಳೆಯಾಗಿದೆ. ಈ ಅವಧಿಯಲ್ಲಿ 624 ರೈತ ಆತ್ಮಹತ್ಯೆಗಳು ವರದಿಯಾಗಿವೆ; ಈ ಪೈಕಿ 416 ಕೇಸುಗಳನ್ನು ಇಲಾಖೆ ಸ್ವೀಕರಿಸಿದೆ.
2013ರಿಂದೀಚೆಗೆ ರಾಜ್ಯ ಸರಕಾರದ ಅನುಮೋದನೆ ಇಲ್ಲದ ಕಾರಣಕ್ಕೆ ಸುಮಾರು 112 ರೈತ ಆತ್ಮಹತ್ಯೆ ಕೇಉಗಳು ಪರಿಗಣನೆಗೆ ಬಾಕಿ ಇವೆ ಎಂದು ಕೃಷಿ ಇಲಾಖೆ ನಿರ್ದೇಶಕ ಬಿ ವೈ ಶ್ರೀನಿವಾಸ್ ಮಾಧ್ಯಮಕ್ಕೆ ತಿಳಿಸಿದರು.
ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬದವರಿಗೆ ನೀಡುವ ಪರಿಹಾರ ಮೊತ್ತವನ್ನು ಸರಕಾರ 1 ಲಕ್ಷದಿಂದ ಐದು ಲಕ್ಷ ರೂ.ಗೆ ಏರಿಸಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು 2015ರಲ್ಲಿ ರಾಣೆಬೆನ್ನೂರು ತಾಲೂಕಿನಲ್ಲಿ ನಡೆದಿದ್ದ ರಾಲಿಯಲ್ಲಿ ಈ ಪರಿಹಾರ ಏರಿಕೆಯನ್ನು ಘೋಷಿಸಿದ್ದರು.