Advertisement

ಕೊರಟಗೆರೆ ಪಟ್ಟಣದಲ್ಲಿ ಸಿನಿಮೀಯ ರೀತಿಯಲ್ಲಿ 35 ಲಕ್ಷ ರೂ. ದರೋಡೆ

06:35 PM Sep 05, 2022 | Team Udayavani |

ಕೊರಟಗೆರೆ: ಎತ್ತಿನಹೊಳೆ ಪೈಪ್‌ಲೈನ್ ಕಾಮಗಾರಿಯ ಖರ್ಚುವೆಚ್ಚಕ್ಕಾಗಿ ಶಿವಗಂಗಾ ಚಿತ್ರಮಂದಿರದ ಮುಂಭಾಗದ ಬಾಡಿಗೆ ಮನೆಯಲ್ಲಿಡಲಾಗಿದ್ದ 35 ಲಕ್ಷ 20 ಸಾವಿರ ರೂ. ನಗದು ಹಣವನ್ನು ಕಳ್ಳರ ತಂಡವೊದು ನಕಲಿ ಕೀ ಬಳಸಿ ಹಗಲು ದರೋಡೆ ಮಾಡಿರುವ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.

Advertisement

ಕೊರಟಗೆರೆ ಪಟ್ಟಣದ ಶಿವಗಂಗಾ ಚಿತ್ರಮಂದಿರದ ಮುಖ್ಯರಸ್ತೆಯ ಸಮೀಪವೇ ಇರುವಂತಹ ಬಾಡಿಗೆ ಮನೆಯಲ್ಲಿ ಪಿಎಲ್‌ಆರ್ ಕಂಪನಿಯ ಲೆಕ್ಕಾಧಿಕಾರಿ ಕಳೆದ ಎರಡು ತಿಂಗಳಿಂದ ವಾಸವಿದ್ದಾರೆ. ಎತ್ತಿನಹೊಳೆ ಯೋಜನೆಯ ಕಾಮಗಾರಿಯ ಕಾರ್ಮಿಕರು ಮತ್ತು ಡಿಸೇಲ್ ಖರ್ಚಿಗಾಗಿ ಶೇಖರಣೆ ಮಾಡಲಾಗಿದ್ದ ಹಣವು ಕಳ್ಳತನ ಆಗಿದೆ.

ಸುವರ್ಣಮುಖಿ ನದಿಯ ದಡಕ್ಕೆ ಹೊಂದಿಕೊಂಡ ಬಾಡಿಗೆ ಮನೆಯ ಬೀಗ ಮತ್ತು ಡೋರ್‌ ಲಾಕನ್ನು ನಕಲಿ ಕೀಯಿಂದ ತೆಗೆದು ಕಳ್ಳರ ತಂಡ ಹೊಂಚುಹಾಕಿ ಮನೆಯೊಳಗೆ ಪ್ರವೇಶ ಮಾಡಿದ್ದಾರೆ. ಪಿಎಲ್‌ಆರ್ ಕಂಪನಿಯ ಲೆಕ್ಕಾಧಿಕಾರಿ ಅವಿನಾಶ್ ಬ್ಯಾಗಿನಲ್ಲಿ ಶೇಖರಣೆ ಮಾಡಿದ್ದ 35 ಲಕ್ಷ 20 ಸಾವಿರ ನಗದು ಹಣವನ್ನು ಕಳ್ಳರ ತಂಡ ಸಿನಿಮೀಯ ರೀತಿಯಲ್ಲಿ ದೋಚಿಕೊಂಡು ಪರಾರಿ ಆಗಿದೆ.

ಕೊರಟಗೆರೆ ಪಟ್ಟಣದ ಹೃದಯ ಭಾಗದಲ್ಲಿ ಶನಿವಾರ ನಡೆದಿರುವ ದೊಡ್ಡಮಟ್ಟದ ಕಳ್ಳತನದಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಸಿಸಿಟಿವಿ ಮತ್ತು ಮನೆಯ ಭದ್ರತೆಯ ಬಗ್ಗೆ ನಿರ್ಲಕ್ಷ ವಹಿಸಿರುವ ಅವಿನಾಶ್ ಮೇಲೆ ಪೊಲೀಸರಿಗೆ ಅನುಮಾನ ವ್ಯಕ್ತವಾಗಿದೆ. ಪೊಲೀಸರ ತಂಡ ಮನೆಯ ಭದ್ರತೆ ಮತ್ತು ಹೊರಗಡೆಯ ಸಿಸಿಟಿವಿಯ ದೃಶ್ಯಾವಳಿಯನ್ನು ಸಂಗ್ರಹಿಸಿ ತನಿಖೆ ಪ್ರಾರಂಭಿಸಿದ್ದಾರೆ.

ಕೊರಟಗೆರೆ ಪಟ್ಟಣದಲ್ಲಿ ಕಳ್ಳತನ ನಡೆದಿರುವ ಸ್ಥಳಕ್ಕೆ ಮಧುಗಿರಿ ಡಿವೈಎಸ್ಪಿ ವೆಂಕಟೇಶನಾಯ್ಡು, ಕೊರಟಗೆರೆ ಸಿಪಿಐ ಸುರೇಶ್, ತುಮಕೂರಿನ ಬೆರಳಚ್ಚು ತಜ್ಞರ ತಂಡ ಮತ್ತು ಶ್ವಾನದಳದ ಸಿಬ್ಬಂದಿವರ್ಗ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಕಳ್ಳತನದ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next