Advertisement

34 ಸಾವಿರ ರೂ. ಬರ ಪರಿಹಾರಕ್ಕೆ ಒತ್ತಾಯ: ಮಲ್ಲಿಕಾರ್ಜುನ ಬಳ್ಳಾರಿ

04:28 PM May 06, 2024 | Team Udayavani |

■ ಉದಯವಾಣಿ ಸಮಾಚಾರ
ಬ್ಯಾಡಗಿ: ಕೇಂದ್ರ ಮತ್ತು ರಾಜ್ಯ ಸರ್ಕಾರದ (ಎನ್‌ ಡಿಆರ್‌ಎಫ್‌ ಹಾಗೂ ಎಸ್‌ಡಿಆರ್‌ಎಫ್‌) ನಿಯಮದಂತೆ ರೈತರಿಗೆ 34 ಸಾವಿರ (2 ಹೆಕ್ಟೇರ್‌) ಬರ ಪರಿಹಾರ ಬರಬೇಕು. ಆದರೆ ಇದೀಗ ರಾಜ್ಯ ಸರ್ಕಾರ ಕೇವಲ ಪ್ರತಿ ಹೆಕ್ಟೇರ್‌ಗೆ ರೂ. 6500 ಸಾವಿರ ನೀಡಲು ಮುಂದಾಗಿದ್ದು, ರಾಜ್ಯದ ರೈತರಿಗೆ ಅನ್ಯಾಯವಾಗಿದೆ. ಕೂಡಲೇ 34 ಸಾವಿರ ರೂ. ಬಿಡುಗಡೆ ಮಾಡುವಂತೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಆಗ್ರಹಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಸರ್ಕಾರ ಕೇಂದ್ರದ ಅತೀವೃಷ್ಟಿ ಪರಿಹಾರದ ಜೊತೆಗೆ 4 ಸಾವಿರ ರೂ. ಸೇರಿಸಿ ನೀಡಿತ್ತು. ಆದರೆ ಅದನ್ನು ಕಸಿದುಕೊಂಡ ಪ್ರಸ್ತುತ ಸರ್ಕಾರ ಕೇವಲ 15 ಸಾವಿರ ನೀಡಲು ಮುಂದಾಗಿದೆ ಎಂದರು.

ರೈತರ ಬೇಡಿಕೆ ತಿರಸ್ಕೃತ: ಹಾವೇರಿಯಲ್ಲಿ ನಡೆದ ಜನತಾದರ್ಶನದಲ್ಲಿ ಸುಮಾರು 18 ಸಾವಿರಕ್ಕೂ ಹೆಚ್ಚು ಜನರು ಬರ ಪರಿಹಾರದ ಅರ್ಜಿಗಳನ್ನು ಸರ್ಕಾರಕ್ಕೆ ಸಲ್ಲಿಸಿದ್ದರೂ ಮುಖ್ಯಮಂತ್ರಿಗಳು ಬರ ಪರಿಹಾರ ನೀಡುವಂತೆ ಯಾರು ಅರ್ಜಿ
ಸಲ್ಲಿಸಿಲ್ಲವೆಂದು ಹೇಳಿಕೆ ನೀಡಿದ್ದು ಅಕ್ಷಮ್ಯ ಅಪರಾಧ ಮತ್ತು ಖಂಡನೀಯ. ಸಿದ್ಧರಾಮಯ್ಯ ಬಳಿ ರೈತರ ಪರವಾಗಿ ಬೇಡಿಕೆಯನ್ನಿಟ್ಟಿದ್ದು, ಹಾವೇರಿಗೆ ಬಂದಾಗ ನೇರವಾಗಿ ಮಾತನಾಡಿದ್ದೇವೆ. ಅಂದೂ ಸಹ ಪ್ರತಿ ಎಕರೆಗೆ ರೂ. 25 ಸಾವಿರ ಕೇಳಿದ್ದೇವೆ ಆದರೆ ಕೇವಲ ಕೇಂದ್ರದ ಬಿಡುಗಡೆ ಮಾಡಿದ 8500 ರಲ್ಲಿ ರೂ. 2 ಸಾವಿರ ಬಿಟ್ಟು 6500 ನೀಡಲಾಗುತ್ತಿದೆ ಎಂದು ಆರೋಪಿಸಿದರು.

ರಾಜ್ಯದ ಪಾಲೆಷ್ಟು?: ಎನ್‌ಡಿಆರ್‌ಎಫ್‌ ನಿಯಮದಂತೆ ಕೇಂದ್ರ ಸರ್ಕಾರವೇನೋ ತಮ್ಮ ಪಾಲಿನ ರೂ. 8500 ನೀಡಿದೆ. ಆದರೆ ರಾಜ್ಯ ಸರ್ಕಾರ ಮಾತ್ರ ತನ್ನ ಪಾಲಿನ ಹಣವೆಷ್ಟು ಎಂಬುದನ್ನು ಈವರೆಗೂ ತಿಳಿಸುತ್ತಿಲ್ಲ. ಬರದಿಂದ ರಾಜ್ಯದ ರೈತರು ತತ್ತರಿಸಿದ್ದಾರೆ. ಪ್ರತಿ ಹೆಕ್ಟೇರ್‌ಗೆ ಕೇಂದ್ರದಿಂದ ಎಸ್‌ ಡಿಆರ್‌ಎಫ್‌ 8500 ರೂ. ಬಿಡುಗಡೆ ಮಾಡಬೇಕು. ಆದರೆ ಇದೀಗ ಬಿಡುಗಡೆಯಾದ ಹಣದಲ್ಲಿ ಬರ ಪರಿಹಾರಕ್ಕಾಗಿ ಮೀಸಲಿಟ್ಟ ಹಣವೆಷ್ಟು ಎಂಬುದನ್ನು ಸ್ಪಷ್ಟಪಡಿಸುವಂತೆ ಆಗ್ರಹಿಸಿದರಲ್ಲದೇ ಎಸ್‌ಡಿಆರ್‌ ಎಫ್‌ 8500 ರೂ. ಪರಿಹಾರ ಮೊತ್ತವನ್ನು ರಾಜ್ಯ ಸರ್ಕಾರ ಇಂದಿಗೂ ಘೋಷಿಸದೇ ರೈತ ಕುಲಕ್ಕೆ  ಮೋಸ ಮಾಡುತ್ತಿದೆ ಎಂದು ಆರೋಪಿಸಿದರು. ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿದ ಬಳಿಕ ಈವರೆಗೂ ಯಾವುದೇ ಪರಿಹಾರ
ಘೋಷಣೆಯಾಗಿಲ್ಲ.

ಈ ಕುರಿತು ಸಂಘಟನೆ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ಸೇರಿದಂತೆ ಬಹುದೊಡ್ಡ ಹೋರಾಟ ನಡೆಸುವ
ಮೂಲಕ ರೈತರಿಗೆ ನ್ಯಾಯ ಕೊಡಿಸುವ ಪ್ರಾಮಾಣಿಕ ಪ್ರಯತ್ನ ನಡೆಸಿದೆ ಎಂದರು. ರುದ್ರನಗೌಡ್ರ ಕಾಡನಗೌಡ್ರ, ಮೌನೇಶ ಕಮ್ಮಾರ, ಕೆ.ವಿ. ದೊಡ್ಡಗೌಡರ, ಚಿಕ್ಕಪ್ಪ ಛತ್ರದ, ಮಲ್ಲೇಶಪ್ಪ ಡಂಬಳ, ಪ್ರಕಾಶ ಸಿದ್ದಪ್ಪನವರ ಸೇರಿದಂತೆ ಹಲವರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next