ಕೊರಟಗೆರೆ: ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರಿಗೆ ಗುಜರಾತ್‌ನ ಅಮೂಲ್ ಮಾದರಿ ನಿರ್ವಹಣೆ ಅರಿವು ಮೂಡಿಸಲು ಗುಜರಾತ್‌ಗೆ ಭೇಟಿ ನೀಡಲು ಜಿಲ್ಲೆಯಲ್ಲಿ 33 ಲಕ್ಷ ರೂ.ಮೀಸಲಿಡಲಾಗಿದೆ ಎಂದು ತುಮುಲ್ ಅಧ್ಯಕ್ಷ ಮಹಾಲಿಂಗಯ್ಯ ತಿಳಿಸಿದರು. ಪಟ್ಟಣದಲ್ಲಿ ತುಮಕೂರು ಸಹಕಾರಿ ಹಾಲು ಒಕ್ಕೂಟ ನಿಯಮಿತ ಅಡಿಯಲ್ಲಿ ತಾಲೂಕಿನ 45 ಹಾಲು ಉತ್ಪಾದಕ ಸಂಘದ ಅಧ್ಯಕ್ಷರಿಗೆ ಗುಜರಾತ್ ಪ್ರವಾಸಕ್ಕೆ ಚಾಲನೆ ನೀಡಿ ಮಾತನಾಡಿದರು.
ಗುಣಮಟ್ಟಕ್ಕೆ ತಕ್ಕಂತೆ ಬೆಲೆ: ಅಮೂಲ್‌ನಲ್ಲಿ ಸಂಘಗಳ ರಚನೆ, ಲೆಕ್ಕಪತ್ರ ನಿರ್ವಹಣೆ, ಡೇರಿಗಳಿಗೆ ಹಾಲು ಹಾಕಿದ ತಕ್ಷಣ ಹಣ ನೀಡುವುದು, ಪಶು ಆಹಾರ ದಾಸ್ತಾನು, ಹಾಲಿನ ಗುಣಮಟ್ಟಕ್ಕೆ ತಕ್ಕಂತೆ ಬೆಲೆ ನಿಗದಿ ಅಚ್ಚುಕಟ್ಟಾಗಿ ನಡೆಯುತ್ತಿದೆ. ಅದರಂತೆ ಜಿಲ್ಲೆಯ ಹಾಲು ಒಕ್ಕೂಟಗಳು ಶಿಸ್ತುಬದ್ಧವಾಗಿ ನಡೆಯಲು ಗುಜರಾತ್‌ಗೆ ಸಂಘದ ಅಧ್ಯಕ್ಷರನ್ನು ತರಬೇತಿಗೆ ಕಳುಹಿಸಲಾಗುತ್ತಿದೆ.
ಅಧ್ಯಕ್ಷರು ತರಬೇತಿ ಸದುಪಯೋಗಪಡಿಸಿಕೊಳ್ಳಬೇಕು. ಇದಕ್ಕಾಗಿ 33 ಲಕ್ಷ ರೂ. ಜಿಲ್ಲಾ ಒಕ್ಕೂಟದಲ್ಲಿ ಮೀಸಲಿಡಲಾಗಿದೆ. ರೈತರು ಇತ್ತೀಚೆಗೆ ಹೈನುಗಾರಿಕೆ ಹೆಚ್ಚು ಅವಲಂಬಿಸಿದ್ದಾರೆ. ಅದಕ್ಕಾಗಿ ಉತ್ಪಾದಕರು ಹಾಕುವ ಹಾಲಿನ ಬೆಲೆ ಒಕ್ಕೂಟ ಹೆಚ್ಚಿಸುತ್ತ ಬಂದಿದ್ದು, ಪ್ರಸ್ತುತ 29 ರೂ. 33 ಪೈಸೆ ಹಾಗೂ ಸರ್ಕಾರದ 5 ರೂ. ಸೇರಿ 34 ರೂ. 33 ಪೈಸೆ ನೀಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಪ್ರತಿ ಸಂಘದಲ್ಲೂ ಹಸು ಮತ್ತು ಎಮ್ಮೆ ಹಾಲುಗಳಿಗೆ ಗುಣಮಟ್ಟ ಮತ್ತು ಕೊಬ್ಬಿನ ಆಧಾರದ ಮೇಲೆ ಬೆಲೆ ನೀಡುವ ಕೆಲಸ ಮಾಡಲಾಗುವುದು.
ತುಮಕೂರು ಹಾಲು ಒಕ್ಕೂಟದಲ್ಲಿ ಶೇಖರಣೆಯಾದ ಹಾಲು ತುಮಕೂರಿನಲ್ಲಿ 1 ಲಕ್ಷ, ಬೆಂಗಳೂರಿನಲ್ಲಿ 1.50 ಲಕ್ಷ, ಮುಂಬೈ 2 ಲಕ್ಷ, ಜಮ್ಮು ಕಾಶ್ಮೀರದಲ್ಲಿ 30 ಸಾವಿರ ಲೀಟರ್ ವ್ಯಾಪಾರ ಮಾಡಲಾಗುತ್ತಿದೆ. 60 ಸಾವಿರ ಲೀಟರ್ ಮೊಸರು ಮತ್ತು ನಂದಿನಿ ಉತ್ಪನ್ನಗಳಿಗೆ ಬಳಸುತ್ತಿದ್ದೇವೆ. ಆದರೆ ಗುಣಮಟ್ಟದ ಹಾಲು ನೀಡುವುದು ರೈತರ ಕರ್ತವ್ಯ. ಆಗ ಮಾರುಕಟ್ಟೆ ಉತ್ತಮವಾಗಿರುತ್ತದೆ ಎಂದರು.
6 ದಿನ ಪ್ರವಾಸ: ತುಮುಲ್‌ನ ಕೊರಟಗೆರೆ ತಾಲೂಕು ನಿರ್ದೇಶಕ ಈಶ್ವರಯ್ಯ ಮಾತನಾಡಿ, ತಾಲೂಕಿನಲ್ಲಿ ಹಾಲು ಉತ್ಪಾದಕ ಸಂಘ ಉತ್ತಮಗೊಳಿಸಲು ಈ ಪ್ರವಾಸ ಏರ್ಪಡಿಸಿದ್ದು, ಈ ಹಿಂದೆ ಜಿಲ್ಲೆಯಿಂದ ತಾಲೂಕಿಗೆ 5 ಅಧ್ಯಕ್ಷರುಗಳಿಗೆ ತರಬೇತಿ ನೀಡಲಾಗುತಿತ್ತು. ಆದರೆ ಈಗ ಪ್ರತಿ ತಾಲೂಕಿನ ಎಲ್ಲಾ ಅಧ್ಯಕ್ಷರಿಗೆ 6 ದಿನ ಗುಜರಾತ್ ಪ್ರವಾಸ ಮಾಡುವ ಅವಕಾಶವಿದೆ. ಅದಕ್ಕಾಗಿ ವಿಶೇಷ ಅನುದಾನ ಮೀಸಲಿಟ್ಟಿದೆ.
ತರಬೇತುದಾರರು ತರಬೇತಿ ನಂತರ ಅದನ್ನು ಸಂಘಗಳಲ್ಲಿ ಜಾರಿಗೆ ತಂದರೆ ಪ್ರವಾಸವೂ ಯಶಸ್ವಿಯಾಗುತ್ತದೆ. ಸಂಘಗಳು ಅಭಿವೃದ್ಧಿಗೊಳ್ಳುತ್ತದೆ. ಅಮೂಲ್ ತರಬೇತಿ ಮುಗಿದ ನಂತರ ಕೂಡಲ ಸಂಗಮ, ಬಿಜಾಪುರ, ಪಂಡರಾಪುರ, ಶಿರಡಿ, ಶನಿಸಿಂಗಾಪುರ, ಗಣೇಶ್ ಪುರಿ, ಮುಂಬೈ, ಕೋಲ್ಲಾಪುರ ಸೇರಿ ಇನ್ನಿತರ ಪ್ರವಾಸಿ ಕೇಂದ್ರಗಳ ವೀಕ್ಷಣೆ ಮಾಡಿಸಲಾಗುವುದು ಎಂದು ತಿಳಿಸಿದರು. ಅಧಿಕಾರಿಗಳಾದ ದೇವರಾಜು, ರಂಜಿತ್, ನಾಯಕ್, ಗಿರೀಶ್ ಇತರರಿದ್ದರು.
ಜಿಲ್ಲಾ ಒಕ್ಕೂಟ ಪ್ರಸ್ತುತ 1.4 ಲಕ್ಷ ರಾಸುಗಳಿಗೆ ವಿಮೆ ಮಾಡಿಸಿದ್ದು, ಇದರಲ್ಲಿ ಒಕ್ಕೂಟ ಶೇ.80 ವಿಮಾ ಹಣ ಭರಿಸುತ್ತಿದೆ. ಶೇ.20 ರೈತರು ನೀಡುತ್ತಿದ್ದಾರೆ. ಬೇಸಿಗೆಗಾಲದಲ್ಲಿ ತಿಂಗಳಿಗೆ 100 ರಾಸುಗಳು ಸಾಯುತ್ತಿದ್ದು, ಅವುಗಳಿಗೆ ವಿಮೆ ಆಶ್ರಯವಾಗಿದೆ. ಹಾಲು ಉತ್ಪಾದಕರ ಮಕ್ಕಳ ಉನ್ನತ ವಿದ್ಯಾಬ್ಯಾಸಕ್ಕೆ ವೈದ್ಯಕೀಯ ಶಿಕ್ಷಣಕ್ಕೆ 25 ಸಾವಿರ ರೂ., ಇಂಜಿನಿಯರಿಂಗ್, ಬಿ.ಎಸ್‌ಸಿ ಎ.ಜಿ, ಡೇರಿ ಟೆಕ್ನಾಲಜಿ ವಿದ್ಯಾರ್ಥಿಗಳಿಗೆ 10 ಸಾವಿರ ವಾರ್ಷಿಕವಾಗಿ ವಿದ್ಯಾರ್ಥಿ ವೇತನ ನೀಡುತ್ತಿದ್ದೇವೆ.
-ಮಹಾಲಿಂಗಯ್ಯ, ತುಮುಲ್ ಅಧ್ಯಕ್ಷ