Advertisement

ಕೊಡಗು ಮಳೆಗೆ 329 ಕೋ. ರೂ. ಆಸ್ತಿಪಾಸ್ತಿ ಹಾನಿ: ಸಿಎಂ ಕುಮಾರಸ್ವಾಮಿ

07:00 AM Jul 21, 2018 | |

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳ ಕಾಲ ಸುರಿದ ಧಾರಾಕಾರ ಮಳೆಗೆ ಸುಮಾರು 329 ಕೋಟಿ ರೂ.ಗಳಷ್ಟು ಮೌಲ್ಯದ ಆಸ್ತಿಪಾಸ್ತಿ ಹಾನಿಯಾಗಿದ್ದು, ಮೊದಲ ಹಂತದಲ್ಲಿ 100 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರ ಸ್ವಾಮಿ ಘೋಷಿಸಿದ್ದಾರೆ.

Advertisement

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಳೆ ಹಾನಿ ಮತ್ತು ಪ್ರಗತಿ ಪರಿಶೀಲನಾ ಸಭೆ ನಡೆಸಿದ ಮುಖ್ಯಮಂತ್ರಿಗಳು ಅಧಿಕಾರಿಗಳಿಂದ ಜಿಲ್ಲೆಯ ಆಗು ಹೋಗುಗಳ ಬಗ್ಗೆ ಸಮಗ್ರ ಮಾಹಿತಿ ಪಡೆದರು.

ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡಗನ್ನು ಎಂದಿಗೂ ಸರ್ಕಾರ ಕಡೆಗಣಿಸಿಲ್ಲ. ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಜಿಲ್ಲೆಯ ಜನತೆ ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬಾರದೆಂದು ತಿಳಿಸಿದರು. ಮಳೆೆ ಹಾನಿ ಪರಿಹಾರವಾಗಿ ಮೊದಲ ಹಂತದಲ್ಲಿ 100 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು.ಗಾಳಿ ಮಳೆಯಿಂದ ಮನೆ ಕಳೆದುಕೊಂಡವರಿಗೆ ಇಲ್ಲಿಯವರೆಗೆ ಕೇವಲ 5 ಸಾವಿರ ರೂ. ಪರಿಹಾರವಾಗಿ ನೀಡಲಾಗುತ್ತಿತ್ತು. ಆದರೆ, ಇನ್ನು ಮುಂದೆ ಮನೆ ಸಂಪೂರ್ಣವಾಗಿ ನಾಶವಾದರೆ ಅದರ ಮಾಲಕರಿಗೆ 95 ಸಾವಿರ ರೂ. ಪರಿಹಾರಧನ ಮತ್ತು ಆಶ್ರಯ ಮನೆ ನಿರ್ಮಿಸಿಕೊಡಲಾಗುವುದೆಂದು ಮುಖ್ಯಮಂತ್ರಿಗಳು ಇದೇ ಸಂದರ್ಭ ತಿಳಿಸಿದರು.

ಜಲಾವೃತಗೊಂಡು ಭತ್ತದ ಕೃಷಿ ನಾಶವಾಗಿ ನಷ್ಟ ಅನುಭವಿಸುತ್ತಿರುವ ಕೃಷಿಕರಿಗೆ ಉಚಿತವಾಗಿ ಬಿತ್ತನೆ ಬೀಜ ವಿತರಿಸಲಾಗುವುದು. ಹಾನಿಗೊಳಗಾಗಿರುವ ಲೋಕೋಪಯೋಗಿ ಇಲಾಖೆಯ ರಸ್ತೆಗಳ ದುರಸ್ತಿಗೆ ಅಗತ್ಯವಿರುವ ಕ್ರಿಯಾಯೋಜನೆ ಮತ್ತು ಟೆಂಡರ್‌ ಪ್ರಕ್ರಿಯೆಯನ್ನು ಮುಂದಿನ 15 ದಿನಗಳ ಒಳಗೆ ಪೂರ್ಣಗೊಳಿಸುವಂತೆ ಈಗಾಗ‌ಲೆ ಲೋಕೋಪಯೋಗಿ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಮುಖ್ಯ ಮಂತ್ರಿಗಳು ತಿಳಿಸಿದರು.ಕಾಫಿ ಬೆಳೆೆ ಹಾನಿಯ ವರದಿಯನ್ನು ತಯಾರಿಸಲು ಕಾಫಿ ಮಂಡಳಿ ಕನಿಷ್ಠ ಒಮದು ತಿಂಗಳ ಕಾಲಾವಕಾಶ ಕೋರಿ ದ್ದಾರೆಂದು ಅವರು ಇದೇ ಸಂದರ್ಭ ತಿಳಿಸಿದರು. 

ಲೋಕೋಪಯೋಗಿ ಇಲಾಖಾ ವ್ಯಾಪ್ತಿಯಲ್ಲಿ 139 ಕೋಟಿ ರೂ.ಗಳಷ್ಟು ನಷ್ಟ ಸಂಭವಿಸಿದ್ದು, ಮೊದಲ ಹಂತದಲ್ಲಿ 12 ಕೊಟಿ ರೂ.ಗಳಿಗೆ ಕೋರಿಕೆ ಇದೆ. ಜಿಲ್ಲಾ ಪಂಚಾಯ್ತಿ 48 ಕೋಟಿ ರೂ.ಗಳ ಬೇಡಿಕೆಯನ್ನಿಟ್ಟಿದ್ದಾರೆ. ಹೀಗೆ ಒಟ್ಟು ಜಿಲ್ಲಾ ವ್ಯಾಪ್ತಿಯಲ್ಲಿ ಅತಿವೃಷ್ಟಿಯಿಂದಾಗಿ 329 ಕೋಟಿ ರೂ.ಗಳಷ್ಟು ನಷ್ಟವಾಗಿದೆ ಎನ್ನುವ ವರದಿ ಬಂದಿದ್ದು, ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸಲಿದೆಯೆಂದು ಮುಖ್ಯ ಮಂತ್ರಿಗಳು ಭರವಸೆ ನೀಡಿದರು.

Advertisement

ಜಿಲ್ಲೆಯಲ್ಲಿ ಸುಮಾರು 2 ಸಾವಿರ ವಿದ್ಯುತ್‌ ಕಂಬಗಳು ನಾಶವಾಗಿದ್ದು, ನೆರೆಯ ಹಾಸನ ಮತ್ತು ಮೈಸೂರು ಜಿಲ್ಲೆಗಳಿಂದ ತಾತ್ಕಾಲಿಕವಾಗಿ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಿ ಸರಿಪಡಿಸುವ ಮೂಲಕ ವಿದ್ಯುತ್ಛಕ್ತಿ ಸಂಪರ್ಕವನ್ನು ತ್ವರಿತಗತಿಯಲ್ಲಿ ನೀಡಲಾಗುವುದೆಂದರು. ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಸಾಕಷ್ಟು ಸಂಕಷ್ಟ ಎದುರಾಗಿದ್ದು, ಇದನ್ನು ಖುದ್ದು ಪರಿಶೀಲಿಸುವುದಕ್ಕಾಗಿ ನಾನು ಕೊಡಗಿಗೆ ಆಗಮಿಸಿದ್ದೇನೆ. ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಧ್ಯದಲ್ಲೆ ಜಿಲ್ಲೆಯ ಶಾಸಕರು ಹಾಗೂ ಅಧಿಕಾರಿಗಳ ವಿಶೇಷ ಸಭೆಯನ್ನು ನಡೆಸುವುದಾಗಿ ತಿಳಿಸಿದ ಮುಖ್ಯಮಂತ್ರಿಗಳು ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಈ ಸಂದರ್ಭ ಉಪಸ್ಥಿತರಿದ್ದ ಶಾಸಕ ಕೆ.ಜಿ.ಬೋಪಯ್ಯ ಅವರು, ಜಿಲ್ಲೆಗೆ ಉಳಿದ ಪರಿಹಾರದ ಮೊತ್ತವನ್ನು ಶೀಘ್ರ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next