Advertisement

Nutrition Food ಫ‌ಲಾನುಭವಿಗಳ ಕೈಸೇರದ ಪೌಷ್ಟಿಕ ಆಹಾರ; ಕೊರಗ,ಮಲೆಕುಡಿಯ ಸಮುದಾಯದವರ ಸಂಕಷ್ಟ

11:16 PM Sep 24, 2023 | Team Udayavani |

ಉಡುಪಿ: ರಾಜ್ಯದ ಎಂಟು ಜಿಲ್ಲೆ ಸಹಿತ ಅವಿಭಜಿತ ದಕ್ಷಿಣ ಕನ್ನಡದಲ್ಲಿ ವಾಸವಾಗಿರುವ ಮೂಲ ನಿವಾಸಿ ಕೊರಗ ಮತ್ತು ಮಲೆಕುಡಿಯ ಸಮುದಾಯ ಕುಟುಂಬಗಳಿಗೆ ರಾಜ್ಯ ಸರಕಾರದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ (ಐಟಿಡಿಪಿ)ಯ ಮೂಲಕ ನೀಡುವ 2022-23ನೇ ಸಾಲಿನ ಪೌಷ್ಟಿಕ ಆಹಾರ ಸಾಮಗ್ರಿ ಇನ್ನೂ ಪೂರೈಕೆಯಾಗಿಲ್ಲ.

Advertisement

ಕೊರಗ ಮತ್ತು ಮಲೆಕುಡಿಯ ಸಮುದಾಯದ ಕುಟುಂಬಗಳಿಗೆ ಐಟಿಡಿಪಿಯು ಜುಲೈಯಿಂದ ಡಿಸೆಂಬರ್‌ ತನಕ 6 ಬಾರಿ ಪೌಷ್ಟಿಕ ಆಹಾರ ಒದಗಿಸುವ ಯೋಜನೆ 2008ರಿಂದ ಜಾರಿಯಲ್ಲಿದೆ. ಆ ಪ್ರಕಾರ ಪ್ರಥಮ ಕಿಟ್‌ ಗಳನ್ನು ಜುಲೈಯಲ್ಲಿ ನೀಡಬೇಕಿತ್ತು. ಆದರೆ ಈಗ ಸೆಪ್ಟಂಬರ್‌ ಕಳೆಯುತ್ತಿದ್ದರೂ ಸಾಮಗ್ರಿ ಫ‌ಲಾನುಭವಿಗಳ ಕೈ ಸೇರಿಲ್ಲ.

ಸರಬರಾಜು ಹೇಗೆ?
ಇಲಾಖೆಯ ನಿಯಮ ಪ್ರಕಾರ ಆಯಾ ತಿಂಗಳ 5ರಿಂದ 20ನೇ ದಿನಾಂಕದೊಳಗೆ ಆಹಾರ ಕಿಟ್‌ಗಳನ್ನು ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ಅವರ ಸಮಿತಿ ಪರಿಶೀಲಿಸಿದ ಬಳಿಕ ಅಂಗನವಾಡಿ ಕೇಂದ್ರಗಳಿಗೆ ಪೂರೈಕೆಯಾಗಿ ಫ‌ಲಾನುಭವಿಗಳಿಗೆ ನೀಡಬೇಕು. ಆದರೆ ಜುಲೈ ತಿಂಗಳ ಸಾಮಗ್ರಿಯೇ ಇನ್ನೂ ಬಿಡುಗಡೆಯಾಗದೆ ಫ‌ಲಾನುಭವಿಗಳು ತೊಂದರೆ ಅನುಭವಿಸುತ್ತಿದ್ದಾರೆ.

ಕಿಟ್‌ನಲ್ಲಿ ಏನಿರುತ್ತದೆ?
16 ಕೆಜಿ ಕುಚ್ಚಿಲು ಅಕ್ಕಿ, 2 ಕೆಜಿ ತೊಗರಿ ಬೇಳೆ, ತಲಾ ಒಂದು ಕೆಜಿ ಕಡಲೆಕಾಳು, ಶೇಂಗಾ ಬೀಜ, ಅಲಸಂಡೆ ಕಾಳು, ಹುರುಳಿ ಕಾಳು, ಹೆಸರು ಕಾಳು, ಸಕ್ಕರೆ, ಬೆಲ್ಲ, 30 ಮೊಟ್ಟೆ, 1 ಲೀ. ಅಡುಗೆ ಎಣ್ಣೆ, ಅರ್ಧ ಕೆಜಿ ನಂದಿನಿ ತುಪ್ಪ ಕಿಟ್‌ನಲ್ಲಿರುತ್ತದೆ. ಇದನ್ನು ಫ‌ಲಾನುಭವಿಗಳಿಗೆ ತಲುಪಿಸುವ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರಿಗೆ ಒಂದು ಕುಟುಂಬಕ್ಕೆ 10 ರೂ.ನಂತೆ ಸಂಭಾವನೆ ಐಟಿಡಿಪಿ ಕಚೇರಿಯಿಂದ ಪಾವತಿಯಾಗುತ್ತದೆ.

ಕುಲಕಸುಬಿನಿಂದಲೇ ಜೀವನ
ರಾಜ್ಯದ ಉಡುಪಿ, ದ.ಕ., ಕಾರವಾರ, ಚಿಕ್ಕಮಗಳೂರು, ಮೈಸೂರು, ಚಾಮರಾಜ ನಗರ, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗ ಳಲ್ಲಿ ಮಾತ್ರ ಈ ಸಮುದಾಯಗಳಿವೆ.

Advertisement

ಉಡುಪಿಯಲ್ಲಿ 3,200 ಹಾಗೂ ದ.ಕ.ದಲ್ಲಿ 2,968 ಫ‌ಲಾನುಭವಿಗಳಿದ್ದಾರೆ. ಶೇ. 70ರಷ್ಟು ಮಂದಿ ಈಗಲೂ ಕುಲಕಸುಬು ಮಾಡಿಕೊಂಡೇ ಜೀವಿ ಸುತ್ತಿದ್ದಾರೆ. ಮಳೆಗಾಲದಲ್ಲಿ ಅವರಿಗೆ ಉದ್ಯೋಗ ಕಡಿಮೆ. ಸರಕಾರ ನೀಡುವ ಆಹಾರ ಸಾಮಗ್ರಿಯನ್ನೇ ನಂಬಿಕೊಂಡು ಹಲವಾರು ಕುಟುಂಬಗಳು ದಿನದೂಡುತ್ತಿವೆ. ಆದರೆ ಆಹಾರ ಸಾಮಗ್ರಿ ಬಾರದೆ ಬಡಕುಟುಂಬಗಳು ಸಂಕಷ್ಟಕ್ಕೊಳಗಾಗಿವೆ.

ರಾಜ್ಯದ ಸರಕಾರಿ
ಅಂಗಸಂಸ್ಥೆಯ ಮೂಲಕವೇ ಎಲ್ಲರಿಗೂ ವಿತರಿಸಲು ಉದ್ದೇಶಿಸಲಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದಾಗಿ ವಿತರಣೆ ವಿಳಂಬವಾಗಿದೆ. ಈ ಬಗ್ಗೆ ಸರಕಾರದ ಗಮನಕ್ಕೆ ತರಲಾಗಿದ್ದು, ಶೀಘ್ರ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ.
-ದೂದ್‌ಪೀರ್‌,
ಯೋಜನಾ ಸಮನ್ವಯಾಧಿಕಾರಿ,
ಐಟಿಡಿಪಿ, ಉಡುಪಿ

– ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next