Advertisement

ವರ್ಷಕ್ಕೆ 32 ಕೋಟಿ ಸ್ಮಾರ್ಟ್‌ಫೋನ್‌ ಬಳಕೆದಾರರ ಹೆಚ್ಚಳ..!

10:39 AM Nov 18, 2021 | Team Udayavani |

ಬೆಂಗಳೂರು: ಕೇವಲ ಒಂದು ವರ್ಷದ ಅಂತರದಲ್ಲಿ ದೇಶದಲ್ಲಿ ಸ್ಮಾರ್ಟ್‌ಫೋನ್‌ ಬಳಕೆದಾರರ ಸಂಖ್ಯೆ ಸುಮಾರು 32 ಕೋಟಿ ಹೆಚ್ಚಾಗಿದೆ! ಹೌದು, 2020ರಲ್ಲಿ ದೇಶದಲ್ಲಿ ಸ್ಮಾರ್ಟ್‌ಫೋನ್‌ ಬಳಕೆದಾರರು 50 ಕೋಟಿ ಇದ್ದರು. ಈಗ ಅದು 82 ಕೋಟಿಗೆ ಏರಿಕೆಯಾಗಿದೆ ಎಂದು ಕಿಂಡ್ರೆಲ್‌ ಕಂಪನಿ ಸಿಇಒ ಮಾರ್ಟಿನ್‌ ಶ್ರೋಟರ್‌ ಮಾಹಿತಿ ನೀಡಿದರು.

Advertisement

3 ದಿನಗಳ ಬೆಂಗಳೂರು ಟೆಕ್‌ ಸಮಿಟ್‌ನಲ್ಲಿ ಬುಧವಾರ “ವಿದ್ವತ್‌ ಗೋಷ್ಠಿ’ಯಲ್ಲಿ ಮಾತನಾಡಿ, ಕೋವಿಡ್‌ ನಂತರ ಜಗತ್ತಿನ ಡಿಜಿಟಲ್‌ ಆರ್ಥಿಕ ವ್ಯವಸ್ಥೆಯು ಬಹುದೊಡ್ಡ ಸ್ಥಿತ್ಯಂತರವನ್ನು ಕಂಡಿದ್ದು, ಭಾರತದಲ್ಲೇ ನೂರು ಕೋಟಿ ವ್ಯವಹಾರ ನಡೆಸಲು ಸಾಧ್ಯವಾಗಿದೆ. ಇದೆಲ್ಲವೂ ತಂತ್ರಜ್ಞಾನದ ಫ‌ಲ.

ಇದೇ ಕೊರೊನಾ ಮಹಾಮಾರಿ ಅವಧಿಯಲ್ಲಿ ಸ್ಮಾರ್ಟ್‌ಫೋನ್‌ ಬಳಕೆದಾರರ ಸಂಖ್ಯೆಯೂ ಹೆಚ್ಚಾಗಿದೆ. ವರ್ಷದ ಅವಧಿಯಲ್ಲಿ 320 ದಶಲಕ್ಷ ಬಳಕೆದಾರರು ಸೇರ್ಪಡೆಯಾಗಿದ್ದಾರೆ ಎಂದರು. “ಭವಿಷ್ಯದ ಸದೃಢತೆಗೆ ಸಂಶೋಧನೆಯಲ್ಲಿ ಹೂಡಿಕೆ’: ಕಡಿಮೆ ದರದಲ್ಲಿ ದೊರಕುವ ಉದ್ಯೋಗಿಗಳಿಂದ ಆರ್ಥಿಕತೆ ಬೆಳೆಯುವುದಿಲ್ಲ; ಬದಲಿಗೆ ತಂತ್ರಜ್ಞಾನ ಮತ್ತು ಸಂಶೋಧನೆಗಳಲ್ಲಿ ಹೆಚ್ಚು ಹೂಡಿಕೆಯಿಂದ ಮಾತ್ರ ಭವಿಷ್ಯ ಸದೃಢವಾಗಿರಲಿದೆ ಎಂದು ನೊಬೆಲ್‌ ಪುರಸ್ಕೃತ ವಿಜ್ಞಾನಿ ವೆಂಕಿ ರಾಮಕೃಷ್ಣನ್‌ ಪ್ರತಿಪಾದಿಸಿದರು.

ಭಾರತದಲ್ಲಿ ಸಂಶೋಧನಾ ಕ್ಷೇತ್ರದಲ್ಲಿ ದೇಶದ ಆಂತರಿಕ ವೃದ್ಧಿ ದರ (ಜಿಡಿಪಿ)ಯ ಕೇವಲ ಶೇ. 0.8 ಹೂಡಿಕೆಯಾಗುತ್ತಿದೆ. ಇದು ಕೊರಿಯಾ, ಜಪಾನ್‌ ಮತ್ತಿತರ ದೇಶಗಳಿಗೆ ಹೋಲಿಸಿದರೆ, ಶೇ. 25ಕ್ಕಿಂತ ಕಡಿಮೆ. ತಂತ್ರಜ್ಞಾನ ಮತ್ತು ಸಂಶೋಧನೆಗಳಲ್ಲಿ ಹೆಚ್ಚು ಹೂಡಿಕೆ ಮಾಡಿದಲ್ಲಿ ಮಾತ್ರ ಭವಿಷ್ಯ ಸದೃಢ ಆಗಿರಲಿದೆ ಎಂದರು.

ಇದನ್ನೂ ಓದಿ:- ಟಿ20 ಪಂದ್ಯದ ವೇಳೆ ಸಿರಾಜ್ ತಲೆಗೆ ಹೊಡೆದ ನಾಯಕ ರೋಹಿತ್: ವಿಡಿಯೋ ವೈರಲ್

Advertisement

ಸುಸ್ಥಿರ ಅಭಿವೃದ್ಧಿ ಹೆಚ್ಚಿಸುವ ಕ್ಷೇತ್ರಗಳಲ್ಲಿ ಸಂಶೋಧನೆಗಳನ್ನು ನಡೆಸುವ ಸಾಧ್ಯತೆಗಳು ಹೆಚ್ಚಬೇಕು ಎಂದ ಅವರು, ಆಹಾರ ಭದ್ರತೆ, ಸುಸ್ಥಿರ ಇಂಧನ ಮತ್ತು ಆರೋಗ್ಯ ಕ್ಷೇತ್ರಗಳ ಅಭಿವೃದ್ಧಿಗಾಗಿ ನಿರಂತರ ಅಧ್ಯಯನ ಮತ್ತು ಸಂಶೋಧನೆಗಳು ನಡೆಯುವುದು ಅತ್ಯವಶ್ಯಕ. ಗೂಗಲ್, ಮೈಕ್ರೋಸಾಫ್ಟ್ ನಂತಹ ಖಾಸಗಿ ಸಂಸ್ಥೆಗಳು ಸಹ ಸಂಶೋಧನಾ ಕ್ಷೇತ್ರದಲ್ಲಿ ಹೂಡಿಕೆ ಮಾಡುತ್ತಿವೆ ಎಂದರು. ಬಯೋಕಾನ್‌ ಸಂಸ್ಥಾಪಕಿ ಕಿರಣ್‌ ಮಜುಂದಾರ್‌ ಷಾ ಇದ್ದರು.‌

 ಬೆಂಗಳೂರಿನ ಜತೆ ಅಮೆರಿಕದ ಗಾಢ ಬಾಂಧವ್ಯ

“ಜಾಗತಿಕ ಮಟ್ಟದಲ್ಲಿ ಹೂಡಿಕೆಯ ಸ್ವರ್ಗವೆನಿಸಿರುವ ನಗರಳಲ್ಲೊಂದಾಗಿ ಗುರುತಿಸಿಕೊಂಡಿರುವ ಬೆಂಗಳೂರಿನೊಂದಿಗೆ ಅಮೆರಿಕದ ಬಾಂಧವ್ಯ ಗಾಢವಾಗಿದೆ” ಎಂದು ಅಮೆರಿಕದ ರಾಜತಾಂತ್ರಿಕ ಅಧಿಕಾರಿ ಜುಡಿತ್‌ ರವಿನ್ಸ್‌ ತಿಳಿಸಿದ್ದಾರೆ. ಟೆಕ್‌ ಸಮ್ಮೇಳನದಲ್ಲಿ ಮಾತನಾಡಿದ ಅವರು, “ಅಮೆರಿಕದ ಕಂಪನಿಗಳು, ವಿಶ್ವದ ಯಾವುದೇ ನಗರಗಳಿಗೆ ಹೋದರೂ ಸ್ನೇಹಮಯ ಪಾಲುದಾರರಾಗಿಯೇ ಹೋಗುತ್ತವೆ. ಹಾಗೆಯೇ ಬೆಂಗಳೂರಿಗೂ ಅಮೆರಿಕದ ಕಂಪನಿಗಳು ಬಂದಿವೆ. ಬೆಂಗಳೂರಿನಲ್ಲಿ 650 ಕಂಪನಿಗಳು ತಳವೂರಿದ್ದು, ಆ ಮೂಲಕ ಭಾರತದೊಂದಿಗೆ ಅಮೆರಿಕವು ವಾಣಿಜ್ಯಕ ಬಾಂಧವ್ಯವೇ ಸೃಷ್ಟಿಯಾಗಿದೆ. ಈ ಬಾಂಧವ್ಯ 2022ರ ಆದಿಯಲ್ಲಿ ಮತ್ತಷ್ಟು ಮೇಲ್ಪಂಕ್ತಿಗೆ ಬಂದು ಊಹೆಗೂ ನಿಲುಕದಷ್ಟು ಅಭಿವೃದ್ಧಿಹೊಂದುವ ವಿಶ್ವಾಸವಿದೆ” ಎಂದು ಆಶಿಸಿದ್ದಾರೆ.

ಹಲವು ದಶಕಗಳಿಂದಲೂ ಅಮೆರಿಕವು, ಭಾರತದ ಪ್ರಮುಖ ವಾಣಿಜ್ಯ ಪಾಲುದಾರನಾಗಿ ಗುರುತಿಸಿಕೊಂಡಿದೆ. 2019ರಲ್ಲಿ ಎರಡೂ ದೇಶಗಳ ನಡುವೆ 10 ಲಕ್ಷ ಕೋಟಿ ರೂ.ಗಳಷ್ಟು ವಾಣಿಜ್ಯ ವ್ಯವಹಾರಗಳು ನಡೆದಿವೆ. 2020 ಹಾಗೂ 2021ರಲ್ಲಿ ಕೊರೊನಾದಿಂದ ಈ ವ್ಯವಹಾರಕ್ಕೆ ಕೊಂಚ ತೊಂದರೆಯಾಗಿದ್ದರೂ, ಗಣನೀಯ ಮಟ್ಟಕ್ಕೆ ಕುಸಿತವಾಗಿಲ್ಲ. ಈಗ, 2021ರಲ್ಲಿ ಭಾರತ, ಅಮೆರಿಕದ ಆರ್ಥಿಕ ಪರಿಸ್ಥಿತಿ ಚೇತರಿಸಿಕೊಳ್ಳುತ್ತಿರುವುದರಿಂದ ಎರಡೂ ದೇಶಗಳ ನಡುವಿನ ವ್ಯವಹಾರವು ಮತ್ತಷ್ಟು ಉತ್ತಮವಾಗುವ ಸಾಧ್ಯತೆಯಿದೆ” ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next