Advertisement

ಒಂದು ವರ್ಷದಲ್ಲಿ 319 ಶಿಶುಗಳ ಮರಣ!

09:44 PM Jan 18, 2020 | Team Udayavani |

ತುಮಕೂರು: ಸರ್ಕಾರಿ ಆಸ್ಪತ್ರೆಗಳಿಗೆ ಸೌಲಭ್ಯ ನೀಡಿದರೂ ಹೆರಿಗೆ ಪ್ರಮಾಣ ಕಡಿಮೆಯಾಗುತ್ತಿದೆ. ಬಡವರು ಖಾಸಗಿ ಆಸ್ಪತ್ರೆಗೆ ಹೋಗಿ ಎನ್ನುತ್ತೀರಿ. ಮೊದಲು ನೀವು ಜಾಗ ಖಾಲಿ ಮಾಡಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚಂದ್ರಿಕಾ ಅವರಿಗೆ ಸಚಿವ ಜೆ.ಸಿ.ಮಾಧುಸ್ವಾಮಿ ಸೂಚಿಸಿದರು.

Advertisement

ಜಿಪಂ ಸಭಾಂಗಣದಲ್ಲಿ ಶನಿವಾರ ನಡೆದ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿ, ಶಿಶುಮರಣ ತಡೆಗಟ್ಟಲು ಕೇಂದ್ರ, ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿವೆ. ಆದರೆ ಜಿಲ್ಲೆಯಲ್ಲಿ ಒಂದು ವರ್ಷದಲ್ಲಿ 319 ಶಿಶುಗಳು ಮರಣ ಹೊಂದಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಜಿಲ್ಲಾಸ್ಪತ್ರೆಯಲ್ಲಿ 9365 ಹೆರಿಗೆಗಳಾಗಿವೆ. ಶಿರಾ, ಪಾವಗಡ ಬಿಟ್ಟರೆ ಚಿಕ್ಕನಾಯಕನಹಳ್ಳಿ, ಗುಬ್ಬಿ, ಕೊರಟಗೆರೆ, ಕುಣಿಗಲ್‌, ತುರುವೇಕೆರೆಗಳಲ್ಲಿ ತೀರಾ ಕಡಿಮೆ ಹೆರಿಗೆಗಳಾಗುತ್ತಿವೆ. ಗುಬ್ಬಿ ತಾಲೂಕು ಆಸ್ಪತ್ರೆಯಲ್ಲಿ ಸಂಜೆ 4 ಗಂಟೆಯಾದರೆ ವೈದ್ಯರು ಇರಲ್ಲ. ಜಿಲ್ಲೆಯಲ್ಲಿ ಯಾವ ಸಮಸ್ಯೆಯಿಂದ ಶಿಶುಮರಣವಾಗುತ್ತಿದೆ ಎಂಬ ಮಾಹಿತಿ ನೀಡಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರೆಯುವಂತಾಗಬೇಕು ಎಂದು ಸೂಚಿಸಿದರು.

ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ ಯೋಜನೆ ಕಾರ್ಡ್‌ 3,73,960 ಫ‌ಲಾನುಭವಿಗಳಿಗೆ ವಿತರಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ 1,02,093, ಸೇವಾ ಸಿಂಧು ಕೇಂದ್ರಗಳಲ್ಲಿ 2,18,003 ತುಮಕೂರು 1 ಕೇಂದ್ರಗಳಲ್ಲಿ ಕಾರ್ಡ್‌ ವಿತರಿಸಲಾಗಿದೆ ಎಂದು ಸಭೆಗೆ ಡಿಎಚ್‌ಒ ಮಾಹಿತಿ ನೀಡಿದಾಗ, ಜಿಲ್ಲೆಯಲ್ಲಿ 28 ಲಕ್ಷ ಜನರಿದ್ದಾರೆ. ಇಲ್ಲಿಯವರೆಗೆ ಕೇವಲ 3.73 ಲಕ್ಷ ಕಾರ್ಡ್‌ ವಿತರಿಸಿದ್ದೀರಿ. ಶೀಘ್ರವೇ ಕಾರ್ಡ್‌ ವಿತರಿಸಿ ಎಂದು ಸಚಿವರು ಸೂಚಿಸಿದರು.

ಜಿಲ್ಲೆಯಲ್ಲಿ 381 ಭವನಗಳ ಪೈಕಿ 174 ಭವನಗಳು ಪೂರ್ಣಗೊಂಡಿದ್ದು, 70 ಭವನಗಳು ವಿವಿಧ ಪ್ರಗತಿಯಲ್ಲಿದ್ದು, 28 ಭವನಗಳ ನಿವೇಶನ ತಕರಾರಿನಲ್ಲಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಪ್ರೇಮ್‌ನಾಥ್‌ ತಿಳಿಸಿದರು.

Advertisement

10 ತಾಲೂಕಿನಲ್ಲಿ 112 ವಿದ್ಯಾರ್ಥಿನಿಲಯಗಳು ಕಾರ್ಯನಿರ್ವಹಿಸುತ್ತಿದ್ದು, ಈ ಪೈಕಿ 68 ಸ್ವಂತ ಕಟ್ಟಡ ಹೊಂದಿದ್ದು, ಪ್ರಸ್ತುತ 10 ವಿದ್ಯಾರ್ಥಿನಿಲಯಗಳ ಕಾಮಗಾರಿ ಪ್ರಗತಿಯಲ್ಲಿದೆ ಹಾಗೂ 32 ನಿವೇಶನಗಳು ಲಭ್ಯವಿರುತ್ತದೆ. ಶಿರಾ, ಗುಬ್ಬಿ ತಾಲೂಕುಗಳ 2 ವಿದ್ಯಾರ್ಥಿನಿಲಯಗಳಿಗೆ ನಿವೇಶನ ಲಭ್ಯವಾಗಿಲ್ಲ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ತಿಳಿಸಿದರು.

ಹೇಮಾವತಿ ನಾಲೆಯಿಂದ ಕುಣಿಗಲ್‌ ಕೆರೆಗೆ 395 ಎಂ.ಸಿ.ಎಫ್.ಟಿ ಪ್ರಮಾಣದಷ್ಟು ನೀರು ಹರಿಸಲಾಗುತ್ತಿದ್ದು, ಪ್ರಸ್ತುತ ಕೆರೆಯಲ್ಲಿ 533 ಎಂ.ಸಿ.ಎಫ್.ಟಿ ನೀರು ಸಂಗ್ರಹವಾಗಿರುತ್ತದೆ. ಒಟ್ಟು 49 ಕೆರೆಗಳ ಪೈಕಿ 21 ಕೆರೆಗಳಿಗೆ 130.49 ಎಂ.ಸಿ.ಎಫ್.ಟಿ ನೀರು ಪಂಪ್‌ ಮಾಡಲಾಗಿದೆ ಎಂದು ಹೇಮಾವತಿ ನಾಲಾ ಇಂಜಿನಿಯರ್‌ ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ, ಗೂಳೂರು-ಹೆಬ್ಬೂರು ನೀರು ಸಂಗ್ರಹದ ಮಟ್ಟ ಕಡಿಮೆಯಿದೆ. ಮುಂದಿನ ಮಾರ್ಚ್‌ನಲ್ಲಿ ಮತ್ತೆ ನೀರು ಹರಿಸಲಾಗುವುದು. ಅಲ್ಲಿಯವರೆಗೂ ಆ ವ್ಯಾಪ್ತಿಯ ಗ್ರಾಮಗಳಿಗೆ ನೀರಿನ ಸಮಸ್ಯೆಯಾಗುತ್ತದೆ. ಆದ್ದರಿಂದ ನೀರು ಹರಿಯಲು ಪೈಪ್‌ಲೈನ್‌ ಸಮಸ್ಯೆಯಾದರೆ ಅದನ್ನು ಬದಲಿಸಿ ನೀರು ಹರಿಸುವಂತೆ ನಾಲಾ ಇಂಜಿನಿಯರ್‌ ಬಾಲಕೃಷ್ಣಗೆ ಸೂಚಿಸಿದರು.

ಸ್ವತ್ಛ ಭಾರತ್‌ ಮಿಷನ್‌ ಯೋಜನೆಯಡಿ ಬಾಕಿಯಿರುವ ಶೌಚಗೃಹ ಕಾಮಗಾರಿ ಫೆಬ್ರವರಿಯೊಳಗೆ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಸಂಸದ ಜಿ.ಎಸ್‌.ಬಸವರಾಜು, ಶಾಸಕರಾದ ಜಿ.ಬಿ ಜ್ಯೋತಿಗಣೇಶ್‌, ಸತ್ಯನಾರಾಯಣ, ಬಿ.ಸಿ.ನಾಗೇಶ್‌, ವೀರಭದ್ರಯ್ಯ, ಶಾಸಕ ತಿಪ್ಪೇಸ್ವಾಮಿ, ಜಿಪಂ ಅಧ್ಯಕ್ಷೆ ಲತಾ, ಉಪಾಧ್ಯಕ್ಷೆ ಶಾರದಾ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಕೇಶ್‌ಸಿಂಗ್‌, ಜಿಲ್ಲಾಧಿಕಾರಿ ಡಾ. ರಾಕೇಶ್‌ಕುಮಾರ್‌, ಎಸ್‌ಪಿ ಡಾ.ಕೋನ. ವಂಶಿಕೃಷ್ಣ, ಜಿಪಂ ಸಿಇಒ ಶುಭಾ ಇದ್ದರು.

ಚಿರತೆ ಸೆರೆ ಹಿಡಿಯಿರಿ: ಜಿಲ್ಲೆಯಲ್ಲಿ ಚಿರತೆ ದಾಳಿ ಹೆಚ್ಚಾಗಿದ್ದು, ನರಹಂತಕ ಚಿರತೆ ಸೆರೆ ಹಿಡಿಯಬೇಕು ಎಂದು ಸಚಿವರು ತಿಳಿಸಿದಾಗ ಉತ್ತರಿಸಿದ ಅರಣ್ಯ ಇಲಾಖೆ ಅಧಿಕಾರಿ ಗಿರೀಶ್‌, ಈಗಾಗಲೇ 30 ಬೋನ್‌ ಇಟ್ಟಿದ್ದು, ಬನ್ನೇರುಘಟ್ಟ ಅರಣ್ಯದಿಂದ ಬಂದಿರುವ 2 ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ನಡೆಯುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next