Advertisement

4 ವರ್ಷದ ಲಿಂಗಾನುಪಾತದಲ್ಲಿ 3,108 ಮಂದಿ ವ್ಯತ್ಯಾಸ !

02:38 AM Sep 19, 2019 | mahesh |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಿಂಗಾನುಪಾತ ಅಸಮತೋಲನ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಕಳೆದ 4 ವರ್ಷಗಳಲ್ಲಿ ಹುಟ್ಟಿದ ಗಂಡು ಮಕ್ಕಳ ಸಂಖ್ಯೆಗೆ ಹೋಲಿಸಿದರೆ ಹೆಣ್ಣು ಮಕ್ಕಳ ಸಂಖ್ಯೆ 3,108ರಷ್ಟು ಕಡಿಮೆಯಿದೆ. ಹೆಣ್ಮಕ್ಕಳ ಸಂಖ್ಯೆ ಕುಸಿಯುತ್ತಿರುವ ರಾಜ್ಯದ 4 ಜಿಲ್ಲೆ ಗಳಲ್ಲಿ ದ.ಕ. ಕೂಡ ಒಂದಾಗಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಕಾರಣ ಹುಡುಕಲು ಹೊರಟಿದೆ.

Advertisement

ಎಂ ಆ್ಯಂಡ್‌ ಸಿಟಿಎಸ್‌ ಮೂಲಕ ಸರ್ವೇ
2011ರ ಗಣತಿ ಪ್ರಕಾರ 1,000 ಗಂಡು ಮಕ್ಕಳಿಗೆ 946 ಹೆಣ್ಣು ಮಕ್ಕಳು ಜಿಲ್ಲೆಯಲ್ಲಿದ್ದರು. ಕಳೆದ 4 ವರ್ಷದಿಂದ ನಡೆಸುತ್ತಿರುವ ತಾಯಿ ಮತ್ತು ಮಗುವಿನ ಟ್ರ್ಯಾಕಿಂಗ್‌ ಸಿಸ್ಟಮ್‌ (ಎಂ ಆ್ಯಂಡ್‌ ಸಿಟಿಎಸ್‌) ಮೂಲಕ ನಡೆಸಿದ ಸಮೀಕ್ಷೆಯಲ್ಲೂ ಲಿಂಗಾನುಪಾತದಲ್ಲಿ ಭಾರೀ ವ್ಯತ್ಯಾಸವಿರುವುದು ಬೆಳಕಿಗೆ ಬಂದಿದೆ. 4 ವರ್ಷಗಳ ಅವಧಿಯಲ್ಲಿ 57,498 ಮಂದಿ ಗಂಡು ಮಕ್ಕಳಿಗೆ, ಕೇವಲ 54,390 ಮಂದಿ ಹೆಣ್ಣು ಮಕ್ಕಳು ಜನಿಸಿವೆ.

ಅನುಪಾತ ಕುಸಿಯಲು ಕಾರಣವೇನು?
ಹೆಣ್ಣು ಭ್ರೂಣ ಹತ್ಯೆ, ಏಕ ಮಗು ಹೊಂದುವ ಮನೋಭಾವ, ಮೊದಲ ಮಗು ಗಂಡು ಆದಲ್ಲಿ ಎರಡನೇ ಮಗು ಇಷ್ಟ ಪಡದಿರುವುದು, ವಿಭಕ್ತ ಕುಟುಂಬ ಪದ್ಧತಿ, ಹೆರಿಗೆಗಳ ಸಂಖ್ಯೆ ಇಳಿಮುಖ, ಹೆಣ್ಣು ಮಕ್ಕಳ ಮೇಲೆ ನಡೆಯುವ ಶೋಷಣೆ, ಅತ್ಯಾಚಾರ ದೌರ್ಜನ್ಯ, ಆರ್ಥಿಕ ಸ್ಥಿತಿ-ಗತಿ ಮತ್ತು ವರದಕ್ಷಿಣೆ ಮುಂತಾದ ಕಾರಣಗಳಿಗಾಗಿ ಹೆಣ್ಣು ಮಗು ಪಡೆಯಲು ಹಿಂದೇಟು ಹಾಕುವುದು ಕಾರಣವಾಗಿದೆ.

ಉಡುಪಿಯಲ್ಲಿ ಹೆಚ್ಚಳ
ಉಡುಪಿ ಜಿಲ್ಲೆಯಲ್ಲಿ 2017-18ರಲ್ಲಿ 1000 ಗಂಡು ಮಕ್ಕಳಿಗೆ 927 ಹೆಣ್ಣು ಮಕ್ಕಳು ಇದ್ದರೆ, 2018-19ರಲ್ಲಿ ಈ ಅನುಪಾತ 973 ಆಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಲಿಂಗಾನುಪಾತ ಹೆಚ್ಚಳವಾಗಿದೆ. ಉಡುಪಿ ತಾಲೂಕಿನಲ್ಲಿ ಒಟ್ಟು 42, ಕುಂದಾಪುರದಲ್ಲಿ 19, ಕಾರ್ಕಳದಲ್ಲಿ 11 ಸ್ಕ್ಯಾನಿಂಗ್‌ ಸೆಂಟರ್‌ಗಳಿವೆ. ಯಾವುದೇ ಸ್ಕ್ಯಾನಿಂಗ್‌ ಸೆಂಟರ್‌ಗಳಲ್ಲಿ ಹೆಣ್ಣು ಭ್ರೂಣ ಪತ್ತೆ ಪ್ರಕರಣಗಳಿಲ್ಲ.

150 ಸ್ಕ್ಯಾನಿಂಗ್‌
ಸೆಂಟರ್‌ಗಳ ಮೇಲೆ ನಿಗಾ ಜಿಲ್ಲೆಯಲ್ಲಿ ಒಟ್ಟು 150 ಸ್ಕ್ಯಾನಿಂಗ್‌ ಸೆಂಟರ್‌ಗಳ ಮೇಲೆ ಏಕಾಏಕಿ ದಾಳಿ ನಡೆಸಲಾಗುತ್ತಿದೆ. ಮಂಗಳೂರು-114, ಬಂಟ್ವಾಳ-9, ಬೆಳ್ತಂಗಡಿ-11, ಪುತ್ತೂರು-15, ಸುಳ್ಯ-5 ಸ್ಕ್ಯಾನಿಂಗ್‌ ಸೆಂಟರ್‌ಗಳು ಕಾರ್ಯಾಚರಿಸುತ್ತಿವೆ. ಎಲ್ಲ ಸ್ಕ್ಯಾನಿಂಗ್‌ ಸೆಂಟರ್‌ಗಳಲ್ಲಿ ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಮಾಡುವುದು ಕಾನೂನು ಬಾಹಿರ; ಇಲ್ಲಿ ಭ್ರೂಣ ಲಿಂಗ ಪತ್ತೆ ಮಾಡಲಾಗುವುದಿಲ್ಲ ಎಂಬುದಾಗಿ ಬೋರ್ಡ್‌ ಹಾಕಿರಬೇಕು. ಇಂತಹ ಬೋರ್ಡ್‌ ಕಂಡು ಬಂದಿದೆ ಎಂದು ಕುಟುಂಬ ಕಲ್ಯಾಣ ಅಧಿಕಾರಿ ಡಾ| ಸಿಕಂದರ್‌ ಪಾಷಾ ತಿಳಿಸಿದ್ದಾರೆ.

Advertisement

ಕಾರ್ಯಾಚರಣೆ ನಿರಂತರ
ದ.ಕ. ಜಿಲ್ಲೆಯಲ್ಲಿ ಲಿಂಗಾನುಪಾತ ಕುಸಿಯುತ್ತಿರುವುದಕ್ಕೆ ಸ್ಪಷ್ಟ ಕಾರಣ ಹೇಳಲಾಗದು. ಸ್ಕ್ಯಾನಿಂಗ್‌ ಸೆಂಟರ್‌ಗಳ ಮೇಲೆ ನಿರಂತರ ನಿಗಾ ಇಡಲಾಗುತ್ತಿದೆ.
-ಡಾ| ರಾಮಕೃಷ್ಣ ರಾವ್‌, ದ.ಕ. ಆರೋಗ್ಯಾಧಿಕಾರಿ

ಉಡುಪಿ ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಹೆಣ್ಣು ಮಕ್ಕಳ ಜನನ ಸಂಖ್ಯೆ ಹೆಚ್ಚಿದೆ. ಇನ್ನೂ ಹೆಚ್ಚಲು ಆರೋಗ್ಯ ಇಲಾಖೆ ಶ್ರಮಿಸುತ್ತಿದೆ.
– ಡಾ| ಅಶೋಕ್‌, ಉಡುಪಿ ಆರೋಗ್ಯಾಧಿಕಾರಿ

  • ಧನ್ಯಾ ಬಾಳೆಕಜೆ
Advertisement

Udayavani is now on Telegram. Click here to join our channel and stay updated with the latest news.

Next