Advertisement

ರಿಮ್ಸ್‌ನಿಂದ 300 ಹಾಸಿಗೆ ಆಸ್ಪತ್ರೆಗೆ ಪ್ರಸ್ತಾವನೆ

02:54 PM Jul 24, 2018 | Team Udayavani |

ರಾಯಚೂರು: ಇಲ್ಲಿನ ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಾಸಿಗೆಗಳ ಕೊರತೆ ಕಾಡುತ್ತಿದೆ. ಈ ಕಾರಣಕ್ಕೆ ಆಡಳಿತ ಮಂಡಳಿ ಮತ್ತೂಂದು 300 ಹಾಸಿಗೆಗಳ ಆಸ್ಪತ್ರೆ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಸರ್ಕಾರದಿಂದಲೂ ಸಕಾರಾತ್ಮಕ ಸ್ಪಂದನೆ ದೊರಕಿದೆ ಎಂಬ ಮಾಹಿತಿ ಲಭ್ಯವಾಗಿದೆ.

Advertisement

ಈಗಾಗಲೇ ರಿಮ್ಸ್‌ನಲ್ಲಿ 550 ಬೆಡ್‌ಗಳಿವೆ. ಆದರೆ, ಕೆಲವೊಮ್ಮೆ ರೋಗಿಗಳ ಸಂಖ್ಯೆ ಹೆಚ್ಚಾದಾಗ ಸಮಸ್ಯೆ ಎದುರಿಸುವಂತಾಗುತ್ತದೆ. ಹೀಗಾಗಿ ಆಸ್ಪತ್ರೆ ಆಡಳಿತ ಸರ್ಕಾರದ ಪರವಾನಗಿ ಪಡೆದು ಇರುವ ಸ್ಥಳದಲ್ಲಿಯೇ ಹೊಂದಾಣಿಕೆ ಮಾಡಿಕೊಂಡು 600 ಬೆಡ್‌ಗಳವರೆಗೆ ವಿಸ್ತರಿಸಿದ್ದಾರೆ. ಅದಕ್ಕೂ ಮೀರಿ ಬೆಡ್‌ಗಳನ್ನು ಹೆಚ್ಚು ಮಾಡಬೇಕಾದಲ್ಲಿ ಸಿಬ್ಬಂದಿ, ವೈದ್ಯರು, ಮೂಲಭೂತ ಸೌಲಭ್ಯ, ವಾರ್ಡ್‌ಗಳು, ಔಷಧ ಸೇರಿದಂತೆ ಎಲ್ಲವೂ ಹೆಚ್ಚಿಸಬೇಕಾಗುತ್ತದೆ. ಅದಕ್ಕಿಂತ ಹೆಚ್ಚುವರಿ ಆಸ್ಪತ್ರೆ ನಿರ್ಮಿಸುವುದೇ ಸೂಕ್ತ ಎಂಬ ಕಾರಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಎಂಸಿಎಚ್‌ ವಿಭಾಗ: ಈಗಿನ ರೋಗಿಗಳ ಸಂಖ್ಯೆಗನುಗುಣವಾಗಿ 750 ಬೆಡ್‌ಗಳ ಬೇಡಿಕೆಯಿದೆ. ಮುಖ್ಯವಾಗಿ ಬಾಣಂತಿಯರು ಹಾಗೂ ಮಕ್ಕಳಿಗಾಗಿ ಬೆಡ್‌ಗಳ ಕೊರತೆ ಇದೆ. 90 ಬೆಡ್‌ಗಳಿದ್ದರೆ 180ಕ್ಕೂ ಅಧಿಕ ಬಾಣಂತಿಯರು ದಾಖಲಾಗುತ್ತಿದ್ದಾರೆ. ಹೀಗಾಗಿ ಸೂಕ್ಷ್ಮನಿಗಾ ಘಟಕಗಳಲ್ಲಿ ಒಂದೇ ಬೆಡ್‌ ಮೇಲೆ ಇಬ್ಬರು ಮಕ್ಕಳನ್ನು ಮಲಗಿಸುವ ಅನಿವಾರ್ಯತೆ ಸೃಷ್ಟಿಯಾಗುತ್ತಿದೆ. ಈ ಕಾರಣಕ್ಕೆ
300 ಬೆಡ್‌ಗಳ ಆಸ್ಪತ್ರೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ.

ಆದರೆ, ಸರ್ಕಾರ ಮೊದಲ ಹಂತದಲ್ಲಿ ಕನಿಷ್ಠ 150 ಬೆಡ್‌ಗಳ ಆಸ್ಪತ್ರೆ ನೀಡುವ ಸಾಧ್ಯತೆಗಳಿವೆ. 150 ಬೆಡ್‌ಗಳಲ್ಲಿ ಅರ್ಧದಷ್ಟು ಬಾಣಂತಿಯರಿಗೆ ಉಳಿದವುಗಳನ್ನು ಸಾಮಾನ್ಯ ರೋಗಿಗಳಿಗೂ ಬಳಸಿಕೊಳ್ಳಲು ಅವಕಾಶವಿರುತ್ತದೆ. ಸರ್ಕಾರದ ಪ್ರತಿನಿಧಿ ಕೂಡ ಈಚೆಗೆ ಪ್ರತಿಕ್ರಿಯೆ ನೀಡಿದ್ದು, ಪ್ರಸ್ತಾವನೆ ಕೈಗೆತ್ತಿಕೊಳ್ಳುವ ಬಗ್ಗೆ ಪ್ರತಿಕ್ರಿಯಿಸಿದ್ದಾರೆ ಎನ್ನುತ್ತಾರೆ ರಿಮ್ಸ್‌ ನಿರ್ದೇಶಕಿ.

50 ಸೀಟು ಹೆಚ್ಚಳ: ಈ ಮುಂಚೆ ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಎಂಬಿಬಿಎಸ್‌ ಗೆ 100 ಸ್ಥಾನಗಳಿದ್ದವು. ಹೀಗಾಗಿ ರೋಗಿಗಳ ತಪಾಸಣೆಗೂ ಸಮಸ್ಯೆಯಾಗುತ್ತಿತ್ತು. ಆದರೆ, ಕಳೆದ ವರ್ಷ ಅದನ್ನು 150ಕ್ಕೆ ಹೆಚ್ಚಿಸಲಾಗಿದೆ. ಇದರಿಂದ ವೈದ್ಯಕೀಯ ವಿದ್ಯಾರ್ಥಿಗಳು ಚಿಕಿತ್ಸೆ ನೀಡಲು ಲಭ್ಯರಿದ್ದು, ಹೆಚ್ಚುವರಿ ಬೆಡ್‌ಗಳನ್ನು ನೀಡಿದಲ್ಲಿ ಪರಿಸ್ಥಿತಿ ನಿಭಾಯಿಸಬಹುದು.

Advertisement

ಹುದ್ದೆಗಳ ಕೊರತೆ: ಒಂದೆಡೆ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಿಂದ ರೋಗಿಗಳು ಪರದಾಡುತ್ತಿದ್ದಾರೆ. ತಿಂಗಳಾಂತ್ಯಕ್ಕೆ ತಜ್ಞ ವೈದ್ಯರು ನಿಯೋಜನೆಗೊಳ್ಳಲಿದ್ದಾರೆ ಎಂದು ಈಚೆಗೆ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿ ತಿಳಿಸಿದ್ದರು. ಅದರಂತೆ ರಿಮ್ಸ್‌ನಲ್ಲೂ ಬೋಧಕ ಸಿಬ್ಬಂದಿ ಕೊರತೆ ಎದುರಾಗಿದೆ. ಹೀಗಾಗಿ 15 ಸಹಾಯಕ ಪ್ರಾಧ್ಯಾಪಕರು, 26 ಸಹಾಯಕರನ್ನು ನೀಡುವಂತೆ ಭಾರತೀಯ ವೈದ್ಯಕೀಯ ಮಂಡಳಿಗೆ ಮನವಿ ಮಾಡಲಾಗಿದೆ.

ರಿಮ್ಸ್‌ಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೂಲಭೂತ ಸೌಲಭ್ಯಗಳಿಗೂ ಬೇಡಿಕೆ ಹೆಚ್ಚುತ್ತಿದೆ. ಸರ್ಕಾರ 300 ಬೆಡ್‌ಗಳ ಆಸ್ಪತ್ರೆ ಮಂಜೂರು ಮಾಡಿದಲ್ಲಿ ಅನುಕೂಲವಾಗಲಿದೆ ಎಂಬುದು ಸಾರ್ವಜನಿಕರ ಒತ್ತಾಸೆ.

ಅಗತ್ಯಕ್ಕಿಂತ ಹೆಚ್ಚು ರೋಗಿಗಳು ಬರುತ್ತಿರುವ ಕಾರಣ ರಿಮ್ಸ್‌ನಲ್ಲಿ ಬೆಡ್‌ಗಳ ಕೊರತೆ ಕಾಡುತ್ತಿದೆ. ಹೀಗಾಗಿ 300 ಬೆಡ್‌ಗಳ ಆಸ್ಪತ್ರೆ ಮಂಜೂರು ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಈಗಿರುವ ಆಸ್ಪತ್ರೆ ಪಕ್ಕದ ಬಿ ಬ್ಲಾಕ್‌ನಲ್ಲಿ ಸ್ಥಳಾವಕಾಶವಿದ್ದು, ಅಲ್ಲಿಯೇ ಆಸ್ಪತ್ರೆ ನಿರ್ಮಿಸಲು ಉದ್ದೇಶಿಸಲಾಗಿದೆ. ಹಿಂದಿನ ಸರ್ಕಾರದಲ್ಲಿಯೇ ಪ್ರಸ್ತಾವನೆ ಸಲ್ಲಿಸಿದ್ದರೂ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಈಗಿನ ಸರ್ಕಾರ ಸಕಾರಾತ್ಮಕವಾಗಿ ಸ್ಪಂದನೆ ನೀಡಿದೆ. 
 ಡಾ| ಕವಿತಾ ಪಾಟೀಲ, ರಿಮ್ಸ್‌ ನಿರ್ದೇಶಕಿ

ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next