ಮುಂಬೈ: ಕ್ರಿಕಟ್ ದೇವರು, ದಾಖಲೆಗಳ ಸರದಾರ, ಮಾಸ್ಟರ್ ಬ್ಲಾಸ್ಟರ್, ಭಾರತ ರತ್ನ ಸಚಿನ್ ತೆಂಡೂಲ್ಕರ್ ಮೊದಲ ಅಂತಾರಾಷ್ಟ್ರೀಯ ಪಂದ್ಯವಾಡಿ ಇಂದಿಗೆ ಮೂವತ್ತು ವರ್ಷ. ಹೌದು 30 ವರ್ಷಗಳ ಹಿಂದೆ ಇನ್ನೂ ಮೀಸೆ ಮೂಡದ ಹುಡುಗ ಸಚಿನ್ ರಮೇಶ್ ತೆಂಡೂಲ್ಕರ್ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯಕ್ಕೆ ಮೈದಾನಕ್ಕೆ ಕಾಲಿಟ್ಟ ದಿನ. ಕ್ರಿಕೆಟ್ ನಲ್ಲಿ ಹೊಸ ಶಕೆಯೊಂದು ಆರಂಭವಾದ ದಿನ.
1989ರ ನವೆಂಬರ್ 15ರಂದು ಕರಾಚಿ ಕ್ರೀಡಾಂಗಣದಲ್ಲಿ ಸಚಿನ್ ಮೊದಲ ಟೆಸ್ಟ್ ಪಂದ್ಯವಾಡಿದರು. ಆಗಿನ್ನು ಸಚಿನ್ ಗೆ 16 ವರ್ಷ. ನಂತರ ನಡೆದಿದ್ದು ಈಗ ಇತಿಹಾಸ. ಮುಂದಿನ 24 ವರ್ಷಗಳು ಸಚಿನ್ ಬರೆದದ್ದೇ ದಾಖಲೆ ಎಂಬಂತೆ ಕ್ರಿಕೆಟ್ ಚಕ್ರವರ್ತಿಯಾಗಿ ಮರೆದಾಡಿದರು.
ಒಟ್ಟು 664 ಅಂತಾರಾಷ್ಟ್ರೀಯ ಪಂದ್ಯಗಳು,782 ಇನ್ನಿಂಗ್ಸ್ ಗಳು, 34357 ರನ್ ಗಳು, ನೂರು ಶತಕಗಳು, ಆರು ದ್ವಿಶತಕಗಳು, 74 ನಾಟ್ ಔಟ್ ಗಳು, 76 ಪಂದ್ಯಶ್ರೇಷ್ಠ ಪ್ರಶಸ್ತಿಗಳು, 201 ವಿಕೆಟ್ ಗಳು, ಕೋಟ್ಯಾಂತರ ಅಭಿಮಾನಿಗಳು.. ಹೀಗೆ ಮುಂದುವರಿಯುತ್ತದೆ ಸಚಿನ್ ಸಂಪಾದನೆ ಪಟ್ಟಿ.
ನವೆಂಬರ್ 15ರಂದು ಪಾಕ್ ವಿರುದ್ಧ ಪದಾರ್ಪಣೆ ಮಾಡಿದ ಸಚಿನ್, 2013ರ ನವೆಂಬರ್ 16ರಂದು ವಿಂಡೀಸ್ ವಿರುದ್ದ ತಮ್ಮ ತವರು ವಾಂಖೆಡೆಯಲ್ಲಿ ಅಂತಿಮ ಪಂದ್ಯವಾಡಿದರು.
ವಿದಾಯದ ನಂತರ ಫ್ರಾಂಚೈಸಿ ತಂಡಗಳ ಮೆಂಟರ್ ಆಗಿ, ಆಗಾಗ ಕಮೆಂಟೇಟರ್ ಆಗಿ ಸಚಿನ್ ಕಾಣಿಸಿಕೊಳ್ಳುತ್ತಿದ್ದಾರೆ.