ಕಣ್ಣೂರು: ಜಾಗತಿಕ ಉಗ್ರ ಸಂಘಟನೆ ಐಸಿಸ್‌ಗೆ ಸೇರ್ಪಡೆಯಾಗಿದ್ದ ಜಿಲ್ಲೆಯ ಯುವಕನೊಬ್ಬ ಸಿರಿಯಾದಲ್ಲಿ ಹತ್ಯೆಯಾಗಿದ್ದಾನೆ. ಜಿಲ್ಲೆಯ ವಲಪಟ್ಟಿನಂ ನಿವಾಸಿಯಾಗಿದ್ದ ಅಬ್ದುಲ್ ಮನಾಫ್(30) ಕಳೆದ ನವೆಂಬರ್‌ನಲ್ಲಿ ಸಾವಿಗೀಡಾಗಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಸಿರಿಯಾದಲ್ಲಿರುವ ಮನಾಫ್ನ ಸ್ನೇಹಿತ ಟೆಲಿಗ್ರಾಂ ಮೆಸೆಂಜರ್ ಆ್ಯಪ್ ಮೂಲಕ ಜ. 17ರಂದು ಈ ಸುದ್ದಿ ಕಳುಹಿಸಿರುವುದಾಗಿ ಹೇಳಿದರು.
“2017ರ ನವೆಂಬರ್‌ನಲ್ಲಿ ಸಿರಿಯಾದಲ್ಲಿ ನಡೆದ ಹೋರಾಟವೊಂದರಲ್ಲಿ ಅಬ್ದುಲ್ ಮನಾಫ್ ಸಾವಿಗೀಡಾಗಿರುವ ಸುದ್ದಿ ನಿಜ. ಈ ಸುದ್ದಿಯನ್ನು ಆತನ ಸ್ನೇಹಿತ ಖಯ್ನಾಂ ಕಳುಹಿಸಿದ್ದು, ಆತ ಕೂಡ ಸಿರಿಯಾದಲ್ಲಿ ಐಸಿಸ್ ಪರ ಹೋರಾಟ ನಡೆಸುತ್ತಿದ್ದಾನೆ’ ಎಂದು ಡೆಪ್ಯುಟಿ
ಸುಪರಿಂಟೆಂಡೆಂಟ್ ಆಫ್ ಪೊಲೀಸ್ ಪಿ.ಪಿ.ಸದಾನಂದನ್ ಹೇಳಿದ್ದಾರೆ.
ಕೇರಳದಲ್ಲಿ ನೆಲೆ ಹೊಂದಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ)ದ ಸ್ಥಳೀಯ ನಾಯಕನಾಗಿದ್ದ ಮನಾಫ್, ಐಸಿಸ್ ಸೇರುವುದಕ್ಕೆ ಮುನ್ನ ದಿಲ್ಲಿಯಲ್ಲಿ ಸಂಘಟನೆಯ ಕಚೇರಿ ಕಾರ್ಯದರ್ಶಿಯಾಗಿ ಕೂಡ ಕೊಂಚ ಕಾಲ ಕೆಲಸ ಮಾಡಿದ್ದ. ಅಲ್ಲದೆ 2009ರಲ್ಲಿ ಆತ ಸಿಪಿಎಂ ಕಾರ್ಯಕರ್ತರೊಬ್ಬರ ಹತ್ಯೆಯಲ್ಲಿ ಕೂಡ ಭಾಗಿಯಾಗಿದ್ದ.
ಕಣ್ಣೂರು ಜಿಲ್ಲೆಯಿಂದ ಸುಮಾರು 15 ಮಂದಿ ಈಚಿನ ವರ್ಷಗಳಲ್ಲಿ ಉಗ್ರಗಾಮಿ ಸಂಘಟನೆಯನ್ನು ಸೇರಿದ್ದರು. ಈ ಪೈಕಿ ಮನಾಫ್ ಸಹಿತ ಆರು ಮಂದಿ ಸಿರಿಯಾದಲ್ಲಿ ಹತರಾಗಿದ್ದಾರೆ. ಅಲ್ಲದೆ ಐವರನ್ನು ಸೆರೆಹಿಡಿದು ತನಿಖೆಗಾಗಿ ಎನ್‌ಐಎ ವಶಕ್ಕೆ ಒಪ್ಪಿಸಲಾಗಿದೆ. ಉಳಿದ ನಾಲ್ವರು ಸಿರಿಯಾದಲ್ಲಿದ್ದು ಐಸಿಸ್‌ನಲ್ಲೇ ಸಕ್ರಿಯರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.