ಬೆಂಗಳೂರು: ಕೋವಿಡ್-19 ಸೋಂಕು ವಿರುದ್ಧ ಹೋರಟಕ್ಕೆ ಕೋವಿಡ್ ನಿಧಿಗೆ ನೀಡಲು ರಾಜ್ಯದ ಸಚಿವರು, ಶಾಸಕರ ವೇತನದ ಶೇಕಡಾ 30ರಷ್ಟನ್ನು ಕಡಿತಗೊಳಿಸಲು ತೀರ್ಮಾನಿಸಲಾಗಿದೆ.
ಇಂದು ವಿಧಾನಸೌಧದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಮಾಧುಸ್ವಾಮಿ ಈ ಮಾಹಿತಿ ನೀಡಿದರು.
ಶಾಸಕರು ಹಾಗೂ ಸಚಿವರ ವೇತನದಲ್ಲಿ ಶೇಕಡಾ 30 ರಷ್ಟು ಕಡಿತಗೊಳಿಸಲು ನಿರ್ಧರಿಸಲಾಗಿದೆ. ಇದರಿಂದ ಉಳಿತಾಯವಾಗುವ ರೂ. 15 ಕೋಟಿ 36 ಲಕ್ಷಕ್ಕೂ ಹೆಚ್ಚಿನ ಹಣ ಕೋವಿಡ್-19 ನಿಧಿಗೆ ನೀಡಲು ತೀರ್ಮಾನ ಮಾಡಲಾಗಿದೆ. ಸುಗ್ರೀವಾಜ್ನೆ ಮೂಲಕ ಈ ಆದೇಶ ಜಾರಿ ಮಾಡಲಾಗುವುದು ಎಂದರು.
ರಾಜ್ಯದಲ್ಲಿ ಲಾಕ್ ಡೌನ್ 15 ದಿನ ವಿಸ್ತರಿಸಲು ಸಂಪುಟದ ಎಲ್ಲ ಸದಸ್ಯರು ಒತ್ತಾಯ ಮಾಡಿದ್ದಾರೆ. ಪ್ರಧಾನಿಯವರ ಜತೆ ನಾಳೆ ಚರ್ಚಿಸಿದ ಬಳಿಕ ಅಂತಿಮ ತೀರ್ಮಾನ ಮಾಡಲಾಗುವುದು ಎಂದು ಸಿಎಂ ಬಿಎಸ್ ವೈ ಹೇಳಿದರು
ಕುಡಿಯುವ ನೀರು ಪೂರೈಕೆಗಾಗಿ ,49 ಬರಪೀಡಿತ ತಾಲೂಕುಗಳಿಗೆ ತಲಾ 1 ಕೋಟಿ ರೂ.ಹಾಗೂ ಗ್ರಾಮೀಣ ಪಟ್ಟಣ ಪಂಚಾಯಿತಿಗಳಿಗೆ 50 ಲಕ್ಷ ರೂ ಬಿಡುಗಡೆ ಮಾಡಲಾಗುವುದು. ಜಿಎಸ್ ಟಿ ಪಾವತಿ ಅವಧಿಯನ್ನು ಜೂ.30ರವರೆಗೆ ವಿಸ್ತರಿಸಲಾಗಿದೆ. ಸಂಕಷ್ಟದಲ್ಲಿರುವ ಹೂವು ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡುವ ಸಂಬಂಧ ಸಮೀಕ್ಷೆ ನಡೆಸಿ ತೀರ್ಮಾನ ಮಾಡಲಾಗುವುದು ಎಂದು ಮುಖ್ಯಂಮತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು.
ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿ ಕಾರ್ಡ್ ಪಡೆಯದಿರುವವರಿಗೂ ಪಡಿತರ ನೀಡಲು ನಿರ್ಧಾರ ಮಾಡಲಾಗಿದೆ. ನಾಳೆಯೊಳಗೆ ಎಲ್ಲರಿಗೂ ಪಡಿತರ ವಿತರಿಸಲು ಸೂಚನೆ ನೀಡಲಾಗಿದೆ. ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಜತೆ ಚರ್ಚೆ ಮಾಡಲಾಗಿದೆ. ಬಿತ್ತನೆ ಬೀಜ, ರಸಗೊಬ್ಬರ ಕೊರತೆಯಾಗದಂತೆ ಎಚ್ಚರ ವಹಿಸಲಾಗಿದೆ ಎಂದು ಬಿಎಸ್ ವೈ ಹೇಳಿದರು.