Advertisement

ಸರ್ಕಾರಿ ವೈದ್ಯರಿಗೆ ಶೇ.30ರಷ್ಟು ಉತ್ತೇಜನ

07:07 AM Jun 13, 2019 | Lakshmi GovindaRaj |

ಬೆಂಗಳೂರು: ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಯೋಜನೆಯಡಿ ರಾಜ್ಯದ ಸರ್ಕಾರಿ ಆಸ್ಪತ್ರೆಗಳು ನೀಡುವ ಚಿಕಿತ್ಸೆಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ಪಾವತಿಸುವ ಶುಲ್ಕ ಮೊತ್ತದಲ್ಲಿ ಶೇ.30ರಷ್ಟನ್ನು ಸಂಬಂಧಪಟ್ಟ ವೈದ್ಯರು ಮತ್ತು ತಂಡಕ್ಕೆ ನೀಡಿ ಪ್ರೋತ್ಸಾಹಿಸಲು ಸರ್ಕಾರ ತೀರ್ಮಾನಿಸಿದೆ.

Advertisement

ವಿಕಾಸಸೌಧದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಆರೋಗ್ಯ ಸಚಿವ ಶಿವಾನಂದ ಪಾಟೀಲ್‌, ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಯೋಜನೆಯಡಿ ಸರ್ಕಾರಿ ಆಸ್ಪತ್ರೆಗಳು ನೀಡುವ ಚಿಕಿತ್ಸೆಗೆ ಟ್ರಸ್ಟ್‌ ಪಾವತಿಸುವ ಶುಲ್ಕದಲ್ಲಿ ಶೇ.30ರಷ್ಟನ್ನು ವೈದ್ಯರ ತಂಡಕ್ಕೆ ಉತ್ತೇಜನ ರೂಪದಲ್ಲಿ ನೀಡಲು ಮುಖ್ಯಮಂತ್ರಿಗಳು ಒಪ್ಪಿದ್ದಾರೆ.

ಉಳಿಕೆ ಶೇ.50 ಹಣವನ್ನು ಆಸ್ಪತ್ರೆಯ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ನಿರ್ವಹಣೆಗೆ ವಿನಿಯೋಗಿಸಿದರೆ, ಶೇ.20 ಹಣವನ್ನು ರಾಜ್ಯ ಸರ್ಕಾರ ಪಡೆಯಲಿದೆ. ಈ ಹಿಂದೆ ಶುಲ್ಕ ಮೊತ್ತದ ಶೇ.10ರಷ್ಟನ್ನು ಪ್ರೋತ್ಸಾಹ ರೂಪದಲ್ಲಿ ನೀಡಲಾಗುತ್ತಿತ್ತು ಎಂದು ಹೇಳಿದರು.

ಈವರೆಗೆ ಟ್ರಸ್ಟ್‌ ಪಾವತಿಸಿದ ಶುಲ್ಕ ಮೊತ್ತದಡಿ 147 ಕೋಟಿ ರೂ.ಸಂಗ್ರಹವಾಗಿದ್ದು, ಈ ಪೈಕಿ ಶೇ.30ರಷ್ಟು ಹಣವನ್ನು ನಿರ್ದಿಷ್ಟ ಚಿಕಿತ್ಸೆ ನೀಡಿದ ವೈದ್ಯರು ಹಾಗೂ ಸಂಬಂಧಪಟ್ಟ ಸಹಾಯಕರಿಗೆ ನೀಡಲು ನಿರ್ಧರಿಸಲಾಗಿದೆ. ಇದಕ್ಕೆ ಸೂಕ್ತ ಮಾರ್ಗಸೂಚಿಗಳನ್ನು ರೂಪಿಸಬೇಕಿದೆ. ಮುಖ್ಯವಾಗಿ ಜಿಲ್ಲಾ ಆಸ್ಪತ್ರೆ, ವೈದ್ಯಕೀಯ ಕಾಲೇಜು ಆಸ್ಪತ್ರೆಗಳಿಗಿಂತ ತಾಲೂಕು ಆಸ್ಪತ್ರೆ, ಇತರ ಆಸ್ಪತ್ರೆಗಳ ವೈದ್ಯರಿಗೆ ಉತ್ತೇಜನ ನೀಡಲು ಚಿಂತಿಸಲಾಗಿದೆ ಎಂದು ತಿಳಿಸಿದರು.

ನಿಫಾ ನಿಯಂತ್ರಣದಲ್ಲಿದೆ: ರಾಜ್ಯದಲ್ಲಿ ನಿಫಾ ನಿಯಂತ್ರಣದಲ್ಲಿದೆ. ಈವರೆಗೆ ಯಾವುದೇ ಪ್ರಕರಣ ವರದಿಯಾಗಿಲ್ಲ. ಕೇರಳದಲ್ಲಿ ನಿಫಾ ವರದಿಯಾದ ಹಿನ್ನೆಲೆಯಲ್ಲಿ ಚಾಮರಾಜನಗರ, ದಕ್ಷಿಣ ಕನ್ನಡ, ಕೊಡಗು, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರಿನಲ್ಲಿ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ನಿಯಂತ್ರಣಕ್ಕಾಗಿ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

Advertisement

ಆರೋಗ್ಯ ಇಲಾಖೆ ಆಯುಕ್ತ ಪಂಕಜ್‌ ಕುಮಾರ್‌ ಪಾಂಡೆ ಮಾತನಾಡಿ, ಅಗತ್ಯ ಔಷಧಗಳ ಪಟ್ಟಿಯಲ್ಲಿ ಅನಗತ್ಯವಾಗಿದ್ದ ಕೆಲ ಔಷಧಗಳನ್ನು ಪರಿಷ್ಕರಿಸಿ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಹಾಗೆಯೇ ಔಷಧ ಖರೀದಿ ಪ್ರಕ್ರಿಯೆಯಲ್ಲಿ ಅಕ್ರಮ ಆರೋಪ ಕೇಳಿ ಬಂದ ಪ್ರಕರಣಗಳಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಮ ಜರುಗಿಸಲಾಗಿದೆ ಎಂದು ಹೇಳಿದರು.

ಡೆಂಘೀ ಉಲ್ಬಣ: ಚಿಕೂನ್‌ ಗುನ್ಯಾ, ಮಲೇರಿಯಾ ಪ್ರಕರಣಗಳು ಕಳೆದ ವರ್ಷಕ್ಕೆ ಹೋಲಿಸಿದರೆ ಜನವರಿಯಿಂದೀಚೆಗೆ ಕಡಿಮೆಯಾಗಿವೆ. ಆದರೆ, ಡೆಂಘೀ ಪ್ರಕರಣಗಳು ಉಲ್ಬಣಿಸಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.32.64ರಷ್ಟು ಹೆಚ್ಚಾಗಿದೆ. ಮೇ ಅಂತ್ಯದವರೆಗೆ 1,130 ಪ್ರಕರಣ ವರದಿಯಾಗಿದ್ದು, ಯಾವುದೇ ಸಾವು ವರದಿಯಾಗಿಲ್ಲ. ಆದರೆ, ಚಿಕೂನ್‌ ಗುನ್ಯಾ ಶೇ.32.64ರಷ್ಟು ಕಡಿಮೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಮಂಗನ ಕಾಯಿಲೆ ನಿಯಂತ್ರಣ: ಮಂಗನ ಕಾಯಿಲೆ ಸದ್ಯ ನಿಯಂತ್ರಣದಲ್ಲಿದೆ. ಕಾಯಿಲೆ ಕಾಣಿಸಿಕೊಂಡ ಪ್ರದೇಶದಲ್ಲಿ ಲಸಿಕೆ ಹಾಕಲು ಐದು ಲಕ್ಷ ಲಸಿಕೆ ವಿತರಣೆಗೆ ನಿರ್ಧರಿಸಲಾಗಿದೆ. ಜುಲೈನಲ್ಲಿ ಒಂದು ಲಕ್ಷ, ಆಗಸ್ಟ್‌ನಲ್ಲಿ 75,000 ಲಸಿಕೆ ವಿತರಣೆ ಮಾಡಲಾಗುತ್ತದೆ ಎಂದು ಸಚಿವ ಶಿವಾನಂದ ಪಾಟೀಲ್‌ ಹೇಳಿದರು. ಲಸಿಕೆಯನ್ನು ಮೊದಲ ಎರಡು ತಿಂಗಳಿಗೊಮ್ಮೆ ಹಾಗೂ ನಂತರ ಆರನೇ ತಿಂಗಳಲ್ಲಿ ನೀಡಬೇಕಾಗುತ್ತದೆ. ಮಂಗನ ಕಾಯಿಲೆ ಕಾಣಿಸಿಕೊಂಡ ಸ್ಥಳದ ಸುತ್ತಲಿನ ಐದು ಕಿ.ಮೀ.ವ್ಯಾಪ್ತಿಯಲ್ಲಿರುವವರಿಗೆ ಲಸಿಕೆ ನೀಡಲಾಗುತ್ತದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next