ಬೆಂಗಳೂರು : ರಾಜ್ಯದಲ್ಲಿ ಶುಕ್ರವಾರದಿಂದ ಆರಂಭವಾಗಿರುವ ಪದವಿ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್, ಡಿಪ್ಲೊಮಾ ಮೊದಲಾದ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಮೊದಲ ದಿನವೇ ಸರಾಸರಿ ಶೇ.30ರಷ್ಟು ಹಾಜರಾತಿ ದಾಖಲಾಗಿದೆ.
ಈ ಎಲ್ಲ ಕೋರ್ಸ್‌ಗಳ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ನವೆಂಬರ್ ತಿಂಗಳಲ್ಲೇ ತರಗತಿಗಳು ಆರಂಭವಾಗಿದ್ದವು. ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯ ಮಾಡಿದ್ದರಿಂದ ಹಾಜರಾತಿ ತೀರ ಕಡಿಮೆಯಿತು.
ನಂತರ ದಿನಗಳಲ್ಲಿ ಹಾಜರಾತಿ ಪ್ರಮಾಣದಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ. ಆನ್ ಲೈನ್ ತರಗತಿಗಳು ನಡೆಯುತ್ತಿದ್ದರಿಂದ ಕಲಾ, ವಾಣಿಜ್ಯ ವಿಭಾಗದ ಬಹುತೇಕ ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗೆ ಹಾಜರಾಗುತ್ತಿದ್ದರು. ಶುಕ್ರವಾರ ಎಲ್ಲ ವಿದ್ಯಾರ್ಥಿಗಳಿಗೂ ತರಗತಿ ಆರಂಭವಾಗಿದ್ದು, ಕೋವಿಡ್ ಪರೀಕ್ಷೆ ಕಡ್ಡಾಯ ಮಾಡದೇ ಇರುವುದರಿಂದ ಮೊದಲ ದಿನವೇ ಉತ್ತಮ ಹಾಜರಾತಿ ದಾಖಲಾಗಿದೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಹುಬ್ಬಳ್ಳಿ: ಕೋವೀಶೀಲ್ಡ್ ಲಸಿಕೆ ಪಡೆದ ಕಿಮ್ಸ್ ವೈದ್ಯ ಡಾ. ನಾರಾಯಣ ಹೆಬಸೂರು
ಕಾಲೇಜು ಆರಂಭಕ್ಕೆ ಸಂಬಂಧಿಸಿದಂತೆ ಇಲಾಖೆಯಿಂದ ಪ್ರತ್ಯೇಕ ಎಸ್‌ಒಪಿ ಕೂಡ ಬಿಡುಗಡೆ ಮಾಡಲಾಗಿತ್ತು. ಆನ್‌ಲೈನ್ ಅಥವಾ ಆಫ್ಲೈನ್ ತರಗತಿಯಲ್ಲಿ ವಿದ್ಯಾರ್ಥಿ ಕಡ್ಡಾಯವಾಗಿ ಹಾಜರಾಗಬೇಕು. ಆನ್‌ಲೈನ್ ತರಗತಿಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಸಂಪರ್ಕ ತರಗತಿಗೆ ಬರಬಹುದಾಗಿದೆ ಎಂದು ಹೇಳಿತ್ತು. ಅಲ್ಲದೆ, ಕೋವಿಡ್ ಲಕ್ಷಣ ಇರುವ ವಿದ್ಯಾರ್ಥಿಗಳು ಬರಬಾರದು ಎಂದು ಹೇಳಿದ್ದರಿಂದ ಮೊದಲ ದಿನ ಶೇ.30ರಷ್ಟು ಹಾಜರಾತಿ ದಾಖಲಾಗಿದೆ ಎಂದು ಇಲಾಖೆ ತಿಳಿಸಿದೆ.
ಕಾಲೇಜು ಆರಂಭಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಎಲ್ಲ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಸೋಮವಾರದಿಂದ ವಿದ್ಯಾರ್ಥಿಗಳ ಹಾಜರಾತಿ ಪ್ರಮಾಣದಲ್ಲಿ ಇನ್ನಷ್ಟು ಏರಿಕೆಯಾಗಲಿದೆ. ಅಲ್ಲದೆ, ವಿದ್ಯಾರ್ಥಿಗಳಲ್ಲೂ ಕಾಲೇಜಿಗೆ ಬರಬೇಕು ಎಂಬ ತುಡಿತ ಹೆಚ್ಚುತ್ತಿದೆ ಎಂದು ಇಲಾಖೆಯ ನಿರ್ದೇಶಕ ಪ್ರೊ.ಎಸ್.ಮಲ್ಲೇಶ್ವರಪ್ಪ ಮಾಹಿತಿ ನೀಡಿದರು.