ಕೆ.ಆರ್.ನಗರ: ಪ್ರಯಾಣಿಕರ ಅನುಕೂಲಕ್ಕಾಗಿ ಕೆ.ಆರ್.ನಗರ ಬಸ್ ನಿಲ್ದಾಣದಿಂದ ಮೈಸೂರಿಗೆ ಪ್ರತಿ 30 ನಿಮಿಷಗಳಿಗೊಮ್ಮೆ ಬಸ್ ಸಂಚಾರ ಮಾಡಲಿದ್ದು, ಎಲ್ಲರೂ ಅದರ ಪ್ರಯೋಜನ ಪಡೆಯಬೇಕು ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಹೊಸದಾಗಿ ಸೇವೆ ಆರಂಭಿಸಿದ ಬಸ್ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದರು. ನಿತ್ಯ ಬೆಳಗ್ಗೆ 6 ರಿಂದ 11 ಗಂಟೆಯವರೆಗೆ ಮೈಸೂರಿಗೆ ತೆರಳುವ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗುವುದನ್ನು ಮನಗಂಡು ಈ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
30 ನಿಮಿಷಕ್ಕೊಂದು ಬಸ್ ಸಂಚಾರ: 6 ಸಾರಿಗೆ ಬಸ್‌ಗಳು ಬೆಳಿಗ್ಗೆ 6 ಗಂಟೆಯಿಂದ ಆರಂಭಿಸಿ, ರಾತ್ರಿ 9.15ರವರೆಗೆ ಪ್ರತೀ 30 ನಿಮಿಷಕ್ಕೆ ಒಂದರಂತೆ ಸಂಚಾರ ಮಾಡಲಿದ್ದು ಇದರಿಂದ ಪ್ರಯಾಣದ ಒತ್ತಡ ಕಡಿಮೆಯಾಗಲಿದೆ ಎಂದ ಶಾಸಕರು ಮುಂದಿನ ದಿನಗಳಲ್ಲಿ ತಾಲೂಕಿನಾದ್ಯಂತ ಮತ್ತಷ್ಟು ಬಸ್ ಸಂಚಾರ ಆರಂಭಿಸುವುದಾಗಿ ತಿಳಿಸಿದರು.
ನಾನು ಶಾಸಕನಾಗಿ ಚುನಾಯಿತನಾದ ನಂತರ ರಸ್ತೆ, ಕುಡಿಯುವ ನೀರು, ಬೀದಿ ದೀಪ ಸೇರಿದಂತೆ ಇತರ ಮೂಲಭೂತ ಸವಲತ್ತುಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇನೆ. ಮುಂದೆಯೂ ಜನರಿಗೆ ಅಗತ್ಯ ಅನುಕೂಲ ಕಲ್ಪಿಸಲು ಕೆಲಸ ಮಾಡುತ್ತೇನೆ. ಸಾಲಿಗ್ರಾಮ ತಾಲೂಕು ಕೇಂದ್ರವಾದ ನಂತರ ಪ್ರತೀ ಸೋಮವಾರ ಅಲ್ಲಿಯೂ ಸಾರ್ವಜನಿಕರ ಸಮಸ್ಯೆ ಆಲಿಸುತ್ತಿದ್ದೇನೆ ಎಂದರು.
ಆಕ್ಷೇಪ: ಇಂದಿನಿಂದ(ಬುಧವಾರ) ಕೆ.ಆರ್.ನಗರ ಮತ್ತು ಮೈಸೂರು ನಡುವೆ ಸಂಚರಿಸುವ ತಡೆರಹಿತ ಬಸ್ಸುಗಳ ದರವನ್ನು ಈಗಿರುವ 44 ರೂ.ಗಳಿಂದ 50 ರೂಪಾಯಿಗಳಿಗೆ ಏರಿಸಿರುವ ನಿರ್ಧಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಪ್ರಯಾಣಿಕರು ಇದರ ಜತೆಗೆ ಈ ಬಸ್ಸುಗಳಲ್ಲಿ ಬಸ್‌ಪಾಸ್ ಹೊಂದಿರುವ ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರಿಗೆ ಅವಕಾಶ ಕಲ್ಪಿಸದಿರುವ ಕ್ರಮವನ್ನು ಖಂಡಿಸಿದ್ದಾರೆ.
ಪುರಸಭೆ ಸದಸ್ಯ ಕೆ.ಪಿ.ಪ್ರಭುಶಂಕರ್, ಕೆ.ಎಲ್. ಜಗದೀಶ್, ಸಂತೋಷ್‌ಗೌಡ, ಮಂಜುಳಾ ಚಿಕ್ಕವೀರು, ತಾಲೂಕು ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ನಾಗಣ್ಣ, ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ಹೆಚ್.ಆರ್.ಮಧುಚಂದ್ರ, ಉಪಾಧ್ಯಕ್ಷ ಕಾಂತರಾಜು, ವಕ್ತಾರ ಕೆ.ಎಲ್.ರಮೇಶ್, ಮುಖಂಡ ಆಕಾಶ್ ಬಾಬು, ರುದ್ರೇಶ್, ಸೈಯದ್ ಅಸ್ಲಾಂ, ಮಹದೇಶ್, ಘಟಕ ವ್ಯವಸ್ಥಾಪಕ ಪಾಪನಾಯಕ ಮತ್ತಿತರರು ಹಾಜರಿದ್ದರು.
ಸಾರಿಗೆ ಅದಾಲತ್ 3 ತಿಂಗಳಿಗೊಮ್ಮೆ: ಸಾರಿಗೆ ಬಸ್‌ಗಳ ಸಂಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ದೂರುಗಳಿದ್ದಲ್ಲಿ ಅವುಗಳನ್ನು ಪ್ರಯಾಣಿಕರು ನನ್ನ ಗಮನಕ್ಕೆ ತಂದರೆ ಕೂಡಲೇ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಪ್ರತಿ ಮೂರು ತಿಂಗಳಿಗಳೊಮ್ಮೆ ಸಾರಿಗೆ ಅದಾಲತ್ ನಡೆಸುವುದಾಗಿ ಘೋಷಿಸಿದರು.